ನವದೆಹಲಿ, ಜೂನ್ 2: 'ಈ ಕೂಡಲೇ ಕರೆಂಟ್ ಬಿಲ್ ಕಟ್ಟದಿದ್ದರೆ ನಿಮ್ಮ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತೇವೆ, ಕೆರೆಂಟ್ ಬಿಲ್ ಕಟ್ಟಲು ನಾವು ಕಳಿಸಿರುವ ಲಿಂಕ್ ಕ್ಲಿಕ್ ಮಾಡಿ'. ನಿಮ್ಮ ವಿಳಾಸಕ್ಕೆ ವಿದೇಶದಿಂದ ಕೊರಿಯರ್ ಬಂದಿದ್ದು ಅದರಲ್ಲಿ ಮಾದಕ ವಸ್ತುಗಳಿದ್ದು ಅದನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಇಲ್ಲಿಗೆ ಕೈಬಿಡಬೇಕು ಅಂದರೆ ನಾವು ಹೇಳಿದಂತೆ ಮಾಡಿ'. 'ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಅವಧಿ ಮುಗಿದುಹೋಗಿದ್ದು ಈ ಕೂಡಲೇ ಅಪ್ ಡೇಟ್ ಮಾಡದೆ ಇದ್ದರೆ ನಿಮ್ಮ ಖಾತೆ ಸ್ಥಗಿತವಾಗಲಿದ್ದು ಯಾವ ವಹಿವಾಟು ಮಾಡಲು ಸಾಧ್ಯವಿಲ್ಲ... ಈ ರೀತಿಯ ಪೋನ್ ಕರೆಗಳು, ಮೆಸೇಜ್ ಗೆ ಮರುಳಾಗಿ ನೀವು ಏನಾದರೂ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಅಥವಾ ಒಟಿಪಿ ನೀಡಿದರೆ ನಿಮ್ಮ ಬ್ಯಾಂಕ್ ಖಾತೆ ಮರುಕ್ಷಣವೇ ಬರಿದಾಗುತ್ತದೆ!
ಕುಳಿತಲ್ಲಿಂದಲೇ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ ವಂಚಕರು ನಿಮ್ಮ ಹಣ ಲೂಟಿಮಾಡುತ್ತಾರೆ. 2023ರಲ್ಲಿ ಸೈಬರ್ ವಂಚಕರು ವಿವಿಧ ರೀತಿಯ ದಾಳ ಬಳಸಿಕೊಂಡು 4850 ಪ್ರಕರಣಗಳಲ್ಲಿ ಭಾರತೀಯರಿಂದ ಬರೋಬ್ಬರಿ 66.66 ಕೋಟಿ ರೂ. ದೋಚಿದ್ದಾರೆ ಎನ್ನುವ ಮಾಹಿತಿಯನ್ನು ನ್ಯಾಶನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ನೀಡಿದೆ.

ವಿಮೆ ರಿನಿವಲ್ ಹೆಸರಿನಲ್ಲಿ, ಕಡಿಮೆ ದರದಲ್ಲಿ ವೆಹಿಕಲ್ ಇನ್ಶೂರೆನ್ಸ್ ಹೆಸರಿನಲ್ಲಿ, ಪ್ರವಾಸಿ ತಾಣದಲ್ಲಿ ಹೋಟೆಲ್ ಬುಕಿಂಗ್ ಹೆಸರಿನಲ್ಲಿ, ವಾಹನ ಬುಕಿಂಗ್ ಹೆಸರಿನಲ್ಲಿ, ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಲಾಭದ ಹೆಸರಿನಲ್ಲಿ, ಸಾಲ ಮನ್ನಾ ಹೆಸರಿನಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ನೀವು ಹಾಕಿದ ಕಂಪ್ಲೇಟ್ ಗೆ ಪರಿಹಾರ ಕೊಡಿಸುವ ಹೆಸರಿನಲ್ಲಿ, ಮಹಿಳೆಯರ ಧ್ವನಿಯಲ್ಲಿ ನಯವಾಗಿ ಮಾತನಾಡಿ ಖೆಡ್ಡಾಕ್ಕೆ ಬೀಳಿಸುವ ನೂರಾರು ದಾರಿಗಳನ್ನು ಸೈಬರ್ ವಂಚಕರು ಪ್ರಯೋಗ ಮಾಡುತ್ತಲೇ ಇದ್ದಾರೆ.
ಕೆಲವೊಮ್ಮೆ ನಿಮ್ಮ ಸಾಲ ಬಾಕಿಯಿದ್ದು ತೀರಿಸಬೇಕು ಅಂತಾ ಬೆದರಿಕೆ ಕರೆ ಮಾಡುತ್ತಾರೆ. ನಿಮ್ಮ ಭಯ ಇಲ್ಲವೇ ಆತಂಕವೇ ಅವರ ಬಂಡವಾಳ. ಕೆಲವೊಮ್ಮೆ ಬ್ಲಾಕ್ ಮೇಲ್ ತಂತ್ರ ಸಹ ಬಳಸುತ್ತಾರೆ. ಹಾಗಿದ್ದರೆ ಇಂಥ ಕರೆಗಳನ್ನು ಹೇಗೆ ಗುರುತು ಮಾಡಬೇಕು ಎನ್ನುವ ಪ್ರಶ್ನೆಗೆ ಮೊದಲು ಉತ್ತರ ಕಂಡುಕೊಳ್ಳಲು ಈ ಅಂಶಗಳನ್ನು ಗಮನಿಸಿಕೊಳ್ಳಬೇಕು.
ವೈಯಕ್ತಿಕ ವಿವರ ಕೇಳುತ್ತಾರೆ:
ಕರೆ ಮಾಡಿದ ವ್ಯಕ್ತಿ ನಿಮ್ಮ ಬ್ಯಾಂಕ್ ಖಾತೆ, ಡೆಬಿಟ್ ಕಾರ್ಟ್, ಕ್ರೆಡಿಟ್ ಕಾರ್ಡ್ ವಿವರ ಅಥವಾ ಅಂಕಿಗಳನ್ನು ಕೇಳಿದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಕಾರ್ಡ್ ಸಿವಿವಿ ಕೇಳಲು ಮುಂದಾದರೆ ಆ ಕರೆ ವಂಚಕರಿಂದ ಬಂದಿದೆ ಎಂದೇ ಅರ್ಥ!
ಅಗ್ರೆಸ್ಸಿವ್ ಮಾತು!:
ಕರೆ ಮಾಡಿದ ವ್ಯಕ್ತಿ ಆಕ್ರಮಣಕಾರಿಯಾಗಿ ಮಾತನಾಡುತ್ತಿದ್ದರೆ, ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿದ್ದೇವೆ ನಿಮ್ಮ ಬಂಧನ ಮಾಡಲಾಗುತ್ತದೆ ಎಂದು ಹೇಳಿದರೆ ಅದು ಸಹ ವಂಚಕರ ಕರೆ ಎಂದೇ ತಿಳಿದುಕೊಳ್ಳಬೇಕು.
ಥರ್ಡ್ ಪಾರ್ಟಿ ಅಪ್ಲಿಕೇಶನ್ ಡೌನ್ ಲೋಡ್:
ಈ ಕೂಡಲೆ ಬಿಲ್ ತುಂಬಲು ಯಾವುದಾದರೂ ಥರ್ಡ್ ಪಾರ್ಟಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಲು ಹೇಳಿದರೆ ಅಥವಾ ಪೋನ್ ಕರೆಯಲ್ಲೇ ಇದ್ದುಕೊಂಡು ನಾವು ಕಳಿಸುವ ಲಿಂಕ್ ಕ್ಲಿಕ್ ಮಾಡಿ ಎಂದರೆ ಅದು ಸಹ ಅಪಾಯದ ಸೂಚನೆ! ಒಂದು ವೇಳೆ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ಮೊಬೈನ್‌ನ ಪರ್ಸನಲ್ ಮಾಹಿತಿ ವಂಚಕರ ಪಾಲಾದಂತೆ!
ಆಮಿಷ ಒಡ್ಡುತ್ತಾರೆ:
ನೀವು ಲಾಟರಿ ಗೆದ್ದಿದ್ದೀರಿ, ನಿಮ್ಮ ನಂಬರ್ ಲಕ್ಕಿ ಡ್ರಾ ನಲ್ಲಿ ಸೆಲೆಕ್ಟ್ ಆಗಿದೆ ಎನ್ನುವ ಕರೆಗಳು ಸಹ ವಂಚನೆಯ ಸೂಚನೆಯೇ ಆಗಿದೆ. ವಂಚಕ ಎಲ್ಲಿಯೂ ತನ್ನ ಮಾಹಿತಿ ಬಿಟ್ಟುಕೊಡದೆ ನಿಮ್ಮ ವಿವರ ಮಾತ್ರ ಕೇಳುತ್ತಿರುತ್ತಾನೆ. ಕರೆ ಮಾಡಿದ ವ್ಯಕ್ತಿ ಎಲ್ಲಿಂದ ಮಾತನಾಡುತ್ತಿದ್ದಾನೆ ಎಂದು ತಿಳಿದುಕೊಳ್ಳಲು ಬ್ಯಾಕ್ ಗ್ರೌಂಡ್ ಸೌಂಡ್ ಸಹ ಆಲಿಸಬೇಕು.
ಎಚ್ಚರಿಕೆಯ ಸೂತ್ರ ಮರೆಯಬೇಡಿ:
ಸೋಶಿಯಲ್ ಮೀಡಿಯಾ ಬಳಕೆ ಮಾಡುವಾಗ ಎಚ್ಚರಿಕೆ ಇರಲಿ, ಖಾಸಗಿ ಮಾಹಿತಿ ಹಂಚಿಕೊಳ್ಳುವ ದುಸ್ಸಾಹಸ ಬೇಡ. ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳಲ್ಲಿ ನಿಮ್ಮ ಬ್ಯಾಂಕ್ ಡಿಟೇಲ್ಸ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಅಪ್ ಡೇಟ್ ಮಾಡಬೇಡಿ. ಡಿಜಿಟಲ್ ಜಗತ್ತನಲ್ಲಿ ನೀವು ಎಷ್ಟು ಎಚ್ಚರಿಕಯಿಂದ ಇರುತ್ತಿರೋ ಅಷ್ಟು ಸುರಕ್ಷಿತವಾಗಿರುತ್ತೀರಿ. ನಿಮ್ಮ ಬ್ಯಾಂಕ್ ಅಕೌಂಟ್ ಸಹ ಸೇಫಾಗಿರುತ್ತದೆ.


Click it and Unblock the Notifications