ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಅವರ ಪತಿ ದೀಪಕ್ ಕೊಚ್ಚರ್ ನನ್ನು ಜಾರಿ ನಿರ್ದೇಶನಾಲಯವು (E.D.) ಸೋಮವಾರ (ಸೆಪ್ಟೆಂಬರ್ 7, 2020) ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿದೆ. ಇದು ಐಸಿಐಸಿಐ ಬ್ಯಾಂಕ್- ವಿಡಿಯೋಕಾನ್ ಅಕ್ರಮ ಹಣ ವರ್ಗಾವಣೆ ಪ್ರಕರಣ.
ಈ ವರ್ಷದ ಜನವರಿ 31ನೇ ತಾರೀಕು ಜಾರಿ ನಿರ್ದೇಶನಾಲಯವು ಚಂದಾ ಕೊಚ್ಚರ್ ಹಾಗೂ ದೀಪಕ್ ಕೊಚ್ಚರ್, ವಿಡಿಯೋಕಾನ್ ಸಿಎಂಡಿ ವೇಣುಗೋಪಾಲ್ ಧೂತ್ ಮತ್ತಿತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಐಸಿಐಸಿಐ ಬ್ಯಾಂಕ್ ನಿಂದ ಕಾರ್ಪೊರೇಟ್ ಸಮೂಹಕ್ಕೆ 1875 ಕೋಟಿ ರುಪಾಯಿ ಸಾಲ ಮಂಜೂರು ಮಾಡಿದ್ದರಲ್ಲಿ ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ಆ ಬಗ್ಗೆ ತನಿಖೆ ನಡೆದಿತ್ತು.
ಕೊಚ್ಚರ್ ಕುಟುಂಬ, ವಿಡಿಯೋಕಾನ್ ಸಮೂಹದ ಅಧ್ಯಕ್ಷ ವೇಣುಗೋಪಾಲ್ ಧೂತ್ ಮತ್ತು ಇತರ ಆರು ಮಂದಿ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಥಮ ಮಾಹಿತಿ ವರದಿಯನ್ನು (ಎಫ್ ಐಆರ್) ಆಧರಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇ.ಡಿ. ದಾಖಲಿಸಿತ್ತು. ಈ ಪ್ರಕರಣದಲ್ಲಿ ಮೊದಲನೇ ಬಂಧನ ಇದು.

ಚಂದಾ ಕೊಚ್ಚರ್ ಐಸಿಐಸಿಐ ಬ್ಯಾಂಕ್ ಸಿಇಒ ಆಗಿದ್ದರು. ಆ ಅವಧಿಯಲ್ಲಿ ಸಾವಿರಾರು ಕೋಟಿ ಮೊತ್ತದ ಸಾಲವನ್ನು ಬ್ಯಾಂಕ್ ನಿಂದ ಮಂಜೂರು ಮಾಡಿಸಿಕೊಳ್ಳಲು ಕೊಚ್ಚರ್ ಅವರ ಪತಿ ದೀಪಕ್ ಗೆ ಸೇರಿದ ಕಂಪೆನಿಯ ಮೂಲಕ ಹಣ ನೀಡಲಾಗಿದೆ. ಅದರ ಜತೆಗೆ ಇತರ ಅನುಕೂಲ ಮಾಡಿಕೊಡಲಾಗಿದೆ ಎಂದು ಆರೋಪ ಬಂದಿತ್ತು.
ಆ ಹಿನ್ನೆಲೆಯಲ್ಲಿ ಚಂದಾ ಕೊಚ್ಚರ್ ಅವರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚಿಸಲಾಗಿತ್ತು. ಆ ನಂತರ ದೂರು ದಾಖಲಿಸಿಕೊಂಡ ಸಿಬಿಐ ತನಿಖೆ ನಡೆಸಿತ್ತು. ಸಿಬಿಐ ಎಫ್ ಐಆರ್ ಆಧಾರದಲ್ಲಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿತ್ತು.


Click it and Unblock the Notifications