ಈ ವರ್ಷದ ಮುಕ್ಕಾಲು ಪಾಲು ಕೊರೊನಾ ಬಿಕ್ಕಟ್ಟು ನುಂಗಿ ನೀರು ಕುಡಿದರೂ ವಿಶ್ವದ ಶತಕೋಟ್ಯಧಿಪತಿಗಳ ಆಸ್ತಿ ಮಾತ್ರ ದಾಖಲೆ ಪ್ರಮಾಣದಲ್ಲಿ ಏರಿಕೆ ಆಯಿತು. ತಂತ್ರಜ್ಞಾನ, ಆರೋಗ್ಯ, ಆವಿಷ್ಕಾರದ ಮೂಲಕ ವಿವಿಧ ವಲಯಗಳಲ್ಲಿ ಸದ್ದು ಮಾಡಿದ ಎಲಾನ್ ಮಸ್ಕ್ ಥರದವರ ಸಂಪತ್ತು ದಾಖಲೆ ಏರಿಕೆ ಕಂಡಿತು.
ಕಳೆದ ಜುಲೈ ಅಂತ್ಯದ ಹೊತ್ತಿಗೆ ಈ ಎಲ್ಲ ಶತ್ಯ ಕೋಟ್ಯಧಿಪತಿಗಳ ಒಟ್ಟು ಆಸ್ತಿ ಎಲ್ಲ ಸೇರಿ $ 10.2 ಲಕ್ಷ ಕೋಟಿ ದಾಟಿತ್ತು. ಈ ಸಂಖ್ಯೆಯು ಗೊತ್ತಾಗಿದ್ದು ಸ್ವಿಸ್ ಬ್ಯಾಂಕ್ ಯುಬಿಎಸ್ ಹಾಗೂ ಪ್ರೈಸ್ ವಾಟರ್ ಹೌಸ್ ಕೂಪರ್ಸ್ ಅಧ್ಯಯನದ ಮೂಲಕ. 2017ರಲ್ಲಿ ಶತಕೋಟ್ಯಧಿಪತಿಗಳ ಎಲ್ಲ ಆಸ್ತಿಯ ಮೊತ್ತ $ 8.9 ಲಕ್ಷ ಕೋಟಿ ಈ ತನಕದ ದಾಖಲೆ ಆಗಿತ್ತು. ಅದು ಈ ಬಾರಿ ಛಿದ್ರವಾಯಿತು.
"ಅವರ" ಸಂಪತ್ತಿನಲ್ಲಿ ಏರಿಕೆ ಆಗಿದೆ
ಜುಲೈ ಕೊನೆಗೆ ಡಾಲರ್ ಬಿಲಿಯನೇರ್ ಗಳ ಸಂಖ್ಯೆ 2189 ಎನ್ನಲಾಗಿದೆ. ಇದು 2017ಕ್ಕಿಂತ 31 ಹೆಚ್ಚು. ಈ ವರದಿಗಳನ್ನು ನೋಡಿದರೆ, ತಂತ್ರಜ್ಞಾನ, ಆರೋಗ್ಯ ರಕ್ಷಣೆ ಹಾಗೂ ಆವಿಷ್ಕಾರಗಳಲ್ಲಿ ತೊಡಗಿದವರ ಸಂಪತ್ತು ಸಿಕ್ಕಾಪಟ್ಟೆ ಏರಿಕೆ ಆಗಿರುವುದು ಕಂಡುಬರುತ್ತದೆ. ಅದೇ ಮನರಂಜನೆ ಅಥವಾ ರಿಯಲ್ ಎಸ್ಟೇಟ್ ನಲ್ಲಿ ಇರುವವರ ಸಂಪತ್ತು ಹೆಚ್ಚಾಗಿಲ್ಲ. ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಾದಾಗಲೂ ಹೀಗೆ ಸಂಪತ್ತು ಹೆಚ್ಚಳ ಆಗಿರುವುದು ಟೀಕೆಗೆ ಗುರಿ ಆಗಿದೆ. "ಕೊರೊನಾದಿಂದ ಬಿಲಿಯನೇರ್ ಗಳು ಒಳ್ಳೆ ಹಣ ಮಾಡುತ್ತಿದ್ದಾರೆ. ಸಾಮಾನ್ಯ ಜನರು ಸಾಲಕ್ಕೆ ಸಿಲುಕಿ, ವ್ಯವಹಾರಗಳು ಕುಸಿದು, ನಿರುದ್ಯೋಗ ಹೆಚ್ಚಾಗಿ, ಜನರು ನೊಂದುಕೊಂಡು, ತ್ಯಾಗ ಮಾಡುತ್ತಿದ್ದಾರೆ. ಆದರೆ ವಿಶ್ವದ ಶ್ರೀಮಂತರು ನಗುತ್ತಾ ಬ್ಯಾಂಕ್ ಕಡೆಗೆ ಸಾಗುತ್ತಿದ್ದಾರೆ," ಎಂದು ಬ್ರಿಟನ್ ಲೇಬರ್ ಪಾರ್ಟಿಯ ಆಂಜೆಲಾ ರೇಯ್ನರ್ ಟ್ವೀಟ್ ಮಾಡಿದ್ದಾರೆ.
ಎಲಾನ್ ಮಸ್ಕ್ ಆಸ್ತಿ $ 100 ಬಿಲಿಯನ್
ಇನ್ನು ವರದಿ ಹೇಳುವ ಪ್ರಕಾರ, ಬಿಲಿಯನೇರ್ ಗಳು ಈ ಹಿಂದಿಗಿಂತ ಈಗಿನ ಕೆಲವು ತಿಂಗಳಲ್ಲಿ ಹೆಚ್ಚು ದಾನ ಮಾಡಿದ್ದಾರೆ. ಇನ್ನು ಕೊರೊನಾ ಕಾಣಿಸಿಕೊಂಡ ಆರಂಭದಲ್ಲಿ ವಿಶ್ವದ ಬಿಲಿಯನೇರ್ ಗಳ ಮೇಲೆ ಪ್ರಭಾವ ಬೀರಿತ್ತು. ಅವರ ಸಂಪತ್ತು ಫೆಬ್ರವರಿ ಹಾಗೂ ಮಾರ್ಚ್ ನಲ್ಲಿ 6.6 ಪರ್ಸೆಂಟ್ ಕುಸಿತ ಕಂಡಿತ್ತು. ಷೇರು ಮಾರುಕಟ್ಟೆಯಲ್ಲಿ ಕುಸಿತದಿಂದಾಗಿ ಈ ಶತಕೋಟ್ಯಧಿಪತಿಗಳು ಆಸ್ತಿ ಕರಗಿತು. ಆದರೆ ಶೀಘ್ರವೇ ತಂತ್ರಜ್ಞಾನ ಹಾಗೂ ಆರೋಗ್ಯ ಕ್ಷೇತ್ರದ ಷೇರುಗಳು ಏರಿಕೆ ಕಂಡವು. ಏಪ್ರಿಲ್ ಮತ್ತು ಜುಲೈ ಮಧ್ಯೆ 27.5% ಹೆಚ್ಚಳವಾದವು. ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿದ ಎಲಾನ್ ಮಸ್ಕ್ ಗೆ ಸೇರಿದ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಈಗಿನ ಏರಿಕೆಗೆ ಅತ್ಯುತ್ತಮ ನಿದರ್ಶನ. ಫೋರ್ಬ್ಸ್ ಪ್ರಕಾರ, $ 100 ಬಿಲಿಯನ್ ಆಸ್ತಿ ಹೊಂದಿದವರ ಪಟ್ಟಿಯಲ್ಲಿ ಸೇರ್ಪಡೆಯಾದ ಮಸ್ಕ್, ಟೆಸ್ಲಾ ಕಂಪೆನಿ ಷೇರು ಬೆಲೆ ಏರಿಕೆಯಾದಂತೆ ವಿಶ್ವದ ಐದನೇ ಶ್ರೀಮಂತನ ಸ್ಥಾನಕ್ಕೆ ಏರಿದರು. ಇನ್ನು ಚೀನಾದ ಝೋಂಗ್ ಹುಜುವಾನ್ ಎಂಬ ರಸಾಯನ ಶಾಸ್ತ್ರದ ಪ್ರೊಫೆಸರ್ ಆಸ್ತಿ $ 20.4 ಬಿಲಿಯನ್ ಆಯಿತು.
ತಂತ್ರಜ್ಞಾನ ವಲಯದ ಮಿಂಚು
2018, 2019 ಹಾಗೂ 2020ನೇ ಇಸವಿಯ ಮೊದಲ ಏಳು ತಿಂಗಳು ಸೇರಿ ತಂತ್ರಜ್ಞಾನ ವಲಯದ ನಾಲ್ಕು ಬಿಲಿಯನೇರ್ ಗಳ ಸಂಪತ್ತು 42.5 ಪರ್ಸೆಂಟ್ ಹೆಚ್ಚಾಗಿದೆ. ಅವರು ನಾಲ್ಕು ಜನರ ಆಸ್ತಿಯ ಒಟ್ಟು ಲೆಕ್ಕ $ 1.8 ಲಕ್ಷ ಕೋಟಿ ಆಗುತ್ತದೆ. ಆರೋಗ್ಯ ವಲಯದಲ್ಲಿನ ಶ್ರೀಮಂತರ ಆಸ್ತಿ 50.3% ಹೆಚ್ಚಳವಾಗಿ, ಒಟ್ಟಾರೆ ಆಸ್ತಿ $ 658.6 ಬಿಲಿಯನ್ ಆಗಿದೆ. ಒಟ್ಟಾರೆಯಾಗಿ ಹೋಲಿಕೆ ಅಂತ ಮಾಡಿದರೆ ಮನರಂಜನೆ, ರಿಯಲ್ ಎಸ್ಟೇಟ್ ಮತ್ತು ಹಣಕಾಸು ಸೇವೆಯ ಕ್ಷೇತ್ರದಲ್ಲಿನ ಬಿಲಿಯನೇರ್ ಗಳ ನಿವ್ವಳ ಸಂಪತ್ತು 10 ಪರ್ಸೆಂಟ್ ಗಿಂತ ಹೆಚ್ಚು ಜಾಸ್ತಿ ಆಗಿಲ್ಲ.


Click it and Unblock the Notifications