2020ರ ಜುಲೈ ತಿಂಗಳ ಇಂಡೆಕ್ಸ್ ಇಂಡಸ್ಟ್ರಿಯಲ್ ಪ್ರೊಡಕ್ಷನ್ (ಐಐಪಿ) 10.4% ಇಳಿಕೆ ಕಂಡು, 118.1ಕ್ಕೆ ತಲುಪಿದೆ. ಸ್ಟಾಟಿಸ್ಟಿಕ್ಸ್ ಅಂಡ್ ಪ್ರೋಗ್ರಾಂ ಇಂಪ್ಲಿಮೆಂಟೇಷನ್ ಸಚಿವಾಲಯ (MoSPI) ಬಿಡುಗಡೆ ಮಾಡಿರುವ ಅಂಕಿ- ಅಂಶದ ಸಹಾಯದಿಂದ ಈ ಮಾಹಿತಿ ತಿಳಿದುಬಂದಿದೆ. ಮುಖ್ಯವಾಗಿ ಈ ಕುಸಿತ ಆಗಿರುವುದು ಉತ್ಪಾದನೆ, ಗಣಿಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆ ವಲಯದಲ್ಲಿ ಆಗಿರುವ ಉತ್ಪಾದನೆಯ ಕುಸಿತದಿಂದ. 2019ರ ಜುಲೈನಲ್ಲಿ IIPಯು 4.9% ಹೆಚ್ಚಾಗಿತ್ತು.
2020-21ರ ಹಣಕಾಸು ವರ್ಷದಲ್ಲಿ ಏಪ್ರಿಲ್ ನಿಂದ ಜುಲೈ ತನಕದ ಅವಧಿಯಲ್ಲಿ ಕೈಗಾರಿಕೆ ಬೆಳವಣಿಗೆ ಎಂಬುದು 29.2% ಇಳಿಕೆ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 3.5% ಹೆಚ್ಚಳ ಆಗಿತ್ತು. ದೇಶದಾದ್ಯಂತ ಹೇರಿದ್ದ ಕೊರೊನಾ ಲಾಕ್ ಡೌನ್ ಪರಿಣಾಮ ಕೈಗಾರಿಕೆ ಚಟುವಟಿಕೆಗಳ ಮೇಲೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಆಗಿದೆ.
ಉತ್ಪಾದನಾ ವಲಯ 11.1% ಕುಸಿತ ಕಂಡಿದೆ. ಗಣಿಗಾರಿಕೆ 13 ಪರ್ಸೆಂಟ್ ಕುಸಿದಿದೆ. ವಿದ್ಯುತ್ ವಲಯ 2.5% ಇಳಿಕೆಯಾಗಿದೆ. ಕಳೆದ ವರ್ಷ ಜುಲೈನಲ್ಲಿ ಉತ್ಪಾದನಾ ವಲಯ 4.8%, ಗಣಿಗಾರಿಕೆ 4.9%, ವಿದ್ಯುತ್ 5.2% ಹೆಚ್ಚಳ ಕಂಡಿತ್ತು.

"ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರದಿಂದ ದೇಶಾದ್ಯಂತ ಲಾಕ್ ಡೌನ್ .ಘೋಷಿಸಿದ್ದರಿಂದ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆ ಸಂಸ್ಥೆಗಳು 2020ರ ಮಾರ್ಚ್ ನಿಂದ ಕಾರ್ಯ ನಿರ್ವಹಿಸಿಲ್ಲ. ಇದು ಆಯಾ ಸಂಸ್ಥೆಗಳು ಉತ್ಪಾದಿಸುವ ವಸ್ತುಗಳ ಮೇಲೆ ಪರಿಣಾಮ ಬೀರಿದೆ" ಎಂದು ಸಚಿವಾಲಯದಿಂದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
"ನಿರ್ಬಂಧವನ್ನು ತೆರವುಗೊಳಿಸುತ್ತಾ ಬಂದಂತೆ ಕೈಗಾರಿಕೆ ಚಟುವಟಿಕೆಗಳು ಮತ್ತೆ ಆರಂಭಗೊಂಡಿವೆ. ಜುಲೈ 2020ರಲ್ಲಿ ಸೂಚ್ಯಂಕವು 118.1ರಲ್ಲಿ ಇದೆ. ಏಪ್ರಿಲ್, ಮೇ ಹಾಗೂ ಜೂನ್ ನಲ್ಲಿ ಕ್ರಮವಾಗಿ 54.0, 89.5 ಹಾಗೂ 108.9 ಇತ್ತು" ಎಂದು ತಿಳಿಸಲಾಗಿದೆ.


Click it and Unblock the Notifications