ನವದೆಹಲಿ, ಏಪ್ರಿಲ್ 16: ಇಸ್ರೇಲ್ ಜಗತ್ತಿನ ಸಣ್ಣ ರಾಷ್ಟ್ರಗಳ ಪಟ್ಟಿಯಲ್ಲಿದ್ದರೂ ಅತ್ಯಾಧುನಿಕ ಯುದ್ಧ ಸಾಮಗ್ರಿಗಳನ್ನು ಹೊಂದುವ ಮೂಲಕ ಅಷ್ಟೇ ಆಕ್ರಮಣಶಾಲಿ ದೇಶವೂ ಹೌದು. ಇಸ್ರೇಲ್ ತನ್ನ ತಂಟಗೆ ಬಂದ ಎಷ್ಟೇ ಬಲಿಷ್ಠ ರಾಷ್ಟ್ರವಾದರೂ ಎದೆಗುಂದದೆ ಹೋರಾಡುವ ಮನೋಸ್ಥೈರ್ಯ ಹೊಂದಿರುವ ದೇಶವೂ ಹೌದು. ಇಂಥಹ ಇಸ್ರೇಲ್ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು.
ನೆತನ್ಯಾಹು ಅವರು ಕಳೆದ 16 ವರ್ಷಗಳಿಂದ ಇಸ್ರೇಲ್ ದೇಶದ ಪ್ರಧಾನಿಯಾಗಿ ಆ ದೇಶವನ್ನು ಮುನ್ನಡೆಸುತ್ತಿದ್ದಾರೆ. ಈ ನಡುವೆ ಇಸ್ರೇಲ್ ಹಲವು ಬಾರಿ ಶತ್ರುಗಳಿಂದ ಆಕ್ರಮಣಕ್ಕೆ ಒಳಗಾಗಿದ್ದರೂ ಮತ್ತೆ ಈ ಮೊದಲಿನಂತೆ ಎದ್ದು ನಿಂತಿರುವ ದೇಶವಿದು. ಸದ್ಯ ಇಸ್ರೇಲ್ ದೇಶವು ಪ್ಯಾಲೆಸ್ಟೇನ್ ಮೇಲೆ ತನ್ನ ಯುದ್ಧವನ್ನು ಸಾರಿದ್ದು, ಗಾಜಾವನ್ನು ಈಗಾಗಲೇ ವಶಪಡಿಸಿಕೊಂಡಿದೆ. ಇದೀಗ ಮತ್ತೆ ಪಕ್ಕದ ಮತ್ತೊಂದು ಅರಬ್ ರಾಷ್ಟ್ರವಾದ ಇರಾನ್ ನಡುವೆ ಸಂಘರ್ಷ ಎದುರಾಗಿದ್ದು, ಮತ್ತೊಂದು ಯುದ್ಧಕ್ಕೆ ಸಜ್ಜಾಗುವ ಅನಿವಾರ್ಯತೆಯಲ್ಲಿ ಸಿಲುಕಿದೆ. ಈ ಎಲ್ಲ ಸವಾಲುಗಳ ನಡುವೆ ದೇಶವನ್ನು ಮುನ್ನಡೆಸುತ್ತಿರುವವರು ಬೆಂಜಮಿನ್ ನೆಹತ್ಯಾಹು ಅವರು.

1949ರಲ್ಲಿ ಇಸ್ರೇಲ್‌ನ ತೇಲ್ ಅವಿವ್‌ನಲ್ಲಿ ಜನಿಸಿರುವ ಬೆಂಜಮಿನ್ ಅವರು ಫಿಲಡಲ್‌ಫಿಯಾ ಹಾಗೂ ಜೆರುಸಲೇಂನಲ್ಲಿ ತಮ್ಮ ಬಾಲ್ಯವನ್ನು ಕಳೆದಿದ್ದಾರೆ. ಶೈಕ್ಷಣಿಕವಾಗಿಯೂ ಉತ್ತಮ ಅರ್ಹತೆಯನ್ನು ಪಡೆದುಕೊಂಡಿದ್ದು, ಅವರು ಎಂಐಟಿ ಡಿಗ್ರಿಯನ್ನು ಪಡೆದುಕೊಂಡಿದ್ದು, ಆರ್ಕಿಟೆಕ್ಚರ್‌ನಲ್ಲಿ ಪದವಿ ಹಾಗೂ ಬಿಸಿನೆಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.
1970ರಲ್ಲಿ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಬಳಿಕ ಇಸ್ರೇಲ್‌ಗೆ ವಾಪಾಸ್ ಹೋಗಿದ್ದಾರೆ. ಆ ಬಳಿಕ ಸಕ್ರಿಯ ರಾಜಕಾರಣಕ್ಕೆ ಸೇರಿಕೊಂಡರು. ಮೊದಲ ಬಾರಿಗೆ ಬೆಂಜಮಿನ್ ನೆತನ್ಯಾಹು ಅವರು 1996ರಿಂದ 1999ರವರೆಗೆ ಇಸ್ರೇಲ್‌ನ ಪ್ರಧಾನಿಯಾಗಿದ್ದರು. ಮುಂದೆ 2009ರಲ್ಲಿ ವಾಪಾಸ್ ದೇಶದ ಪ್ರಧಾನಿಯಾಗಿದ್ದು, ನಂತರ 2021ರವರೆಗೆ ಅಧಿಕಾರ ನಡೆಸಿದ್ದರು. ನಾಲ್ಕು ಅವಧಿಗೆ ಸತತ ಆಯ್ಕೆಯಾದ ಇಸ್ರೇಲ್‌ನ ಏಕೈಕ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು. ಅದಾದ ನಂತರ ಅವರು 2022ರಲ್ಲಿ ಮತ್ತೆ 6ನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಚಲಾಯಿಸುತ್ತಿದ್ದಾರೆ.
ಇಟಿ ನೌ ವರದಿಗಳ ಪ್ರಕಾರ, ಬೆಂಜಮಿನ್ ನೆತನ್ಯಾಹು ಅವರು 80 ಮಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಆಸ್ತಿಯನ್ನು ಹೊಂದಿದ್ದಾರೆ. ಆ ಮೂಲಕ ಬೆಂಜಮಿನ್ ಅವರು ಜಗತ್ತಿನ ಅತ್ಯಂತ ಶ್ರೀಮಂತ ಪ್ರಧಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಆಸ್ತಿಯು ವಾರ್ಷಿಕ ಶೇ.400ರಷ್ಟು ಏರಿಕೆಯಾಗಿದೆ.
ಬೆಂಜಮಿನ್ ಅವರು ತಮ್ಮ ಆಡಳಿತ ವೈಖರಿಯಿಂದಾಗಿ ಇಸ್ರೇಲ್ ಮಾತ್ರವಲ್ಲ ವಿಶ್ವದೆಲ್ಲೆಡೆ ಯಶಸ್ವಿ ನಾಯಕ ಎನ್ನುವ ಪಟ್ಟವನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗೆ, ತಮ್ಮ ದೇಶದ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿರುವುದಕ್ಕೆ ಪ್ರತಿಕಾರವಾಗಿ ಪ್ಯಾಲೆಸ್ಟೇನ್ ದೇಶದ ಮೇಲೆ ಯುದ್ಧವನ್ನೇ ಸಾರಿದ್ದಾರೆ. ಬೆಂಜಮಿನ್ ಅವರು ಭ್ರಷ್ಟಾಚಾರದ ಆರೋಪದ ಜತೆಗೆ ಅಮೆರಿಕದ ಜತೆಗೆ ಅತ್ಯುತ್ತಮ ಬಾಂಧವ್ಯ ಹೊಂದುವ ಮೂಲಕ ಯುದ್ಧಕ್ಕೆ ನೆರವು ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಟೀಕೆಗಳಿಗೂ ಗುರಿಯಾಗಿದ್ದಾರೆ.
ಆದರೆ, ತಮ್ಮ ವಿರುದ್ಧದ ಗಂಭೀರ ಆರೋಪಗಳ ನಡುವೆಯೂ ಇಸ್ರೇಲ್ ಜನತೆಯ ಪಾಲಿಗೆ ಬೆಂಜಮಿನ್ ನೆತನ್ಯಾಹು ಅತ್ಯಂತ ನೆಚ್ಚಿನ ಹಾಗೂ ಪ್ರಭಾವಶಾಲಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಎಷ್ಟೇ ಕಠಿಣ ಪರಿಸ್ಥಿತಿಯಲ್ಲಿ ಇಸ್ರೇಲ್‌ನ್ನು ಶತ್ರುಗಳ ದಾಳಿಯಿಂದ ರಕ್ಷಿಸಬಹುದೆಂಬ ಅಚಲ ನಂಬಿಕೆ ಅಲ್ಲಿನ ಜನರಲ್ಲಿದೆ. ಹೀಗಾಗಿ, ಬೆಂಜಮಿನ್ ನೆತನ್ಯಾಹು ವಿಶ್ವದ ಪ್ರಬಲ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.


Click it and Unblock the Notifications