ವಿಶ್ವ ಆರ್ಥಿಕ ವರದಿಯಲ್ಲಿ ಭಾರತವನ್ನು ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.
ಕೊರೊನಾಯಿಂದಾಗಿ ವಿಶ್ವದ ಆರ್ಥಿಕತೆ 1930ರ ದಶಕದ ಬಳಿಕ ಭೀಕರ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಕಾರಣ 2020 ರಲ್ಲಿ ಭಾರತ ಜಿಡಿಪಿ ಬೆಳವಣಿಗೆ 1.9 ಪರ್ಸೆಂಟ್ ಎಂದು ಐಎಂಎಫ್ ಅಂದಾಜಿಸಿದೆ.
ಭಾರತವು 1991 ರ ಉದಾರೀಕರಣದ ನಂತರ ಅತಿ ಕೆಟ್ಟ ಸನ್ನಿವೇಶದಲ್ಲಿ ಬೆಳವಣಿಗೆಯ ಕಾರ್ಯಕ್ಷಮತೆಯನ್ನು ದಾಖಲಿಸುವ ಸಾಧ್ಯತೆಯಿದೆ. ಆದರೂ ವಿಶ್ವದಲ್ಲಿ ಇದೀಗ ಕೇವಲ ಎರಡು ರಾಷ್ಟ್ರಗಳು ಮಾತ್ರವೇ ಸಕಾರಾತ್ಮಕ ಆರ್ಥಿಕ ಬೆಳವಣಿಗೆ ದಾಖಲಿಸಿದೆ. ಅದರಲ್ಲಿ ಒಂದು ಭಾರತವಾಗಿದ್ದರೆ ಇನ್ನೊಂದು ಚೀನಾ. ಚೀನಾ ಆರ್ಥಿಕ ಬೆಳವಣಿಗೆ 1.2 ಪರ್ಸೆಂಟ್‌ರಷ್ಟು ಇರಲಿದೆ ಎಂದು ಐಎಂಎಫ್ ಊಹಿಸಿದೆ.

"ನಾವು 2020 ರಲ್ಲಿ ಜಾಗತಿಕ ಬೆಳವಣಿಗೆಯನ್ನು 3 ಪರ್ಸೆಂಟ್ ಎಂದು ಅಂದಾಜಿಸಿದ್ದೇವೆ. ಇದು ಜನವರಿ 2020 ರಿಂದ 6.3 ಪರ್ಸೆಂಟ್ ಕೆಳಗಿಳಿದಿದೆ. ಬಹಳ ಕಡಿಮೆ ಅವಧಿಯಲ್ಲಿ ಪ್ರಮುಖ ಪರಿಷ್ಕರಣೆಯಾಗಿ ಇದನ್ನು ಪರಿಗಣಿಸಬೇಕು" ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರ ಸಂಶೋಧಕಿ ಗೀತಾ ಗೋಪಿನಾಥ್ ಹೇಳಿದ್ದಾರೆ.
ಮುಂದುವರಿದ ಆರ್ಥಿಕತೆ ರಾಷ್ಟ್ರಗಳಲ್ಲಿ ಹೆಚ್ಚಿನ ದೇಶಗಳು ಈ ವರ್ಷ ಕಡಿಮೆ ಬೆಳವಣಿಗೆ ದಾಖಲಿಸಲಿದೆ. ಇದರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ (5.9 ಪರ್ಸೆಂಟ್), ಜಪಾನ್ (5.2 ಪರ್ಸೆಂಟ್), ಯುನೈಟೆಡ್ ಕಿಂಗ್‌ಡಮ್ (6.5 ಪರ್ಸೆಂಟ್), ಜರ್ಮನಿ (7.0 ಪರ್ಸೆಂಟ್), ಫ್ರಾನ್ಸ್ (7.2 ಪರ್ಸೆಂಟ್), ಇಟಲಿ ( 9.1 ಪರ್ಸೆಂಟ್), ಮತ್ತು ಸ್ಪೇನ್ (8 ಪರ್ಸೆಂಟ್) ಪ್ರಮಾಣದಲ್ಲಿ ಬೆಳವಣಿಗೆ ಕಾಣಲಿದೆ ಎಂದು ಐಎಂಎಫ್ ವರದಿ ತಿಳಿಸಿದೆ.


Click it and Unblock the Notifications