ಅದು ಚೀನಾ ಮೂಲದ ಕಂಪೆನಿ. ಭಾರತದಲ್ಲಿ ಕಾನೂನುಬಾಹಿರವಾಗಿ ಆನ್ ಲೈನ್ ಜೂಜಾಟ ನಡೆಸುತ್ತಿದೆ, ಈ ಹಗರಣದ ಮೌಲ್ಯ 1000 ಕೋಟಿ ರುಪಾಯಿಗೂ ಹೆಚ್ಚು ಎಂಬುದು ಆ ಕಂಪೆನಿ ಮೇಲಿನ ಆರೋಪ. ಇಂಥ ಕಂಪೆನಿಯಲ್ಲಿ ದೆಹಲಿಯ ಸಣ್ಣ ವರ್ತಕನೊಬ್ಬ ನಿರ್ದೇಶಕನಾಗಿದ್ದು ಹೇಗೆ ಎಂಬುದು ಈಗ ಪೊಲೀಸ್ ಅಧಿಕಾರಿಗಳ ಪಾಲಿನ ಪ್ರಶ್ನೆಯಾಗಿದೆ.
ಚೀನಾ ನಾಗರಿಕನೂ ಸೇರಿದಂತೆ ನಾಲ್ವರನ್ನು ಈ ಹಗರಣದಲ್ಲಿ ಬಂಧಿಸಲಾಗಿದೆ. ಅದರಲ್ಲಿ ನೀರಜ್ ಟುಲಿ ಕೂಡ ಒಬ್ಬ. ಈ ಚೀನಿ ಕಂಪೆನಿಗೆ ಮೂವರು ಭಾರತೀಯ ನಿರ್ದೇಶಕರಿದ್ದು, ಅದರಲ್ಲಿ ಆತನೂ ಇದ್ದಾನೆ. ಹೈದರಾಬಾದ್ ಪೊಲೀಸರಿಗೆ ಈಗ ನೀರಜ್ ಟುಲಿ ಪ್ರಶ್ನೆಯಾಗಿ ಕಾಡುತ್ತಲೇ ಇದ್ದಾನೆ.
ದಿನಸಿ ಅಂಗಡಿಯ ಧೀರಜ್ ಟುಲಿ
ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ತನ್ನ ಮನೆಗೆ ಹೊಂದಿಕೊಂಡಿರುವ ಮಳಿಗೆಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ನೀರಜ್. ಪೊಲೀಸರು ಈತನ ಮನೆ ಬಾಗಿಲಿಗೆ ಎಡತಾಕುವ ತನಕ ಅಂಥದ್ದೊಂದು ಕಂಪೆನಿ ಇದೆ. ಅದರಲ್ಲಿ ತಾನು ನಿರ್ದೇಶಕ ಎಂಬ ಸಂಗತಿಯೇ ಆತನಿಗೆ ಗೊತ್ತಿರಲಿಲ್ಲವಂತೆ. ಆದರೆ ತನ್ನ ಈಗಿನ ಸ್ಥಿತಿಗೆ ನೀರಜ್ ಆರೋಪ ಮಾಡುವುದು ನೆರೆ ಮನೆಯಾತ, ಚಾರ್ಟರ್ಡ್ ಅಕೌಂಟೆಂಟ್ ಪಿ. ಹೇಮಂತ್ ಮೇಲೆ. ಆತ ಹಲವು ದಾಖಲೆ ತಂದು ಸಹಿ ಮಾಡಿಸಿ, ತನ್ನ ಅರಿವಿಗೇ ಬಾರದೆ ವ್ಯವಹಾರದ ಭಾಗ ಮಾಡಲಾಗಿದೆ ಎಂಬುದು ನೀರಜ್ ಆರೋಪ. ಇನ್ನು ಹೇಮಂತ್ ತಲೆ ತಪ್ಪಿಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಚೀನಾ ಮೂಲದ ಕಂಪೆನಿಯಿಂದ ಆನ್ ಲೈನ್ ಜೂಜು
ನೀರಜ್ ದಿನಸಿ ಮಾರಾಟ ಮಳಿಗೆ ನಡೆಸುತ್ತಿರುವುದು ಹೌದು. ಆತನಿಗೆ ಆಡಿಟ್ ನಲ್ಲಿ ಸಹಾಯ ಮಾಡುವುದಾಗಿ ಹೇಳಿ, ಹೇಮಂತ್ ಸಹಿ ಪಡೆದುಕೊಂಡಿದ್ದನಂತೆ. ಆ ಮೂಲಕ ಚೈನೀಸ್ ಕಂಪೆನಿಗೆ ಡಮ್ಮಿ ನಿರ್ದೇಶಕನನ್ನಾಗಿ ಮಾಡಲಾಗಿತ್ತು ಎಂದು ನೀರಜ್ ಹೇಳುತ್ತಿದ್ದಾನೆ. ಆದರೆ ಆತನ ಮಾತನ್ನು ಮೇಲ್ಮಟ್ಟಕ್ಕೆ ನಂಬುವುದಕ್ಕೆ ಸಾಧ್ಯವಿಲ್ಲ. ಆತನನ್ನು ಇನ್ನಷ್ಟು ವಿಚಾರಣೆ ಮಾಡುತ್ತೇವೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಚೀನಾ ಮೂಲದ ಬೀಜಿಂಗ್ ಟಿ ಪವರ್ ನಡೆಸುತ್ತಿರುವ ಹಲವು ಕಂಪೆನಿಗಳಿಗೆ ನೀರಜ್ ನಿರ್ದೇಶಕ. ಅದಕ್ಕೆ ಸಂಬಂಧಿಸಿದಂತೆ ಹಲವು ದಾಖಲೆಗಳು ಲಭ್ಯವಾಗಿವೆ. ಒಟ್ಟು ಎಂಟು ಕಂಪೆನಿಗಳು 2019 ಅಥವಾ 2020ರಲ್ಲಿ ಭಾರತದಲ್ಲಿ ನೋಂದಣಿ ಆಗಿವೆ. ಎಲ್ಲವೂ ಬೀಜಿಂಗ್ ನ ಟಿ ಪವರ್ ಕಂಪೆನಿಗೆ ಸೇರಿವೆ. ರೆಫರೆನ್ಸ್ ಗಳ ಮೂಲಕ ಆನ್ ಲೈನ್ ಜೂಜಿಗೆ ಸದಸ್ಯತ್ವವನ್ನು ನೀಡಿದ್ದು, ಇ- ಪೇಮೆಂಟ್ ಗಳ ಮೂಲಕ ಹಣ ಪಡೆದಿವೆ.
ನೂರಾರು ಕೋಟಿ ರುಪಾಯಿ ಚೀನಾಗೆ ವರ್ಗಾವಣೆ
ಕಂಪೆನಿಗೆ ಇನ್ನಿಬ್ಬರು ನಿರ್ದೇಶಕರಿದ್ದು, ಧೀರಜ್ ಸರ್ಕಾರ್ ಮತ್ತು ಅಂಕಿತ್ ಕಪೂರ್ ಗೆ ಈ ವಂಚನೆ ಬಗ್ಗೆ ಗೊತ್ತಿದೆ. ಮುಖ್ಯ ಆರೋಪಿಗಳಾದ ಚೀನಾದ ನಾಗರಿಕ ಯಾಹ್ ಹೋ ಮತ್ತು ಹೇಮಂತ್ ಭಾರತದಲ್ಲಿ ಇರುವ ಈ ಯಾವ ಕಂಪೆನಿಗೂ ಅಧಿಕೃತವಾಗಿ ನಿರ್ದೇಶಕರಲ್ಲ. ಆದರೆ ಭಾರತದಲ್ಲಿ ಕಾರ್ಯ ಚಟುವಟಿಕೆಗಳನ್ನು ನಡೆಸಿ, ನೂರಾರು ಕೋಟಿ ರುಪಾಯಿಗಳನ್ನು ಚೀನಾಗೆ ವರ್ಗಾವಣೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದ ಹಾಗೆ, ವಿವಿಧ ದೇಶಗಳಲ್ಲಿ ಈ ವ್ಯವಹಾರಕ್ಕೆ ಎಷ್ಟು ಹಣ ಗಳಿಸುವ ಮಾರುಕಟ್ಟೆ ಇದೆ ಎಂಬುದನ್ನು ಇಂಗ್ಲಿಷ್ ಮಾತನಾಡುವ ಯಾಹ್ ಹೋ ಅಧ್ಯಯನ ನಡೆಸುತ್ತಿದ್ದ.


Click it and Unblock the Notifications