ಬೆಂಗಳೂರಿನ ಗಡಿಭಾಗದಲ್ಲಿರುವ ತಮಿಳುನಾಡಿನ ಹೊಸೂರಿನಲ್ಲಿ, ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಿಮಾಣವಾಗಬೇಕಿದೆ. ಅದರ ಸ್ಥಾಪನೆಗೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿವೆ. ಇನ್ನು ವಿಶೇಷ ಏನಂದ್ರೆ ಆ ಕೆಲಸಗಳಿಗೆ ಈಗ ಮತ್ತಷ್ಟು ವೇಗ ದೊರೆತಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನಿನ್ನೆ (ಏಪ್ರಿಲ್ 28) ಬೆಂಗಳೂರಿಗೆ ಭೇಟಿ ನೀಡಿದ್ದರು. ಕೆಂಪೇಗೌಡ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ ಮುಖ್ಯಸ್ಥರನ್ನು ಭೆಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಈ ಸಭೆಯಲ್ಲಿ ಬಿಐಎಎಲ್ ಸಿಇಒ ಹರಿ ಮಾರರ್ ಮತ್ತು ಸಂಸ್ಥೆಯ ಬಹುಪಾಲು ಹೂಡಿಕೆದಾರರಾದ ಫೇರ್‌ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್‌ನ ಸಂಸ್ಥಾಪಕ ಪ್ರೇಮ್ ವಾಟ್ಸಾ ಉಪಸ್ಥಿತರಿದ್ದರು. ಬಿಎಲ್‌ಎಲ್‌ನಲ್ಲಿ ಫೇರ್‌ಫ್ಯಾಕ್ಸ್‌ನ ಪಾಲು ಶೇಕಡಾ 74ರಷ್ಟಿದ್ದು, ಭಾರತದ ವಿದೇಶಿ ಬಂಡವಾಳದ ಪ್ರಮುಖ ಘಟಕವಾಗಿದೆ.
ಯೋಜನೆಯ ಹಿಂದೆ ತಂತ್ರವಿದೆ:
ಇನ್ನು ಹೊಸೂರು ವಿಮಾನ ನಿಲ್ದಾಣದ ಬಗ್ಗೆ ಮೊದಲ ವರದಿಗಳು ಜೂನ್ 2024ರಲ್ಲಿ ಹೊರಬಿದ್ದಿತ್ತು. ಆಗಲೇ ತಮಿಳುನಾಡು ಸರ್ಕಾರ ಬಿಎಲ್‌ಎಲ್‌ನೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿದುಬಂದಿತ್ತು. ವಾರ್ಷಿಕವಾಗಿ ಈ ಯೋಜನೆಯು ಸುಮಾರು ಮೂರು ಕೋಟಿ ಪ್ರಯಾಣಿಕರಿಗೆ ಸೇವೆ ನೀಡುವ ಸಾಮರ್ಥ್ಯ ಇದೆ ಎನ್ನಲಾಗಿತ್ತು. ಅಲ್ಲದೇ ಇದು 2,000 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಈ ಯೋಜನೆಗೆ ಬಿಎಲ್‌ಎಲ್‌ನ್ನು ಆಕರ್ಷಿಸಲು ತಮಿಳುನಾಡು ತೀವ್ರ ಯತ್ನ ಮಾಡುತ್ತಿದೆ. ತಮಿಳುನಾಡಿನ ಮಾಹಿತಿ ತಂತ್ರಜ್ಞಾನ ಸಚಿವ ಪಳನಿವೇಲ್ ತಿಯಾಗ ರಾಜನ್ ಅವರೂ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಬಿಐಎಎಲ್ ಒಪ್ಪಿಗೆ ಅಗತ್ಯ:
ಕೆಐಎ ಅನ್ನು ನಿರ್ವಹಿಸುತ್ತಿರುವ ಬಿಎಲ್‌ಎಲ್‌ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ 2004ರಲ್ಲಿ ರಿಯಾಯಿತಿ ಒಪ್ಪಂದವೊಂದಿದೆ. ಈ ಒಪ್ಪಂದದ ಪ್ರಕಾರ, ಕೆಐಎಯ 150 ಕಿಮೀ ವ್ಯಾಪ್ತಿಯೊಳಗೆ ಮೇ 2033ರ ತನಕ ಯಾವುದೇ ಹೊಸ ವಿಮಾನ ನಿಲ್ದಾಣ ಸ್ಥಾಪನೆಯನ್ನೂ ನಿರ್ಬಂಧಿಸಲಾಗಿದೆ. ಹೊಸೂರು ಈ ವ್ಯಾಪ್ತಿಯೊಳಗೇ ಬರುವುದರಿಂದ, ತಮಿಳುನಾಡು ಸರ್ಕಾರದ ಯೋಜನೆಕ್ಕೆ ಬಿಎಲ್‌ಎಲ್ ಅನುಮತಿ ಅಗತ್ಯವಾಗಿದೆ. ಮೂಲಗಳ ಪ್ರಕಾರ, ಫೇರ್‌ಫ್ಯಾಕ್ಸ್ ತನ್ನ ಹೂಡಿಕೆಯನ್ನು ವಿಸ್ತರಿಸಲು ಆಸಕ್ತಿ ಹೊಂದಿದ್ದು, ಸರ್ಕಾರವೂ ತನ್ನ ಯೋಜನೆಯನ್ನು ವೇಗವಿಲ್ಲಿಸಲು ಬಯಸುತ್ತಿದೆ. ಇದು ಎರಡು ಕಡೆಗೂ ಲಾಭದಾಯಕವಾಗುವ ಸನ್ನಿವೇಶವಾಗಿದೆ.
ಕೇಂದ್ರ ಸರ್ಕಾರದಿಂದ ಸಹಕಾರದ ಭರವಸೆ:
ಇತ್ತೀಚೆಗಷ್ಟೇ ರಾಜ್ಯಸಭೆಯಲ್ಲಿ ಉತ್ತರ ನೀಡಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಪ್ರಸ್ತಾವನೆಗೆ ಕೇಂದ್ರದಿಂದ ಸಹಕಾರವಿದೆ ಎಂದು ಹೇಳಿದರು. ಆದರೆ ಬಿಎಲ್‌ಎಲ್ ಜೊತೆಗಿನ ಅಸ್ತಿತ್ವದಲ್ಲಿರುವ ಒಪ್ಪಂದದ ಕಾರಣ ಯೋಜನೆಗೆ ಸವಾಲುಗಳಿವೆ ಎಂಬುದನ್ನೂ ಅವರು ಒಪ್ಪಿಕೊಂಡರು. ಈ ಹಿಂದೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಹೊಸೂರಿನ ಸುತ್ತಮುತ್ತಲ ಐದು ಭೂಭಾಗಗಳನ್ನು ಸಮೀಕ್ಷೆ ಮಾಡಿದ್ದು, ತಮಿಳುನಾಡು ಸರ್ಕಾರ ಶೂಲಗಿರಿ ಸಮೀಪದ ಎರಡು ಸ್ಥಳಗಳನ್ನು ಆಯ್ಕೆ ಮಾಡಿದೆ. ಇದರಲ್ಲಿ ಒಂದು ತನೇಜಾ ಏರೋಸ್ಪೇಸ್ ಕಂಪನಿಯ ದಕ್ಷಿಣಕ್ಕೆ, ಇನ್ನೊಂದು ಶೂಲಗಿರಿಯಿಂದ ಉತ್ತರಕ್ಕೆ ಇದೆ.
ಇತ್ತ ಕರ್ನಾಟಕ ಸರ್ಕಾರವೂ ಬೆಂಗಳೂರಿಗೆ ಇನ್ನೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಪ್ಲ್ಯಾನ್ ಮಾಡುತ್ತಿದೆ. ಕನಕಪುರ ರಸ್ತೆಯ ಎರಡು ಭೂಭಾಗಗಳು ಹಾಗೂ ನೆಲಮಂಗಲ-ಕುಣಿಗಲ್ ಮಾರ್ಗದ ಒಂದು ಭೂಭಾಗವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಪರಿಶೀಲಿಸಿದೆ. ಈ ಎರಡನೇ ವಿಮಾನ ನಿಲ್ದಾಣ ಅಭಿವೃದ್ಧಿಗೆ ಬಿಎಲ್‌ಎಲ್ ಸಹ ಆಸಕ್ತಿ ತೋರುತ್ತಿದೆ.
ಬಿಎಲ್‌ಎಲ್‌ನಲ್ಲಿ ಫೇರ್‌ಫ್ಯಾಕ್ಸ್‌ನ ಎರಡು ಉಪಘಟಕಗಳು ಪಾಲುದಾರರಾಗಿ ಶೇಕಡಾ 74ರಷ್ಟು ಹೂಡಿಕೆ ಹೊಂದಿವೆ: ಆಂಕಾರೇಜ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ಸ್ (43.6%) ಮತ್ತು FIH ಮಾರಿಷಸ್ ಇನ್ವೆಸ್ಟ್‌ಮೆಂಟ್ಸ್ (30.36%). ಉಳಿದ ಪಾಲುಗಳಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (KSIIDC) ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ತಲಾ ಶೇಕಡಾ 13ರಷ್ಟು ಪಾಲು ಹೊಂದಿವೆ.
ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯ ಕನಸು ತಮಿಳುನಾಡು ಸರ್ಕಾರದಿಂದ ಇದೀಗ ಗಂಭೀರ ಹಂತ ತಲುಪಿದ್ದು, ಬಿಎಲ್‌ಎಲ್ ಒಪ್ಪಿಗೆ ನಿರ್ಧಾರಾತ್ಮಕವಾಗಿರಬಹುದು. ಇದೇ ವೇಳೆ ಕರ್ನಾಟಕ ತನ್ನ ಎರಡನೇ ವಿಮಾನ ನಿಲ್ದಾಣ ಯೋಜನೆಗೆ ಚುರುಕು ತರುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ವಿಮಾನಯಾನ ಮ್ಯಾಪ್‌ನಲ್ಲೊಂದು ದೊಡ್ಡ ಬದಲಾವಣೆ ಕಂಡುಬರಲಿದೆಯೆಂಬ ನಿರೀಕ್ಷೆ ಇದೆ.


Click it and Unblock the Notifications