ಭಾರತದ ಬೆಳವಣಿಗೆ ದರವು 4.5 ಪರ್ಸೆಂಟ್‌ಗೆ ಕುಸಿದಿದೆ. ಇದು ಜುಲೈ ಹಾಗೂ ಸೆಪ್ಟೆಂಬರ್ ಮಧ್ಯದ 2ನೇ ತ್ರೈಮಾಸಿಕ ಜಿಡಿಪಿ ದರವಾಗಿದೆ. ಇದು ಕಳೆದ 6 ವರ್ಷಗಳಲ್ಲಿ ದಾಖಲಾದ ಅತಿ ಕಡಿಮೆ ಬೆಳವಣಿಗೆ ದರವಾಗಿದೆ.
2019-20ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ 5 ಪರ್ಸೆಂಟ್ ದಾಖಲಾಗಿತ್ತು. 2018ರ ಇದೇ ಅವಧಿಯಲ್ಲಿ 7 ಪರ್ಸೆಂಟ್ ಜಿಡಿಪಿ ದಾಖಲಾಗಿತ್ತು. ಆರ್ಥಿಕ ತಜ್ಞರು ಅಂದಾಜು ಮಾಡಿದ್ದಕ್ಕಿಂತಲೂ ಜಿಡಿಪಿ ದರ ಕಡಿಮೆ ದಾಖಲಾಗಿದೆ.ವಿವಿಧ ಸುದ್ದಿ ಸಂಸ್ಥೆಗಳು 4.7 ಪರ್ಸೆಂಟ್ ಜಿಡಿಪಿ ದರ ದಾಖಲಾಗಬಹುದು ಎಂದು ಅಂದಾಜಿಸಿದ್ದವು.

ಈ ಹಿಂದೆ 2013ರ ಜನವರಿ-ಮಾರ್ಚ್ ಅವಧಿಯಲ್ಲಿ ಜಿಡಿಪಿ 4.3 ಪರ್ಸೆಂಟ್ ದಾಖಲಾಗಿತ್ತು. ಅದಾಗಿ ಆರೂವರೆ ವರ್ಷಗಳ ನಂತರ ಕಡಿಮೆ ಜಿಡಿಪಿ ದರ ಇದಾಗಿದೆ.
ಶುಕ್ರವಾರದಂದು ಬಿಡುಗಡೆಯಾಗಿರುವ ಈ ಅಂಕಿ-ಅಂಶವು ನಿರಾಶದಾಯಕವಾಗಿದೆ. ಇತ್ತೀಚೆಗೆ ಮುಕ್ತಾಯವಾದ ಹಬ್ಬದ ಋತುವಿನಲ್ಲಿ ಬೇಡಿಕೆ ಕುದುರಿದ್ದರಿಂದ ಜಿಡಿಪಿ ಸ್ವಲ್ಪ ಸುಧಾರಿಸಬಹುದು ಎಂಬ ನಿರೀಕ್ಷೆಯಿತ್ತು.
ಆದರೆ, ಸರ್ಕಾರವು ಈಗಲೂ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಭರವಸೆ ಇರಿಸಿಕೊಂಡಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಹಲವಾರು ಆರ್ಥಿಕ ಉತ್ತೇಜನ ಕ್ರಮಗಳನ್ನು ಘೋಷಿಸಿತ್ತು. ಕಾರ್ಪೋರೇಟ್ ತೆರಿಗೆ ಇಳಿಕೆ ಸೇರಿದಂತೆ ಇತರ ಉತ್ತೇಜನ ಕ್ರಮಗಳನ್ನು ಘೋಷಿಸಿ ಬೆಳವಣಿಗೆ ದರ ವೃದ್ದಿಗೆ ಎದುರು ನೋಡಲಾಗುತ್ತಿತ್ತು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಯಲ್ಲಿ ಬುಧವಾರ ಮಾತನಾಡುತ್ತಾ ಪ್ರಗತಿ ಕಡಿಮೆಯಾಗಿದೆಯೇ ಹೊರತು ಇದು ಆರ್ಥಿಕ ಹಿಂಜರಿತವಲ್ಲ ಹಾಗೂ ಹಿಂಜರಿತ ಎಂದಿಗೂ ಆಗೋದಿಲ್ಲ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.


Click it and Unblock the Notifications