ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣ (Bengaluru Airport) ಇಂದು ಭಾರೀ ಬೇಡಿಕೆಯಲ್ಲಿದೆ. ಇದೀಗ ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್ ನಿರ್ಮಾಣಕ್ಕೆ ಸರ್ಕಾರ ಸಜ್ಜಾಗಿದೆ. ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕಾಗಿ ರಾಜ್ಯ ಸರ್ಕಾರ ಕೂಡಾ ನಿರಂತರ ಕೆಲಸದಲ್ಲಿ ನಿರತವಾಗಿದೆ. ಅಲ್ಲದೇ ಈಗಾಗಲೇ ಮೂರು ಸ್ಥಳಗಳನ್ನೂ ಗುರುತಿಸಿ, ಎಎಐಗೆ ಕಳುಹಿಸಿದೆ. ಆದರೆ ಈ ಸ್ಥಳಗಳು ಸದ್ಯ ಪರೀಕ್ಷೆಯಲ್ಲಿದ್ದು, ಮುಂದಿನ ಕೆಲವೇ ದಿನಗಳಲ್ಲಿ ವಿಮಾನ ನಿಲ್ದಾಣಕ್ಕೆ ಸ್ಥಳ ಕೂಡಾ ಅಂತಿಮವಾಗಲಿದೆ.

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಯೋಜನೆಯು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (KSIIDC) ಮೂರು ಅಂತಿಮಗೊಳಿಸಿದ ಸ್ಥಳಗಳ ಕುರಿತು ವಿವರವಾದ ಕಾರ್ಯತಂತ್ರ ಮತ್ತು ತಾಂತ್ರಿಕ ಸ್ಥಳ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲು, ಸಲಹೆಗಾರರನ್ನು ಆಹ್ವಾನಿಸುವ ಉದ್ದೇಶದಿಂದ ಟೆಂಡರ್ ಕರೆದಿದೆ.
ವಿಮಾನ ನಿಲ್ದಾಣ ಪ್ರಾಧಿಕಾರವು (AAI) ಈ ಸ್ಥಳಗಳ ಕುರಿತು ಕೇವಲ ಪ್ರಾಥಮಿಕ ಮೌಲ್ಯಮಾಪನವನ್ನು ಮಾತ್ರ ನಡೆಸಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಟೆಂಡರ್ ಕುರಿತು ಮಾತನಾಡಿದ ಪಾಟೀಲ್, "ಅವರ ಪ್ರಾಥಮಿಕ ಮೌಲ್ಯಮಾಪನವನ್ನು ಆಧರಿಸಿ, ನಾವು ಯೋಜನೆ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ. ಇದರ ಆಧಾರದ ಮೇಲೆ ನಾವು ಸ್ಥಳವನ್ನು ಆಯ್ಕೆ ಮಾಡುತ್ತೇವೆ. ವಿಮಾನ ನಿಲ್ದಾಣದ ಸಲಹೆಗಾಗಿ ಮುಖ್ಯ ಟೆಂಡರ್‌ಗಳಲ್ಲಿ ಇದು ಮೊದಲನೆಯದು" ಎಂದು ಹೇಳಿದ್ದಾರೆ.
ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಟೆಂಡರ್ ಕರೆ!
ಕಾರ್ಯಸಾಧ್ಯತಾ ವರದಿಯು ವಿಮಾನ ನಿಲ್ದಾಣದ ಸ್ಥಳವನ್ನು ಅಂತಿಮಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಅಂತಿಮಗೊಳಿಸಿದ ಮೂರು ಸ್ಥಳಗಳ ಪೈಕಿ, ಎರಡು ಕನಕಪುರ ರಸ್ತೆಗೆ ಸಮೀಪವಿದ್ದರೆ, ಒಂದು ತುಮಕೂರು ರಸ್ತೆಯ ಬಳಿ ಇದೆ. ಕನಕಪುರ ರಸ್ತೆಯ ಸಮೀಪವಿರುವ ಸ್ಥಳಗಳು ಪಕ್ಕದಲ್ಲಿದ್ದು, ಒಂದಕ್ಕೊಂದು ಹೊಂದಿಕೊಂಡಿವೆ. ಇವುಗಳ ಸಾಮರ್ಥ್ಯದ ಬಗ್ಗೆ ಅಧ್ಯಯನ ಮಾಡಲು, ಕಾರ್ಯಸಾಧ್ಯತಾ ಅಧ್ಯಯನದ ಭಾಗವಾಗಿ ಇವುಗಳನ್ನು ಪ್ರತ್ಯೇಕವಾಗಿ ಹಾಗೂ ಜಂಟಿಯಾಗಿ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಹೇಳಲಾಗಿದೆ
ವರದಿ ಪ್ರಕಾರ, ಆಯ್ಕೆಯಾದ ಸಲಹೆಗಾರರ ಕೆಲಸವು ನಾಲ್ಕು ಪ್ರಮುಖ ಗುಂಪುಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ, ಸ್ಥಳ ಕಾರ್ಯಸಾಧ್ಯತೆ ಕುರಿತು ಎಎಐ ಅಧ್ಯಯನದ ಮೌಲ್ಯಮಾಪನ, ಸ್ಥಳದ ತಾಂತ್ರಿಕ ಕಾರ್ಯಸಾಧ್ಯತೆಯ ಮೌಲ್ಯಮಾಪನ, ಸ್ಥಳ ಆಯ್ಕೆಗಾಗಿ ಕಾರ್ಯತಂತ್ರದ ಚೌಕಟ್ಟಿನ ಅಭಿವೃದ್ಧಿ ಮತ್ತು ಆದ್ಯತೆಯ ಸ್ಥಳದ ಆಯ್ಕೆ.
ಆಯ್ಕೆಯಾದ ಸಲಹೆಗಾರರು ತಾಂತ್ರಿಕವಾಗಿ, ಕಾರ್ಯಸಾಧ್ಯತೆ ಬಗ್ಗೆ, ಕಾರ್ಯಾಚರಣೆ ಬಗ್ಗೆ, ಪರಿಸರ ಮತ್ತು ಆರ್ಥಿಕ ಅಂಶಗಳನ್ನು ಒಳಗೊಂಡ ಬಹುಮುಖಿ ಮೌಲ್ಯಮಾಪನವನ್ನು ನಡೆಸುತ್ತಾರೆ. ಇದು ಎಎಐನ ಹಿಂದಿನ ಕಾರ್ಯಸಾಧ್ಯತಾ ಅಧ್ಯಯನಗಳ ಸಂಪೂರ್ಣ ವಿಶ್ಲೇಷಣೆಯೊಂದಿಗೆ ಪ್ರಾರಂಭವಾಗುತ್ತದೆ. ಭೂಮಿ ಗಾತ್ರ, ಮಳೆ ಮಾದರಿ, ಭೂಗೋಳ, ವಲಯ, ಹವಾಮಾನ ಪರಿಸ್ಥಿತಿಗಳು ಮತ್ತು ಪರಿಸರ ಅಧ್ಯಯನದ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತದೆ..
ಅಷ್ಟೇ ಅಲ್ಲದೇ ವಿದ್ಯುತ್, ನೀರು ಮತ್ತು ಒಳಚರಂಡಿ ಮೂಲಸೌಕರ್ಯಗಳ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತದೆ.


Click it and Unblock the Notifications