ಆಧಾರ್ ಹಾಗೂ ರೇಷನ್ ಕಾರ್ಡ್ ಇನ್ನೂ ಜೋಡಣೆ ಮಾಡಿಸಿಲ್ಲ ಅಂತ ಟೆನ್ಷನ್ ಆಗಿದ್ದೀರಾ? ಅಷ್ಟೆಲ್ಲ ಗಾಬರಿ ಆಗಬೇಡಿ. ನಿಮ್ಮ ಪಾಲಿಗೆ ಸಿಗಬೇಕಾದ ಆಹಾರ ಧಾನ್ಯಗಳು ಸಿಗುತ್ತವೆ. ಆಧಾರ್- ರೇಷನ್ ಕಾರ್ಡ್ ಜೋಡಣೆಗೆ ಈ ವರ್ಷದ ಸೆಪ್ಟೆಂಬರ್ ಕೊನೆ ತನಕ ಸರ್ಕಾರ ಅವಕಾಶ ನೀಡಿದೆ. ಆಹಾರ ಮತ್ತು ಸಾರ್ವಜನಿಕ ವಿತರಣೆ, ಗ್ರಾಹಕ ವ್ಯವಹಾರಗಳ ಸಚಿವಾಲಯದಿಂದ ಈ ಬಗ್ಗೆ ಸ್ಪಷ್ಟನೆ ಬಂದಿದೆ.
ಆಧಾರ್ ಗೆ ಜೋಡಣೆ ಆಗಿಲ್ಲ ಎಂಬ ಕಾರಣಕ್ಕೆ ಯಾವುದೇ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಆಹಾರ ವಿತರಣೆ ನಿಲ್ಲಲ್ಲ, ಹೆಸರು ಕೂಡ ತೆಗೆದುಹಾಕಲ್ಲ. ಆಧಾರ್- ರೇಷಣ್ ಕಾರ್ಡ್ ಜೋಡಣೆಗೆ ಸೆಪ್ಟೆಂಬರ್ 30, 2020ರ ತನಕ ಅವಧಿ ವಿಸ್ತರಣೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಸ್ಪಷ್ಟಪಡಿಸಲಾಗಿದೆ.
ಅರ್ಹ ಫಲಾನುಭವಿಗಳಿಗೆ ಧಾನ್ಯ ನಿರಾಕರಿಸುವಂತಿಲ್ಲ
ಯಾವುದೇ ಅರ್ಹ ಫಲಾನುಭವಿಗಳಿಗೆ ಅಥವಾ ಕುಟುಂಬಗಳಿಗೆ ಆಹಾರ ಧಾನ್ಯವನ್ನು ನಿರಾಕರಿಸುವಂತಿಲ್ಲ ಎಂದು ಸಚಿವಾಲಯದಿಂದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಚಿವಾಲಯದಿಂದ ಸ್ಪಷ್ಟ ಸೂಚನೆ ನೀಡಲಾಗಿದೆ. ಆಧಾರ್ ನಂಬರ್ ಇಲ್ಲ ಅನ್ನೋ ಕಾರಣದಿಂದ ಅವರ ಹೆಸರನ್ನು ಅಥವಾ ರೇಷನ್ ಕಾರ್ಡ್ ಗಳನ್ನು ತೆಗೆದುಹಾಕಬಾರದು ಅಥವಾ ರದ್ದು ಮಾಡಬಾರದು ಎಂದು ತಿಳಿಸಲಾಗಿದೆ.
80 ಕೋಟಿ ಮಂದಿಗೆ ಅತ್ಯಂತ ಕಡಿಮೆ ದರದಲ್ಲಿ ವಿತರಣೆ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ಕೇಂದ್ರ ಸರ್ಕಾರವು 80 ಕೋಟಿ ಮಂದಿಗೆ ಅತ್ಯಂತ ಕಡಿಮೆ ದರದಲ್ಲಿ, ಅಂದರೆ ಕೇಜಿಗೆ 2- 3 ರುಪಾಯಿಯಂತೆ ಆಹಾರ ಧಾನ್ಯ ವಿತರಿಸುತ್ತದೆ. ಲಾಕ್ ಡೌನ್ ಅವಧಿಯಲ್ಲಿ ಇನ್ನಷ್ಟು ವಿನಾಯಿತಿ ನೀಡಬೇಕು ಎಂಬ ಕಾರಣಕ್ಕೆ ಹೆಚ್ಚುವರಿಯಾಗಿ 5 ಕೇಜಿ ಆಹಾರ ಧಾನ್ಯವನ್ನು ಪ್ರತಿ ತಿಂಗಳು ಉಚಿತವಾಗಿ ನೀಡುತ್ತದೆ. ಇದು ಏಪ್ರಿಲ್- ಮೇ- ಜೂನ್ ತಿಂಗಳಿಗೆ ಅನ್ವಯಿಸುತ್ತದೆ.
ಒಂದು ದೇಶ, ಒಂದು ಪಡಿತರ ಚೀಟಿ ಯೋಜನೆ
ಸದ್ಯಕ್ಕೆ 23.5 ಕೋಟಿ ರೇಷನ್ ಕಾರ್ಡ್ ಗಳ ಪೈಕಿ ಶೇಕಡಾ 90ರಷ್ಟು ಆಧಾರ್ ಜತೆಗೆ ಜೋಡಣೆ ಆಗಿವೆ (ಕುಟುಂಬದಲ್ಲಿ ಕನಿಷ್ಠ ಒಬ್ಬ ಸದಸ್ಯರು). 80 ಕೋಟಿ ಫಲಾನುಭವಿಗಳಲ್ಲಿ 85 ಪರ್ಸೆಂಟ್ ನಷ್ಟು ಮಂದಿ ರೇಷನ್ ಕಾರ್ಡ್ ಗೆ ಆಧಾರ್ ಜೋಡಣೆ ಮಾಡಿಸಿದ್ದಾರೆ. ಒಂದು ದೇಶ, ಒಂದು ಪಡಿತರ ಚೀಟಿ ಯೋಜನೆ ಅಡಿಯಲ್ಲಿ ಬಡವರು ಹಾಗೂ ವಲಸಿಗರ ಹಿತ ರಕ್ಷಣೆಗೆ ಪ್ರಯತ್ನಿಸಲಾಗುತ್ತಿದೆ.


Click it and Unblock the Notifications