ದೇಶಾದ್ಯಂತ ಚರ್ಚೆಗೆ ಗುರಿಯಾಗಿರುವ ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಮಾಲಿನ್ಯ ಅಲ್ಲಿನ ಜನರ ಆರೋಗ್ಯವನ್ನಷ್ಟೇ ಹಾಳು ಮಾಡುತ್ತಿಲ್ಲ. ಬದಲಾಗಿ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ. ದೆಹಲಿಗೆ ಭೇಟಿ ನೀಡಬೇಕಿದ್ದ ಲಕ್ಷಾಂತರ ಪ್ರವಾಸಿಗರು, ಸಾವಿರಾರು ಹೂಡಿಕೆದಾರರು, ವ್ಯಾಪಾರಸ್ಥರು ಪ್ರವಾಸವನ್ನೇ ರದ್ದುಗೊಳಿಸುತ್ತಿದ್ದಾರೆ ಅಥವಾ ಅವಧಿ ಮೊಟಕುಗೊಳಿಸುತ್ತಿದ್ದಾರೆ.
ಹೀಗಾಗಿ ವಾಯು ಮಾಲಿನ್ಯ ದೆಹಲಿಯ ಜನರ ಆರೋಗ್ಯವನ್ನಷ್ಟೇ ಹಾಳು ಮಾಡುತ್ತಿಲ್ಲ. ಜೊತೆಗೆ ಪ್ರವಾಸೋದ್ಯಮದ ಮೂಲಕ ಬರಬೇಕಿದ್ದ ಆದಾಯಕ್ಕೂ ಕತ್ತರಿ ಬೀಳುತ್ತಿದೆ. ಜೊತೆಗೆ ವ್ಯಾಪಾರ-ವಹಿವಾಟಿಗೂ ಪೆಟ್ಟು ನೀಡಿದೆ.
ರಾಜಧಾನಿಯನ್ನು ದೆಹಲಿಯಿಂದ ಸ್ಥಳಾಂತರಿಸಿ: ನೆಟಿಜನ್‌ಗಳ ಸಲಹೆ
ಯಾತ್ರಾ ಆನ್‌ಲೈನ್ ಬುಕ್ಕಿಂಗ್ ಸೈಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರತ್ ಧಾಲ್ ಪ್ರಕಾರ, ದೆಹಲಿಗೆ ಬರುವ ಪ್ರವಾಸಿಗರು ಹಾಗೂ ವ್ಯಾಪಾರಸ್ಥರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆಯಂತೆ. ಅದರಲ್ಲೂ ಅಕ್ಟೋಬರ್ ಇಪ್ಪತ್ತೇಳರಂದು ದೀಪಾವಳಿ ಹಬ್ಬದ ನಂತರವಂತೂ ವಾಯು ಮಾಲಿನ್ಯ ಮತ್ತಷ್ಟು ಹೆಚ್ಚಾಗಿದ್ದು, ಪ್ರವಾಸಿಗರು ಹಾಗೂ ವ್ಯಾಪಾರಸ್ಥರು ದೆಹಲಿಗೆ ಭೇಟಿ ನೀಡುವುದನ್ನು ಮುಂದೆ ಹಾಕುತಿದ್ದಾರೆ.
ದೀಪಾವಳಿ ಹಬ್ಬದಂದು ಎಲ್ಲೆಡೆ ಪಟಾಕಿ ಸಿಡಿತ ಹಾಗೂ ದೆಹಲಿ ನಗರದ ಸುತ್ತ ಮುತ್ತ ರೈತರು ತ್ಯಾಜ್ಯಗಳಿಗೆ ಬೆಂಕಿ ಹಚ್ಚಿದ ಪರಿಣಾಮ ವಾಯು ಮಾಲಿನ್ಯ ದ್ವಿಗುಣಗೊಂಡಿದೆ. ಹೀಗಾಗಿ ವ್ಯಾಪಾರದ ಸಲುವಾಗಿ ದೆಹಲಿಗೆ ಭೇಟಿ ನೀಡುವ ವ್ಯಾಪಾರಸ್ಥರು ಹಾಗೂ ಪ್ರವಾಸಿಗರು ತಮ್ಮ ನಿಗದಿತ ಪ್ರವಾಸದ ದಿನಾಂಕ ಕ್ಯಾನ್ಸಲ್ ಮಾಡುತ್ತಿದ್ದಾರೆ.
ಹಿಮಾಲಯ, ರಾಜಸ್ಥಾನದ ಕಡೆಗೆ ಪ್ರವಾಸಿಗರು
ದೆಹಲಿಯ ಬದಲಿಗೆ ಹಿಮಾಲಯದ ಗಿರಿಧಾಮಗಳು, ರಾಜಸ್ಥಾನದ ಥಾರ್ ಮರುಭೂಮಿ ಮುಂತಾದ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ದೆಹಲಿಯ ಪ್ರಖ್ಯಾತ ಕುತುಬ್ ಮಿನಾರ್ ಮತ್ತು ಕೆಂಪು ಕೋಟೆ ನೋಡಲು ಬರುವ ಪ್ರವಾಸಿಗರ ಸಂಖ್ಯೆ ಕುಸಿತ ಕಂಡಿದೆ. ದೆಹಲಿಯಲ್ಲಿ ಸದ್ಯಕ್ಕೆ ವಾಯುಮಾಲಿನ್ಯ ಪ್ರಮಾಣ ಕಳೆದ ವಾರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಈ ಮಾಲಿನ್ಯದಿಂದಾಗಿ ಪಾರ್ಶ್ವವಾಯು, ಹೃದ್ರೋಗ ಮತ್ತು ಶ್ವಾಸಕೋಶದ ಕ್ಯಾನ್ಸರ್ ತಂದೊಡ್ಡಬಲ್ಲ ಸಮಸ್ಯೆಯನ್ನು ಹುಟ್ಟು ಹಾಕಿದೆ.
ಕೃಷಿ ತ್ಯಾಜ್ಯ ಸುಡುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ
ಈಗಾಗಲೇ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಮಾಲಿನ್ಯ ತಗ್ಗಿಸಲು ಅನೇಕ ಕ್ರಮಗಳನ್ನು ಕೈಗೊಂಡಿವೆ. ಖಾಸಗಿ ವಾಹನಗಳ ಬಳಕೆಯನ್ನು ತಗ್ಗಿಸುವುದು ಮತ್ತು ಕೈಗಾರಿಕೆಗಳನ್ನು ಮುಚ್ಚಿಸುವ ಪ್ರಯತ್ನವನ್ನು ನಡೆಸಿದ್ದಾರೆ. ಆದರೆ ಸುತ್ತಮುತ್ತಲಿನ ಪ್ರದೇಶದ ರೈತರು ಕೃಷಿ ತ್ಯಾಜ್ಯ ಸುಡುವುದನ್ನು ತಡೆಗಟ್ಟಲು ಸಾಧ್ಯವಾಗದೇ ಇರುವುದು ದೆಹಲಿಯಲ್ಲಿ ವಿಪರೀತ ಮಾಲಿನ್ಯಕ್ಕೆ ಕಾರಣವಾಗಿದೆ.
ಬೆಂಗಳೂರಿನಂಥ ನಗರಗಳಿಗೆ ಹೆಚ್ಚಿನ ಪ್ರವಾಸಿಗರು
ಟ್ರಾವೆಲ್ ವೆಬ್‌ಸೈಟ್ Ixigo ಪ್ರಕಾರ ಸಿಂಗಾಪುರ, ಥಾಯ್ಲೆಂಡ್ ಹಾಗೂ ಕತಾರ್‌ನಿಂದ ದೆಹಲಿ ಪ್ರವಾಸಿ ತಾಣಗಳ ಭೇಟಿ, ಬುಕ್ಕಿಂಗ್ ಹಾಗೂ ತಾಣಗಳ ಹುಡುಕಾಟ ಶೇಕಡಾ 44ರಷ್ಟು ಕಡಿಮೆಯಾಗಿದೆಯಂತೆ. ಮತ್ತೊಂದೆಡೆ ದೆಹಲಿ ಹೊರತುಪಡಿಸಿ ಬೇರೆಡೆಗೆ ಬುಕ್ಕಿಂಗ್ ಹಾಗೂ ಮಾಹಿತಿ ಪಡೆಯುವವರ ಸಂಖ್ಯೆ ಶೇಕಡಾ 25ರಷ್ಟು ಹೆಚ್ಚಾಗಿದೆ. ಇನ್ನು ಮುಂಬೈ ಮತ್ತು ಬೆಂಗಳೂರಿನಂತಹ ಮಹಾನಗರಗಳತ್ತ ಬರುವವರ ಸಂಖ್ಯೆ ಶೇಕಡಾ 20ರಷ್ಟು ಹೆಚ್ಚಾಗಿದೆ.
1 ಕೋಟಿ 10 ಲಕ್ಷದಷ್ಟು ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ
ದಿನೇ ದಿನೇ ಏರುತ್ತಿರುವ ವಾಯುಮಾಲಿನ್ಯ ಕೇಂದ್ರ ಸರ್ಕಾರದ ತಲೆನೋವನ್ನೂ ಹೆಚ್ಚಿಸಿದೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಕಳೆದ ವರ್ಷ 11 ಮಿಲಿಯನ್ ಅಂದರೆ 1 ಕೋಟಿ 10 ಲಕ್ಷದಷ್ಟು ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದಾರೆ. ಕೇಂದ್ರ ಸರ್ಕಾರವು ಪ್ರವಾಸೋದ್ಯಮವನ್ನು ಬೆಳೆಸಲು ಹೆಚ್ಚಿನ ಪ್ರಯತ್ನ ಮಾಡುತ್ತಿದೆ. ಆದರೆ ಇಂತಹ ಕೆಟ್ಟ ವಾಯುಮಾಲಿನ್ಯದಿಂದಾಗಿ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ನೀಡುತ್ತಿದೆ.


Click it and Unblock the Notifications