ರಾಜಧಾನಿ ಬೆಂಗಳೂರಿನಲ್ಲಿ ಒಂದು ಕೆರೆಯ ಪುನರುಜ್ಜೀವನಗೊಳಿಸುವುದು ಸಾಮಾನ್ಯವಾದ ಸಂಗತಿಯಲ್ಲ. ಒಂದು ಕೆರೆಗೆ ಮರು ಜೀವ ಕೊಡಬೇಕೆಂದರೆ ಕೋಟ್ಯಂತರ ರೂಪಾಯಿಗಳಷ್ಟು ಖರ್ಚಾಗುತ್ತದೆ. ಸರ್ಕಾರಿ ದಾಖಲೆಗಳ ಪ್ರಕಾರ ₹2 ರಿಂದ ₹3 ಕೋಟಿ ರೂಪಾಯಿ ವೆಚ್ಚ ತಗಲುತ್ತದೆ ಎನ್ನಬಹುದು. ಆದರೆ ಈಗ ನೀವು ಈ ವಿಷಯ ತಿಳಿದರೆ ಆಶ್ಚರ್ಯಗೊಳ್ಳುತ್ತೀರ. ಅದೇನೆಂದರೆ ಈಶಾನ್ಯ ಬೆಂಗಳೂರಿನ ಕಸ್ತೂರಿನಗರ ನಿವಾಸಿಗಳು ಅತೀ ಕಡಿಮೆ ಅಂದರೆ ಅತೀ ಕಡಿಮೆ ವೆಚ್ಚದಲ್ಲಿ ಕೆರೆಯ ಪುನರುಜ್ಜೀವನ ಗೊಳಿಸಿದ್ದಾರೆ.

ಹೌದು, ಕಸ್ತೂರಿನಗರ ನಿವಾಸಿಗಳು ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಿದ್ದಾರೆ. ಆಗದು ಎಂದು ಕೈಕಟ್ಟಿ ಕುಳಿತರೆ ಎಂಬುದನ್ನು ಈ ಮೂಲಕ ಸಾರಿದ್ದಾರೆ. ಕೇವಲ ₹30 ಲಕ್ಷ ವೆಚ್ಚದಲ್ಲಿ ಬಿ. ಚನ್ನಸಂದ್ರ ಕೆರೆಗೆ ಮರುಜೀವ ನೀಡಿದ್ದಾರೆ. ಎಲ್ಲರೂ ಒಟ್ಟಿಗೆ ಕೈ ಜೋಡಿಸಿ ಹಣ ಸಂಗ್ರಹಿಸಿದ್ದಾರೆ. ಕಡಿಮೆ ವೆಚ್ಚದಲ್ಲಿ ಕೆರೆಗೆ ಮರುಜೀವ ನೀಡಿದ್ದಾರೆ. ಕೋಟಿಗಳ ಲೆಕ್ಕಕ್ಕೆ ಹೋಲಿಸಿದರೆ ಇದು ನಿಜಕ್ಕೂ ಅತೀ ಕಡಿಮೆ ವೆಚ್ಚ ಎಂದು ಪರಿಗಣಿಸಬಹುದು.
ಅಂದಹಾಗೆ ಈ ಕೆರೆ 1978ರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಸಂಪೂರ್ಣವಾಗಿ ಒಣಗಿಬಿಟ್ಟಿತ್ತು. ನೀರಿಲ್ಲದೆ ಈ ಕೆರೆಗೆ ಜೀವವೇ ಇಲ್ಲದಂತಾಗಿತ್ತು. ಅಲ್ಲದೇ ಒಣಗಿದ ಕೆರೆಯಾಗಿದ್ದರಿಂದ ಜನರು ಬಂದು ಕಸ ಸುರಿಯುತ್ತಿದ್ದರು. ನಿಜಕ್ಕೂ ಇದೊಂದು ಕಸದ ತೊಟ್ಟಿಯಾಗಿತ್ತು. ವಾಹನ ಪಾರ್ಕಿಂಗ್ ಮಾಡಲು ಹಾಗೂ ಅಕ್ರಮ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿತ್ತು.
ಅಂದಹಾಗೆ ಈ ಕೆರೆ ಮೊದಲು 20 ಎಕರೆ ಪ್ರದೇಶವನ್ನು ಆವರಿಸಿಕೊಂಡಿತ್ತು ಮತ್ತು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿತ್ತು. ಆದರೆ ವರ್ಷಗಳ ಕಾಲ ನಿರ್ವಹಣೆ ಇಲ್ಲದೆ, ಇದು ಅರಣ್ಯ ಇಲಾಖೆ, ರೈಲ್ವೆ, BDA ಮತ್ತು BBMP ನಡುವಿನ ಆಡಳಿತ ಗೊಂದಲಕ್ಕೆ ಸಿಕ್ಕಿತು. ನಾನಾ ಇಲಾಖೆಗಳ ನಡುವೆ ಜಲಮೂಲದ ಹಕ್ಕು ಬದಲಾಯಿಸುತ್ತಲೇ ಹೋಗಿ, ಕೆರೆ ಸಂಪೂರ್ಣ ನಾಶದ ಅಂಚಿಗೆ ತಲುಪಿತು. ಅದರಿಂದ, ಈ ಕೆರೆಯನ್ನು ಉಳಿಸಿಕೊಳ್ಳುವುದು ಅನಿವಾರ್ಯ ಎಂಬ ಅರಿವು ಸ್ಥಳೀಯ ನಿವಾಸಿಗಳಲ್ಲಿ ಮೂಡಿತು. ಅವರ ನಿರ್ಧಾರ ಮತ್ತು ಪರಿಶ್ರಮವೇ ಕೆರೆಯ ಪುನರುಜ್ಜೀವನಕ್ಕೆ ದಾರಿಯಾಗಿತು.
ಇದೆಲ್ಲವನ್ನು ಗಮನಿಸಿದ ಕಸ್ತೂರಿನಗರ ನಿವಾಸಿಗಳು ಈ ಕೆರೆಯನ್ನು ಉಳಿಸಿಕೊಳ್ಳಬೇಕೆಂದು ಹೆಜ್ಜೆ ಇಟ್ಟರು. ಈ ಕೆರೆಯನ್ನು ಪುನಃಜೀವನಗೊಳಿಸಲು ನಿರ್ಧರಿಸಿದರು, ಏಕೆಂದರೆ ಇದು ಭೂಗರ್ಭ ಜಲಮಟ್ಟ ಹೆಚ್ಚಿಸಲು ವರ್ಷಕ್ಕೆ ಸುಮಾರು 20 ಕೋಟಿ ಲೀಟರ್ ನೀರನ್ನು ಸಂಗ್ರಹಿಸಬಹುದು. ನಿವಾಸಿಗಳು ತಮ್ಮ ಕಾಂಕ್ರೀಟ್ ಕಾಡಿನಲ್ಲಿ ಹಸಿರನ್ನು ಉಳಿಸಲು ಇಚ್ಛಿಸಿದರು ಮತ್ತು ಈ ಪ್ರಕ್ರಿಯೆಗೆ ಕೈ ಹಾಕಿದರು.
ಇನ್ನು 2019ರಲ್ಲಿ BDA ಬೆಂಗಳೂರಿನ ಎಲ್ಲಾ ಸರೋವರಗಳನ್ನು BBMPಗೆ ಹಸ್ತಾಂತರಿಸಿದಾಗ, ಬಿ. ಚನ್ನಸಂದ್ರ ಕೆರೆಯ ವಾಸ್ತವಿಕ ಗಾತ್ರದಲ್ಲಿ ಗೊಂದಲ ಉಂಟಾಯಿತು. ಹೀಗಾಗಿ BDA ತಪ್ಪಾಗಿ ಈ ಸರೋವರದ ಗಾತ್ರವನ್ನು 42 ಎಕರೆ ಎಂದು ದಾಖಲಿಸಿ, ಇದನ್ನು ಕಲ್ಯಾಣನಗರದ ಚನ್ನಸಂದ್ರ ಸರೋವರ ಎಂದು ತಪ್ಪಾಗಿ ಗುರುತಿಸಿತು. ಈ ದೋಷದ ಕಾರಣ BBMP ಈ ಕೆರೆಯನ್ನು ತನ್ನ ಮೇಲ್ಕೈಗೆ ತೆಗೆದುಕೊಳ್ಳಲು ನಿರಾಕರಿಸಿತು. ಇದರಿಂದಾಗಿಯೇ ನಿವಾಸಿಗಳು ಸ್ವಂತ ಹಣ ಸಂಗ್ರಹಿಸಿ ಸರೋವರದ ಸರಿಯಾದ ಗಾತ್ರವನ್ನು ಪತ್ತೆ ಹಚ್ಚಲು ಸಮೀಕ್ಷೆ ನಡೆಸಿದರು. ಅಂತಿಮವಾಗಿ, ಈ ಕೆರೆಯ ವಾಸ್ತವ ಗಾತ್ರ 6.2 ಎಕರೆ ಮತ್ತು ಇದು ಯಾವುದೇ ಅತಿಕ್ರಮಣ ಇಲ್ಲದ ಪ್ರದೇಶ ಎಂದು ದೃಢಪಟ್ಟಿತು. ಅರಣ್ಯ ಇಲಾಖೆ ಸಹಾಯಕ್ಕೆ ಬಂದ ನಂತರ, ಪುನರುಜ್ಜೀವನ ಪ್ರಕ್ರಿಯೆ ಪ್ರಾರಂಭವಾಯಿತು.
ನಿವಾಸಿಗಳ ಶ್ರಮ ಮತ್ತು ಕಾರ್ಯಯೋಜನೆ:
ಕೆರೆಯ ಪುನರುಜ್ಜೀವನಕ್ಕಾಗಿ ಪಣತೊಟ್ಟ ಕಸ್ತೂರಿನಗರದ 300ಕ್ಕೂ ಹೆಚ್ಚು ನಿವಾಸಿಗಳು ಸೇರಿ ಒಂದು ಗುಂಪು ರಚಿಸಿಕೊಂಡರು. ಹಂತ ಹಂತವಾಗಿ ಹಣ ಸಂಗ್ರಹಿಸಿದರು. ಪ್ರಾರಂಭದಲ್ಲಿ ₹2 ಲಕ್ಷ ರೂ. ಸಂಗ್ರಹಿಸಿ ಸುಲಭ ಕೆಲಸಗಳನ್ನು ಆರಂಭಿಸಿದರು. ಬಳಿಕ ₹6 ಲಕ್ಷ ರೂ. ತಂದು ಮುಖ್ಯ ರಸ್ತೆ ಮತ್ತು ಔಟರ್ ರಿಂಗ್ ರೋಡ್ ಪಕ್ಕ ಬೇಲಿ ಹಾಕಿದರು. ಸಣ್ಣ ಕೆಲಸಗಳಿಗೆ ಮತ್ತು ಇತರ ವೆಚ್ಚಗಳಿಗೆ ₹1-2 ಲಕ್ಷ ರೂಪಾಯಿ ಬಳಸಲಾಯಿತು. ಈ ಹೋರಾಟದಲ್ಲಿ Hands-On CSR ಎಂಬ ಎನ್‌ಜಿಒ ಸಹಕರಿಸಿದಾಗ ಇನ್ನಷ್ಟು ವೇಗವಾಯಿತು ಈ ಎನ್‌ಜಿಒನ ಸಿಇಒ ಗುರುನಂದನ್ ರಾವ್ ಅವರು, ಸಿಜಿಐ ಎಂಬ ಐಟಿ ಕಂಪನಿಯಿಂದ ₹20 ಲಕ್ಷ ರೂ. ಹಣಕಾಸು ಪಡೆಯಲು ಸಹಾಯ ಮಾಡಿದರು. 2024ರ ಜೂನ್ ವೇಳೆಗೆ, ನಿವಾಸಿಗಳು ಕಸದ ತೆರವು, ಗಿಡಗಳ ನೆಡುವಿಕೆ ಮೊದಲಾದ ಕೆಲಸಗಳನ್ನು ಪ್ರಾರಂಭಿಸಿದರು. ಅಕ್ಟೋಬರ್ 2024ರ ವೇಳೆಗೆ, ಕೆರೆಯ ಪುನರ್ ನಿರ್ಮಾಣದ ಪ್ರಮುಖ ಹಂತಗಳು ಪೂರ್ಣಗೊಂಡವು.
ಜೊತೆಗೆ ಹೂಳನ್ನು ತೆಗೆಯುವ ಮೂಲಕ ಸರೋವರ ಹಾಸಿಗೆ ಪುನಃ ಸ್ಥಾಪನೆಯಾಯಿತು. ಏರಿಗಳನ್ನು ಗಟ್ಟಿಯಾಗಿಸುವ ಕೆಲಸ, ಒಳಹರಿವು ಮತ್ತು ಹೊರಹರಿವಿನ ದುರಸ್ತಿ, ಪಕ್ಷಿಗಳಿಗೆ ದ್ವೀಪಗಳ ನಿರ್ಮಾಣ ಸೇರಿ ಒಂದೊಂದೇ ಕೆಲಸಗಳು ಮುಗಿದವು. ಸರ್ಕಾರದ ನಿರ್ಲಕ್ಷ್ಯದ ನಡುವೆಯೂ ನಿವಾಸಿಗಳು ತಮ್ಮ ಶ್ರಮ, ಸಮಯ ಮತ್ತು ಹಣದೊಂದಿಗೆ ಈ ಕೆರೆಯನ್ನು ಪುನಃ ಜೀವಂತಗೊಳಿಸಿದರು. ಇದು ನಿಸರ್ಗದ ಸಂರಕ್ಷಣೆಯಲ್ಲೂ, ನೀರಿನ ಸಂಗ್ರಹಣೆಯಲ್ಲೂ, ಪರಿಸರ ಸ್ನೇಹಿ ಜಾಗ ನಿರ್ಮಾಣದಲ್ಲೂ ಒಂದು ಮಹತ್ವದ ಹೋರಾಟವಾಯಿತು.
ಇನ್ನು ಬಿ. ಚನ್ನಸಂದ್ರ ಕೆರೆ ಈಗ ಮರುಜೀವನ ಪಡೆದುಕೊಂಡಿದ್ದು, ಭೂಗರ್ಭ ಜಲಮಟ್ಟವನ್ನು ಹೆಚ್ಚಿಸಲು, ಪರಿಸರವನ್ನು ರಕ್ಷಿಸಲು ಮತ್ತು ನಗರದ ಹಸಿರನ್ನು ಉಳಿಸಲು ಸಹಾಯ ಮಾಡುತ್ತಿದೆ. ಅಂದಹಾಗೆ ಬಿ. ಚನ್ನಸಂದ್ರ ಕೆರೆಯ ಪುನರುಜ್ಜೀವನ ಸಾಮಾಜಿಕ ಹೊಣೆಗಾರಿಕೆಯ ಶ್ರೇಷ್ಠ ಉದಾಹರಣೆ. ಈ ಕೆರೆಯನ್ನು ಉಳಿಸಲು ಸ್ಥಳೀಯ ನಿವಾಸಿಗಳು, ಎನ್‌ಜಿಒಗಳು ಮತ್ತು ದಾನಿಗಳು ಒಗ್ಗೂಡಿದಂತೆ ಕೆಲಸ ಮಾಡಿದ ಕಾರಣ, ಇಂದೀಗ ಇದು ಮತ್ತೆ ಜೀವ ತುಂಬಿಕೊಂಡಿದೆ. ಈ ಯಶಸ್ಸು ಇತರ ಹಾಳಾಗುತ್ತಿರುವ ಕೆರೆಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ಪುನಃ ಹಸಿರುಗೊಳಿಸಲು ಪ್ರೇರಣೆಯಾಗಿದೆ. ಇದು ಕೇವಲ ಜಲಮಟ್ಟ ಉಳಿಸುವ ಹೋರಾಟವಲ್ಲ, ಬದಲಾಗಿ ಪ್ರಕೃತಿಯೊಂದಿಗಿನ ನಮ್ಮ ಸಂಬಂಧವನ್ನು ಪುನಃಸ್ಥಾಪಿಸುವ ಪ್ರಯತ್ನವೂ ಆಗಿದೆ.
ಸಾಮಾನ್ಯ ನಾಗರಿಕರು, ಪರಿಸರ ಹಿತರಕ್ಷಕರು ಮತ್ತು ಖಾಸಗಿ ಸಂಸ್ಥೆಗಳ ಸಹಕಾರದಿಂದ ಈ ಕೆರೆಗೆ ಮರುಜೀವ ನೀಡಲು ಸಾಧ್ಯವಾಯಿತು. ಈ ಕೆರೆ ಅಳಿವಿನ ಅಂಚಿನಿಂದ ಮರಳಿ ಹಸಿರುಭೂಷಿತ ತಾಣವಾಗಿದೆ. ಪರಿಸರ ಪ್ರೇಮಿಗಳಿಗೊಂದು ಮಾದರಿಯಾಗಿದ್ದು, ಇತರ ಕೆರೆ ಪುನರುಜ್ಜೀವನ ಯೋಜನೆಗಳಿಗೂ ಪ್ರೇರಣೆ ನೀಡಿದೆ.
ಅಲ್ಲದೇ ಈ ಕೆರೆಯ ಮೂಲಕ ಸಾಕಷ್ಟು ಯಶಸ್ಸಿನ ಪಾಠಗಳನ್ನು ಹೇಳಬಹುದು. ಸರ್ಕಾರದ ಸಹಾಯವಿಲ್ಲದೆ ಕೂಡ, ಜನ ಸಾಮಾನ್ಯರ ಆಶಯ ಮತ್ತು ಶ್ರಮದಿಂದ ಒಂದು ಕೆರೆ ಮತ್ತೆ ಜೀವ ಪಡೆಯಬಹುದು. ಭೂಗರ್ಭ ಜಲಮಟ್ಟ ಉಳಿಸಬೇಕು ಎಂದರೆ, ಜಲಮೂಲಗಳ ರಕ್ಷಣೆಗೆ ಮುಂಚೂಣಿಯಲ್ಲಿರಬೇಕು. ಸ್ಥಳೀಯ ಸಮುದಾಯಗಳು ಒಗ್ಗೂಡಿ ಕಾರ್ಯಪ್ರವೃತ್ತರಾದಾಗ, ಯಾವುದೇ ಪರಿಸರ ಪುನಶ್ಚೇತನ ಸಾಧ್ಯ. ಕಾರ್ಪೊರೇಟ್ ಸಂಸ್ಥೆಗಳ ಸಿಎಸ್‌ಆರ್ ಅನುದಾನ ಮತ್ತು ಎನ್‌ಜಿಒಗಳ ಮಾರ್ಗದರ್ಶನ ಪರಿಸರ ರಕ್ಷಣೆಗೆ ದೊಡ್ಡ ಸಂಪತ್ತು ಎಂಬುದೆಲ್ಲ ಈ ಕೆರೆಯು ಹೇಳುವ ಯಶಸ್ಸಿನ ಪಾಠದ ಮೂಲಕ ತಿಳಿಯಬಹುದಾಗಿದೆ.
ಇನ್ನು ಈ ಕೆರೆಯನ್ನು ಉಳಿಸಲು ಸ್ಥಳೀಯ ನಿವಾಸಿಗಳು ಸಹಯೋಗದ ಮನೋಭಾವ ತೋರಿದ್ದಕ್ಕಷ್ಟೇ ಈ ಯಶಸ್ಸು ಸಾಧ್ಯವಾಯಿತು. ಅದಕ್ಕಾಗಿ ನಿಧಿ ಸಂಗ್ರಹಿಸಿ ಶ್ರಮದಾನ ಮಾಡಿಸುವ ಮೂಲಕ ಇತರರಿಗೆ ಜಾಗೃತಿ ಮೂಡಿಸಿದರು. ಎಲ್ಲರೂ ಕೈಜೋಡಿಸಿ ಕೆಲಸ ಮಾಡಿದರೆ ಎಲ್ಲವೂ ಸಾಧ್ಯ ಎಂದು ತೋರಿಸಿದರು.


Click it and Unblock the Notifications