2022-23 ಬ್ಯಾಚ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯ ಪದವೀಧರರು, ವಾರ್ಷಿಕ 3.67 ಕೋಟಿ ರೂಪಾಯಿಗಳ ಸಂಬಳದ ಅಂತರಾಷ್ಟ್ರೀಯ ಉದ್ಯೋಗದ ಆಫರ್ ಅನ್ನು ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ವಿದೇಶಿ ಉದ್ಯೋಗದಲ್ಲಿ ಇಷ್ಟು ವೇತನದ ಆಫರ್ ಹೊಸ ದಾಖಲೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಇನ್ನೊಬ್ಬ ಪದವೀಧರರು ಭಾರತದಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ವಾರ್ಷಿಕ 1.68 ಕೋಟಿ ರೂಪಾಯಿಗಳ ಸಂಬಳದ ಆಫರ್ ಅನ್ನು ಇನ್ನೊಬ್ಬ ಪದವೀಧರರು ಪಡೆದುಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಇನ್ನು ಹಲವಾರು ಮಂದಿ 2022-23 ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ ಅಂತರಾಷ್ಟ್ರೀಯ ಉದ್ಯೋಗದ ಆಫರ್ ಅನ್ನು ಪಡೆದುಕೊಂಡಿದ್ದಾರೆ.

2022-23 ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ ಐಐಟಿ ಬಾಂಬೆಯ 16 ಪದವೀಧರರು ವಾರ್ಷಿಕ 1 ಕೋಟಿ ರೂಪಾಯಿಗಿಂತ ಅಧಿಕ ವೇತನದ ಉದ್ಯೋಗದ ಆಫರ್‌ಗಳನ್ನು ಪಡೆದುಕೊಂಡಿದ್ದಾರೆ. ಇನ್ನು 65 ಮಂದಿಗೂ ವಿದೇಶಿ ಉದ್ಯೋಗದ ಆಫರ್ ಲಭ್ಯವಾಗಿದೆ. ಯುಎಸ್‌ಎ, ಜಪಾನ್, ಯುನೈಟೆಡ್ ಕಿಂಗ್‌ಡಮ್, ನೆದರ್‌ಲ್ಯಾಂಡ್, ಹಾಂಗ್ ಕಾಂಗ್ ಮತ್ತು ತೈವಾನ್ ಮೂಲದ ವಿವಿಧ ಕಂಪನಿಗಳಿಂದ ಈ ಉದ್ಯೋಗದ ಆಫರ್ ಬಂದಿದೆ.
ಐಐಟಿ ಬಾಂಬೆಯ ಉದ್ಯೋಗ ಮತ್ತು ಇಂಟರ್ನ್‌ಶಿಪ್ ವರದಿಯ ಪ್ರಕಾರ, ಈ ಸೀಸನ್‌ನಲ್ಲಿ ವಿದ್ಯಾರ್ಥಿಗಳ ಸರಾಸರಿ ವೇತನವು (ಸಿಟಿಸಿ) ವಾರ್ಷಿಕ 21.82 ಲಕ್ಷ ರೂಪಾಯಿ ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಕೊಂಚ ಅಧಿಕವಾಗಿ ಹೆಚ್ಚಳವಾಗಿದೆ. ಇತ್ತೀಚಿನ ಸುತ್ತಿನ ನೇಮಕಾತಿಗಳು ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ 1,845 ವಿದ್ಯಾರ್ಥಿಗಳಲ್ಲಿ 1,516 ಐಐಟಿ ಬಾಂಬೆ ಪದವೀಧರರು ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ.
ಹೆಚ್ಚಿನ ಉದ್ಯೋಗಗಳು ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಲಯದಲ್ಲಿ ಲಭ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸೀಸನ್‌ನಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಸಾಫ್ಟ್‌ವೇರ್ ನೇಮಕಾತಿ ಕಡಿಮೆಯಾಗಿದೆ ಎಂದು ಐಐಟಿ ಬಾಂಬೆ ಹೇಳಿದೆ. ಸುಮಾರು 302 ವಿದ್ಯಾರ್ಥಿಗಳಿಗೆ 88 ಕಂಪನಿಗಳು ಐಟಿ/ ಸಾಫ್ಟ್‌ವೇರ್ ಉದ್ಯೋಗಗಳನ್ನು ನೀಡಿವೆ. ವ್ಯಾಪಾರ, ಬ್ಯಾಂಕಿಂಗ್, ಫಿನ್‌ಟೆಕ್, ಶಿಕ್ಷಣ ಮತ್ತು ವಿನ್ಯಾಸ ಕ್ಷೇತ್ರಗಳಲ್ಲಿಯೂ ನೇಮಕಾತಿ ಮಾಡಲಾಗಿದೆ.
ಜೂನ್‌ನಲ್ಲಿ ಪ್ರಕಟವಾದ 2023 ರ ಭಾರತದ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದಲ್ಲಿ ಐಐಟಿ ಬಾಂಬೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳು, ಐಐಟಿ ಬಾಂಬೆ ಅನಾಮಧೇಯ ದಾನಿಯಿಂದ 160 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ಸ್ವೀಕರಿಸಿದೆ. ಐಐಟಿ-ಬಾಂಬೆ ಹಳೆಯ ವಿದ್ಯಾರ್ಥಿ, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ 315 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದರು.


Click it and Unblock the Notifications