ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆಯ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿದೆ.ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿತ ಕಂಡಿದೆ. ಬಹುತೇಕ ಮಂದಿ ಮೆಟ್ರೋ ಅವಲಂಬಿಸಿಕೊಂಡಿದ್ದರು ದರ ಏರಿಕೆಯಿಂದಾಗಿ ಅವರು ಸಹ ಬಿಎಮ್‌ಟಿಸಿ ಕಡೆ ಮುಖ ಮಾಡಿದ್ದಾರೆ. ಇನ್ನೂ ಕೆಲವರು ಸ್ವಂತ ಗಾಡಿಯಲ್ಲಿ ಓಡಾಡುತ್ತಿದ್ದಾರೆ.ಇದರಿಂದ ಮೆಟ್ರೋ ಸೀಟುಗಳು ಸಹ ಖಾಲಿ ಖಾಲಿಯಾಗಿ ಇವೆ.
ಹೌದು,ನಮ್ಮ ಮೆಟ್ರೋ' ಟಿಕೆಟ್ ದರ ಕಡಿಮೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಬಿಎಂಆರ್ ಸಿಎಲ್ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಬೆಂಗಳೂರು ಮೆಟ್ರೋ ಪ್ರಯಾಣ ದರ ಪರಿಷ್ಕರಣೆಯನ್ನು ಜಾರಿಗೆ ತಂದ ರೀತಿ ವೈಪರೀತ್ಯಗಳಿಗೆ ಕಾರಣವಾಗಿದೆ, ಕೆಲವು ಮಾರ್ಗಗಳ ದರಗಳು ದ್ವಿಗುಣಗೊಂಡಿವೆ. ಈ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲು ಮತ್ತು ಟಿಕೆಟ್ ದರಗಳನ್ನು ಕಡಿಮೆ ಮಾಡಲು ನಾನು ಬಿಎಂಆರ್ಸಿಎಲ್ ಎಂಡಿಗೆ ಕೇಳಿದ್ದೇನೆ. ಪ್ರಯಾಣಿಕರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಮೆಟ್ರೋ ಪ್ರಯಾಣ ದರ ಹೆಚ್ಚಳವನ್ನು ವಿರೋಧಿಸುತ್ತಿರುವ ವಿರೋಧ ಪಕ್ಷವಾದ ಬಿಜೆಪಿಯ ನಾಯಕರು ಯಥಾಪ್ರಕಾರ ಸುಳ್ಳು ಮತ್ತು ತಿರುಚಿದ ಮಾಹಿತಿಯನ್ನು ಬಳಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿ ಸಾರ್ವಜನಿಕರ ಹಾದಿ ತಪ್ಪಿಸುತ್ತಿದ್ದಾರೆ. ಸರ್ಕಾರದ ಯಾವುದೇ ನೀತಿ-ನಿರ್ಧಾರಗಳನ್ನು ವಿರೋಧಿಸುವ ಅಧಿಕಾರ ಸಾರ್ವಜನಿಕರಿಗೆ ಇದೆ, ಸಂವಿಧಾನಬದ್ಧವಾದ ಅವರ ಹಕ್ಕನ್ನು ನಾನು ಗೌರವಿಸುತ್ತೇನೆ. ಆದರೆ ವಿರೋಧ ಪಕ್ಷದ ಸ‍್ಥಾನದಲ್ಲಿ ಜನ ಕೂರಿಸಿರುವ ರಾಜ್ಯದ ಬಿಜೆಪಿ ರಾಜಕೀಯ ದುರುದ್ದೇಶದಿಂದ ಸುಳ್ಳು ಮಾಹಿತಿಗಳನ್ನು ನೀಡಿ ಸಾರ್ವಜನಿಕರ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿರುವುದು ಅಕ್ಷಮ್ಯ ಎಂದು ತಿರುಗೇಟು ಕೊಟ್ಟಿದ್ದಾರೆ.
ಮೋದಿಯತ್ತ ಸಿದ್ದರಾಮಯ್ಯ ಬೊಟ್ಟು
ಒಂದೆಡೆ ಮೆಟ್ರೋ ರೈಲು ನಿರ್ಮಾಣದ ಸಾಧನೆ ಕೇಂದ್ರದ ಬಿಜೆಪಿ ಸರ್ಕಾರದ್ದು ಎಂದು ಡಂಗುರ ಬಾರಿಸುತ್ತಿರುವ ಬಿಜೆಪಿ ನಾಯಕರು ದರ ಪರಿಷ್ಕರಣೆ ವಿರುದ್ದ ಜನಾಕ್ರೋಶ ವ್ಯಕ್ತವಾಗುತ್ತಿರುವುದನ್ನು ಕಂಡು ಅದರ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಮೇಲೆ ಹೊರಿಸುತ್ತಿರುವುದು ಆತ್ಮವಂಚಕ ನಡವಳಿಕೆಯಾಗಿದೆ ಎಂದು ಹೇಳಿದ್ದಾರೆ.
ಮೆಟ್ರೋ ಸ್ವಾಯತ್ತ ಸಂಸ್ಥೆಯಾಗಿದ್ದು ಇದರ ಮೇಲೆ ರಾಜ್ಯ ಸರ್ಕಾರಕ್ಕೆ ಪೂರ್ಣ ನಿಯಂತ್ರಣಾಧಿಕಾರ ಇಲ್ಲ. ಉಳಿದೆಲ್ಲ ನಗರಗಳ ಮೆಟ್ರೋ ರೈಲು ನಿಗಮಗಳಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ಕೂಡಾ ಕೇಂದ್ರ ಸರ್ಕಾರದ ಮೆಟ್ರೋ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.
2017ರ ನಂತರ ಮೆಟ್ರೊ ರೈಲಿನ ಪ್ರಯಾಣ ದರ ಪರಿಷ್ಕರಣೆ ಮಾಡದೆ ಇರುವ ಕಾರಣ ದರ ಪರಿಷ್ಕರಣೆ ನಡೆಸುವಂತೆ ಬಿಎಂಆರ್‌ಸಿಎಲ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಪ್ರಯಾಣ ದರ ಹೆಚ್ಚಳದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲೇ ಇದ್ದಿದ್ದರೆ ಬಿಎಂಆರ್‌ಸಿಎಲ್ ನಮಗೆ ಪತ್ರ ಬರೆಯದೆ, ಕೇಂದ್ರ ಸರ್ಕಾರಕ್ಕೆ ಯಾಕೆ ಪತ್ರ ಬರೆಯುತ್ತಿತ್ತು? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ನಮ್ಮ ಮೆಟ್ರೋ ಪ್ರಯಾಣ ದರವನ್ನು ಪರಿಷ್ಕರಿಸಿದ ಪಟ್ಟಿ
ಕಿ.ಮೀ ನೂತನ ಬೆಲೆ 0 ನಿಂದ 2 ಕಿ.ಮೀ 10 ರೂ.
2 ರಿಂದ 4 ಕಿ.ಮೀ 20 ರೂ.
4 ರಿಂದ 6 ಕಿ.ಮೀ 30 ರೂ
6 ರಿಂದ 8 ಕಿ.ಮೀ 40 ರೂ.
8 ರಿಂದ 10 ಕಿ.ಮೀ 50 ರೂ.
10 ರಿಂದ 15 ಕಿ.ಮೀ 60 ರೂ.
15 ರಿಂದ 20 ಕಿ.ಮೀ 70 ರೂ.
20 ರಿಂದ 25 ಕಿ.ಮೀ 80 ರೂ.
ಸ್ಮಾರ್ಟ್ ಕಾರ್ಡ್ ರಿಯಾಯಿತಿ ಮುಂದುವರಿಸಿದ ಬಿಎಂಆರ್‌ಸಿಎಲ್
ಪರಿಷ್ಕೃತ ದರ ಪ್ರಕಾರ ಪ್ರಯಾಣಕ್ಕೆ ಬಳಸುವ ಸ್ಮಾರ್ಟ್ ಕಾರ್ಡಿನಲ್ಲಿ ಇನ್ನು ಮುಂದೆ ಕನಿಷ್ಠ ಮೊತ್ತ 90 ರೂ. ಹೊಂದಿರಬೇಕು. ಸದ್ಯ 50 ರೂ. ಕನಿಷ್ಠ ಮೊತ್ತ ಇದ್ದರೆ ಸಾಕಿತ್ತು. ಇದಲ್ಲದೆ ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ರಿಯಾಯಿತಿಗಳನ್ನು ಮುಂದುವರಿಸಿದೆ. ಈಗಿರುವ ಶೇ.5 ರಿಯಾಯಿತಿ ಜೊತೆಗೆ, ಪ್ರಯಾಣಿಕರು ಪೀಕ್ ಅವರ್ಸ್‌ನಲ್ಲಿ ಅಲ್ಲದ ಸಮಯದಲ್ಲಿ ಮೆಟ್ರೋಗೆ ಪ್ರವೇಶಿಸಿದರೆ, ಅವರಿಗೆ ಹೆಚ್ಚುವರಿ ಶೇ.5 ರಿಯಾಯಿತಿ ಸಿಗುತ್ತದೆ. ಹೀಗಾಗಿ, ಅವರು ಒಟ್ಟು ಶೇ.10 ರಿಯಾಯಿತಿಯನ್ನು ಪಡೆಯಬಹುದು.
ಬೆಂಗಳೂಗರಿಗೆ ಒಂದಾದ ಮೇಲೊಂದರಂತೆ ಬೆಲೆ ಏರಿಕೆ ಬಿಸಿ ತಟ್ಟಿದೆ.ಮೆಟ್ರೋ ಪ್ರಯಾಣ ದರ ಏರಿಕೆಗೆ ಜನರು ಕೆಂಡಮಂಡಲವಾಗಿದ್ದು,ಬಿಜೆಪಿ ಕಾಂಗ್ರೇಸ್ ನಡುವೆ ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಿವೆ.


Click it and Unblock the Notifications