ಕೋವಿಡ್-19 ಎರಡನೇ ಅಲೆ ತಗ್ಗುತ್ತಿರುವ ಖುಷಿ ಒಂದು ಕಡೆಯಾದ್ರೆ, ತೈಲ ದರ ಏರಿಕೆಯು ಭಾರತದ ಆರ್ಥಿಕ ಚೇತರಿಕೆಗೆ ದೊಡ್ಡ ಸವಾಲಾಗಿ ಕಾಣಿಸುತ್ತಿದ್ದು, ಹಣದುಬ್ಬರ ನಿಯಂತ್ರಣಕ್ಕೆ ಬಾರದ ಸ್ಥಿತಿಗೆ ತಲುಪುವ ಮುನ್ಸೂಚನೆ ನೀಡುತ್ತಿದೆ.
ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಕ್ರಮೇಣ ನಿರ್ಬಂಧಗಳು ಸಡಿಲಗೊಳ್ಳುತ್ತಿದ್ದು, ನಿಧಾನಗತಿಯಲ್ಲಿ ಆರ್ಥಿಕ ಚಟುವಟಿಕೆಗಳು ಪುನಾರಂಭಗೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯು ನಿರಂತವಾಗಿ ಸಾಗಿರುವುದು ಕೇಂದ್ರ ಸರ್ಕಾರಕ್ಕೆ ತಲೆ ನೋವು ತರಿಸಿದೆ.
ಈಗಾಗಲೇ ತೈಲ ದರ ಏರಿಕೆಯ ಪರಿಣಾಮ ಆಹಾರ ಪದಾರ್ಥಗಳು ಸೇರಿದಂತೆ ಅನೇಕ ದಿನಬಳಕೆ ವಸ್ತುಗಳ ಬೆಲೆಯು ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯು ಸಾರಿಗೆ ವೆಚ್ಚವನ್ನು ಹೆಚ್ಚಿಸುತ್ತಿದ್ದರ ಪರಿಣಾಮ ವಸ್ತುಗಳ ಬೆಲೆ, ಸೇವೆಗಳ ನಿಗದಿತ ಬೆಲೆಯು ಏರಿಕೆಯಾಗತೊಡಗಿದೆ.
ಕಚ್ಚಾ ತೈಲ ಬೆಲೆ ಏರಿಕೆಯ ಬಿಸಿ ಹೆಚ್ಚಾಗಿದೆ
ಕೋವಿಡ್-19 ಸಾಂಕ್ರಾಮಿಕ ಮೊದಲ ಬಾರಿಗೆ ಸ್ಫೋಟಗೊಂಡಾಗ ಜಾಗತಿಕವಾಗಿ ಲಾಕ್‌ಡೌನ್ ಬಿಸಿ ಜೋರಾಗಿತ್ತು. ಈ ವೇಳೆ ಕಚ್ಚಾ ತೈಲ ದರವು ಸಾರ್ವಕಾಲಿಕ ದಾಖಲೆಯ ಮಟ್ಟದಲ್ಲಿ ಕುಸಿತಗೊಂಡಿತ್ತು. ಇದರ ಲಾಭವನ್ನ ವಿಶ್ವದ ಅನೇಕ ರಾಷ್ಟ್ರಗಳು ಪಡೆದಿದ್ದು, ಅದ್ರಲ್ಲೂ ಭಾರತದಂತಹ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರಕ್ಕೆ ಹೆಚ್ಚಿನ ಲಾಭವಾಗಿದೆ.
ಆದರೆ ಈ ವೇಳೆ ಈ ಲಾಭವನ್ನು ಕೇಂದ್ರ ಸರ್ಕಾರವು ಜನಸಾಮಾನ್ಯರಿಗೆ ತಲುಪಿಸಿರಲಿಲ್ಲ. ಆದರೆ ಈಗ ಕಚ್ಚಾ ತೈಲ ಬೆಲೆಯು ಸತತ ಏರಿಕೆಯಾಗುತ್ತಿದ್ದು, ಭಾರತದಲ್ಲಿ ತೈಲ ದರ ಏರಿಕೆಯು ಆಟೋ ಮೀಟರ್‌ನಂತೆ ಏರಿಕೆಯಾಗುತ್ತಿದೆ.
ಕಚ್ಚಾ ತೈಲ ಬೆಲೆ ಕುಸಿಯುತ್ತಿದ್ದರೂ ತೆರಿಗೆ ಹೆಚ್ಚಿಸಲಾಗಿತ್ತು!
ಹೌದು, ಈ ಮೇಲೆ ತಿಳಿಸಿದಂತೆ ಕಚ್ಚಾ ತೈಲ ಬೆಲೆ ನಿರಂತರ ಕುಸಿತ ಕಂಡಾಗಲೂ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನ ಏರಿಕೆ ಮಾಡುತ್ತಲೇ ಸಾಗಿತ್ತು. ಇದರ ಪರಿಣಾಮವನ್ನ ಇದೀಗ ಭಾರತವು ಎದುರಿಸುತ್ತಿದೆ. ಮುಂಬೈ ನಂತರಹ ಪ್ರಮುಖ ಭಾರತೀಯ ನಗರಗಳಲ್ಲಿ ಗ್ಯಾಸೋಲಿನ್ ಖರೀದಿಸಲು ನ್ಯೂಯಾರ್ಕ್‌ಗಿಂತ ದುಪ್ಪಟ್ಟು ವೆಚ್ಚವಾಗುತ್ತದೆ.
ಕಳೆದ ಮೂರು ವರ್ಷಗಳಲ್ಲಿ ಮುಂಬೈ ಗ್ಯಾಸೋಲಿನ್ ಮೇಲಿನ ವೆಚ್ಚವು 25% ಕ್ಕಿಂತ ಹೆಚ್ಚಾಗಿದೆ, ಅದೇ ಅವಧಿಯಲ್ಲಿ ಡೀಸೆಲ್ ಬೆಲೆ ಮೂರನೇ ಒಂದು ಭಾಗದಷ್ಟು ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪ್‌ನ ಅಂಕಿ ಅಂಶಗಳು ತಿಳಿಸಿವೆ. ವ್ಯಾಪಕ ಸರಕುಗಳ ಬೆಲೆ ಏರಿಕೆಯ ಮಧ್ಯೆ ಭಾರತದ ಆರ್ಥಿಕತೆಗೆ ಹಣದುಬ್ಬರ ಒತ್ತಡವನ್ನು ಹೆಚ್ಚಿಸುತ್ತಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಶೇಕಡಾ 20ರಷ್ಟು ಏರಿಕೆ
ಹೌದು ವಾಣಿಜ್ಯ ನಗರಿ ಮುಂಬೈ ಅಷ್ಟೇ ಅಲ್ಲದೆ ಭಾರತದ ರಾಜಧಾನಿ ನವದೆಹಲಿಯಲ್ಲಿ, ಪೆಟ್ರೋಲ್ ಬೆಲೆಗಳು ವರ್ಷದಿಂದ ಇಲ್ಲಿಯವರೆಗೆ ಸುಮಾರು 20% ನಷ್ಟು ಹೆಚ್ಚಾಗಿದೆ. ಡೀಸೆಲ್ ವೆಚ್ಚದಲ್ಲಿ ಕೂಡ ಇದೇ ರೀತಿಯ ಏರಿಕೆಯಾಗಿದೆ. ಸ್ಕೂಟರ್‌ಗಳು ಮತ್ತು ಮೋಟರ್‌ಸೈಕಲ್‌ಗಳಿಗೆ ಶಕ್ತಿ ನೀಡುವ ಗ್ಯಾಸೋಲಿನ್ ಮೇಲಿನ ಕೇಂದ್ರ ಸರ್ಕಾರ ತೆರಿಗೆಗಳು ಕಳೆದ ಏಳು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ದೇಶದ ಹೆಚ್ಚು ಬಳಕೆಯಾಗುವ ಇಂಧನವಾದ ಡೀಸೆಲ್ ದರದಲ್ಲಿ ಇದೇ ಅವಧಿಯಲ್ಲಿ ಏಳು ಪಟ್ಟು ಹೆಚ್ಚಿದೆ.
ಮಧ್ಯಮ ವರ್ಗದ ಮೇಲೆ ಹೆಚ್ಚಿನ ಹೊರೆ
ತೈಲ ದರ ನಿರಂತಹ ಏರಿಕೆಯು ದೇಶದ ಬೆಳೆಯುತ್ತಿರುವ ಮಧ್ಯಮ ವರ್ಗದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ನವದೆಹಲಿಯ ಜಾಹೀರಾತು ಏಜೆನ್ಸಿಯ 48 ವರ್ಷದ ಮಾಜಿ ಕಾರ್ಯನಿರ್ವಾಹಕ ರಾಹುಲ್ ಶ್ರೀವಾಸ್ತವ, ಕಳೆದ ವರ್ಷ ದೇಶಾದ್ಯಂತ ಲಾಕ್‌ಡೌನ್‌ಗೆ ಹೋಗುವ ಒಂದು ತಿಂಗಳ ಮೊದಲು ಹೊಸ ಸೆಡಾನ್ ಖರೀದಿಸಿದ್ದರು. ಆದರೆ ಈಗ ಅವರು ತನ್ನ ವಾಹನವನ್ನು ಮಾರಾಟ ಮಾಡುವ ಬಗ್ಗೆ ಯೋಚಿಸುತ್ತಿದ್ದಾರೆ.
"ಕಾರನ್ನು ಚಾಲನೆ ಮಾಡುವುದು ಈಗ ನನಗೆ ತುಂಬಾ ದುಬಾರಿ ಎನಿಸಿದೆ" ಎಂದು ಶ್ರೀವಾಸ್ತವ ಹೇಳಿದರು. ಅವರು ತಮ್ಮ ಕೆಲಸವನ್ನು ಕಳೆದುಕೊಂಡ ನಂತರ ಸ್ಟಾಕ್ ಟ್ರೇಡಿಂಗ್‌ಗೆ ಮುಂದಾಗಿದ್ದಾರೆ.
ಇದು ಕೇವಲ ಒಂದು ಉದಾಹರಣೆಯಾಗಿದ್ದು, ಇಂತಹ ಅನೇಕ ಪರಿಸ್ಥಿತಿಯನ್ನ ಜನಸಾಮಾನ್ಯರು ಎದುರಿಸುತ್ತಿದ್ದಾರೆ.
ಭಾರತದ ಆರ್ಥಿಕ ಬೆಳವಣಿಗೆಯು ಹಿಮ್ಮುಖವಾಗಿ ಚಲಿಸತೊಡಗಿದೆ!
ಭಾರತದ ಆರ್ಥಿಕತೆಯು ಈಗ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 7.3% ಸಂಕೋಚನದಿಂದ ಮಾರ್ಚ್ ವರೆಗೆ ಹಿಂತಿರುಗುತ್ತಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಲಕ್ಷಾಂತರ ಜನರು ಒತ್ತಡದಲ್ಲಿದ್ದಾರೆ. ನಿರುದ್ಯೋಗ ಇನ್ನೂ ಹೆಚ್ಚುತ್ತಿದೆ. ಇತ್ತೀಚಿನ ಸಂಶೋಧನಾ ವರದಿಯೊಂದರ ಪ್ರಕಾರ 2020 ರಲ್ಲಿ ರಾಷ್ಟ್ರದ ಮಧ್ಯಮ ವರ್ಗ 32 ಮಿಲಿಯನ್ ಜನರಿಂದ ಕುಗ್ಗಿದೆ ಎಂದು ಅಂದಾಜಿಸಿದೆ.
ಸರಕು ಸಾಗಣೆ ವೆಚ್ಚ ಹೆಚ್ಚಾಗಿದೆ
ಇಂಧನ ಬೆಲೆಗಳು ಗಗನಕ್ಕೇರುತ್ತಿರುವುದರಿಂದ, ಭಾರತದ ಲಾರಿ, ಟ್ರಕ್‌ಗಳ ಮೂಲಕ ಸಾಗಣೆ ವೆಚ್ಚವು ಹೆಚ್ಚಾಗಿದೆ. 14 ದಶಲಕ್ಷಕ್ಕೂ ಹೆಚ್ಚು ಟ್ರಕ್ಕರ್‌ಗಳು ಮತ್ತು ಬಸ್ ಮತ್ತು ಪ್ರವಾಸಿ ವಾಹನ ನಿರ್ವಾಹಕರನ್ನು ಪ್ರತಿನಿಧಿಸುವ ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ ಪ್ರಕಾರ, ತೈಲದ ಮೇಲಿನ ಖರ್ಚು ಟ್ರಕ್ ಅನ್ನು ನಿರ್ವಹಿಸುವ ವೆಚ್ಚದ ಸುಮಾರು 70% ನಷ್ಟಿದೆ.
''ಡೀಸೆಲ್ ಮತ್ತು ಗ್ಯಾಸೋಲಿನ್ ದರಗಳು ಹೆಚ್ಚಿರುವುದು ಲಕ್ಷಾಂತರ ಸಣ್ಣ ಸಾರಿಗೆ ನಿರ್ವಾಹಕರು ಮತ್ತು ಕೂಲಿ ಸಂಪಾದಕರ ಜೀವನೋಪಾಯದ ಮೇಲೆ ಪರಿಣಾಮ ಬೀರಿವೆ. ಅವರು ತಿಂಗಳನ್ನ ದೂಡಲು ಹೆಣಗಾಡುತ್ತಿದ್ದಾರೆ" ಎಂದು ಎಐಎಂಟಿಸಿಯ ಅಧ್ಯಕ್ಷ ಕುಲ್ತರಣ್ ಸಿಂಗ್ ಅಟ್ವಾಲ್ ಹೇಳಿದರು.
ಸರ್ಕಾರವು ಇಂಧನ ಬೆಲೆಗಳನ್ನು ಕಡಿಮೆ ಮಾಡದಿದ್ದರೆ ಸಾರ್ವತ್ರಿಕವಾಗಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಎಐಎಂಟಿಸಿ ತಿಳಿಸಿದೆ.


Click it and Unblock the Notifications