ಪಾಕಿಸ್ತಾನ ಮತ್ತು ಅದರ ಪ್ರಧಾನಿ ಇಮ್ರಾನ್ ಖಾನ್ ಗೆ ಗುರುವಾರ ಮುಟ್ಟಿ ನೋಡಿಕೊಳ್ಳುವಂಥ ಪ್ರತ್ಯುತ್ತರ ನೀಡಿದೆ ಭಾರತ. ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆ ಆದ ಮೇಲೆ, ಅದರಿಂದ ಬಾಧಿತರಾದವರಿಗೆ ಭಾರತ ಸರ್ಕಾರ ಆರ್ಥಿಕ ನೆರವು ನೀಡುವ ಪ್ಯಾಕೇಜ್ ಘೋಷಿಸಿತ್ತು. ಅದನ್ನು ಫಲಾನುಭವಿಗಳಿಗೆ ತಲುಪಿಸಲು ಭಾರತ ಸರ್ಕಾರದ ಜತೆ ಪಾಕಿಸ್ತಾನದಲ್ಲಿ ಅಳವಡಿಸಿಕೊಂಡಂಥ ಕಾರ್ಯಕ್ರಮದ ಮಾಹಿತಿ ಹಂಚಿಕೊಳ್ಳಲು ಸಿದ್ಧ ಎಂದು ಇಮ್ರಾನ್ ಘೋಷಿಸಿದ್ದರು.
ಇಮ್ರಾನ್ ಖಾನ್ ಪ್ರಸ್ತಾವ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಮಾತನಾಡಿ, ಭಾರತದ ಆರ್ಥಿಕ ಉತ್ತೇಜನ ಪ್ಯಾಕೇಜ್ ಒಂದು ವರ್ಷದ ಪಾಕಿಸ್ತಾನದ ಜಿಡಿಪಿಗಿಂತ ಹೆಚ್ಚಿದೆ ಎಂಬುದನ್ನು ಅವರು ನೆನಪಿಟ್ಟುಕೊಳ್ಳುವುದು ಉತ್ತಮ ಎಂದಿದ್ದಾರೆ.
20 ಲಕ್ಷ ಕೋಟಿ ರುಪಾಯಿ ಆರ್ಥಿಕ ಪ್ಯಾಕೇಜ್
ಕಳೆದ ತಿಂಗಳು ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರುಪಾಯಿ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಘೋಷಿಸಿದ್ದರು. ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಈಡಾಗಿರುವವರಿಗೆ ಹಾಗೂ ಆರ್ಥಿಕತೆಗೆ ನೆರವಾಗಲಿ ಎಂದು ಈ ಘೋಷಣೆ ಮಾಡಲಾಗಿದೆ. ಈ ಮೊತ್ತವು ವಲಸಿಗ ಕಾರ್ಮಿಕರು, ಬಡವರು ಸೇರಿದಂತೆ ಯಾವ ಕ್ಷೇತ್ರಕ್ಕೆ, ಎಷ್ಟು ಎಂದು ಆ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದರು.
ಬೇರೆ ದೇಶಕ್ಕೆ ಹಣ ಸಾಗಿಸುವುದಕ್ಕೆ ಪಾಕಿಸ್ತಾನ ನಾಯಕರು ಕುಖ್ಯಾತಿ
ಅನುರಾಗ್ ಶ್ರೀವಾಸ್ತವ್, ಪಾಕಿಸ್ತಾನವು ತನ್ನ ಜನರ ಖಾತೆಗೆ ಹಣ ಹಾಕುವುದಕ್ಕಿಂತ ಬೇರೆ ದೇಶಗಳ ಬ್ಯಾಂಕ್ ಖಾತೆಗಳಿಗೆ ಹಣ ಸಾಗಿಸುವುದಕ್ಕೇ ಹೆಸರುವಾಸಿ ಎಂದಿದ್ದು, ಆ ದೇಶದಲ್ಲಿನ ಪ್ರಮುಖ ರಾಜಕೀಯ ನಾಯಕರ ಮೇಲಿನ ಭ್ರಷ್ಟಾಚಾರ ಆರೋಪಗಳ ಕುರಿತು ಕುಟುಕಿದ್ದಾರೆ. ಪಾಕಿಸ್ತಾನದ ಬಹುತೇಕ ರಾಜಕೀಯ ನಾಯಕರು ಸಾರ್ವಜನಿಕರ ಹಣವನ್ನು ತೆರಿಗೆದಾರರ ಪಾಲಿನ ಸ್ವರ್ಗ ಎನಿಸಿಕೊಂಡ ದೇಶಗಳಲ್ಲಿ ಕಾನೂನುಬಾಹಿರವಾಗಿ ತಮ್ಮ ಖಾತೆಗಳಿಗೆ ಜಮೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಇದ್ದೇ ಇದೆ.
ಇಮ್ರಾನ್ ಖಾನ್ ಹೇಳಿದ್ದೇನು?
ಸ್ಪಷ್ಟವಾಗಿ ಹೇಳಬೇಕು ಅಂದರೆ, ಇಮ್ರಾನ್ ಖಾನ್ ಗೆ ಹೊಸ ಸಲಹೆಗಾರರು ಮತ್ತು ಉತ್ತಮ ಮಾಹಿತಿ ಅಗತ್ಯ ಇದೆ. ನಮಗೆಲ್ಲ ಅವರ ಸಾಲದ ಸಮಸ್ಯೆ ಗೊತ್ತೇ ಇದೆ (ಪಾಕಿಸ್ತಾನಕ್ಕೆ ಅದರ ಜಿಡಿಪಿಯ 90 ಪರ್ಸೆಂಟ್ ತನಕ ಸಾಲ ಇದೆ). ಇನ್ನು ಭಾರತದ ಆರ್ಥಿಕ ಉತ್ತೇಜನದ ಪ್ಯಾಕೇಜ್ ಪಾಕಿಸ್ತಾನದ ವಾರ್ಷಿಕ ಜಿಡಿಪಿಗಿಂತ ಹೆಚ್ಚಿದೆ ಎಂಬುದು ಸಹ ಗೊತ್ತಿರಲಿ ಎಂದು ಶ್ರೀವಾಸ್ತವ್ ತಿರುಗೇಟು ನೀಡಿದ್ದಾರೆ. ಈ ಪ್ರತಿಕ್ರಿಯೆ ನೀಡಲು ಕಾರಣವಾಗಿದ್ದು ಇಮ್ರಾನ್ ಖಾನ್ ಮಾಡಿದ್ದ ಟ್ವೀಟ್. ಅದರಲ್ಲಿ, ನಮ್ಮಲ್ಲಿ ಯಶಸ್ವಿಯಾದ ನಗದು ವರ್ಗಾವಣೆ ಕಾರ್ಯಕ್ರಮದ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಳ್ಳಲು ಸಿದ್ಧ. ಆ ಮೂಲಕ ಪಾರದರ್ಶಕವಾಗಿ ಜನರಿಗೆ ಹಣ ತಲುಪಿಸುವುದಕ್ಕೆ ಸಹಾಯ ಮಾಡುವುದಕ್ಕೆ ತಯಾರಿದ್ದೇನೆ ಎಂದು ಹೇಳಿದ್ದರು.
ಒಂದು ಕೋಟಿ ಕೊರೊನಾ ಬಾಧಿತರಿಗೆ ನಗದು ವರ್ಗಾವಣೆ
ವರದಿಗಳ ಪ್ರಕಾರ, ಏಪ್ರಿಲ್ 1ರಿಂದ ಪಾಕಿಸ್ತಾನದಲ್ಲಿ ಆರಂಭವಾದ ಕೊರೊನಾ ವೈರಸ್ ಪರಿಹಾರ ಕಾರ್ಯಕ್ರಮದಲ್ಲಿ ಒಂದು ಕೋಟಿ ಬಾಧಿತ ಕುಟುಂಬಗಳಿಗೆ ನಗದು ವರ್ಗಾವಣೆ ಮಾಡಲಾಗಿದೆ. ಇನ್ನು ಪಾಕಿಸ್ತಾನದಲ್ಲಿ ಭಾರತಕ್ಕೂ ಮುಂಚೆಯೇ ಲಾಕ್ ಡೌನ್ ನಿರ್ಬಂಧ ತೆರವು ಮಾಡಲಾಗಿದೆ. ಬಡಜನರಿಗೆ ಆರ್ಥಿಕ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡಲಾಯಿತು. ಲಾಕ್ ಡೌನ್ ನೆಗೆಟಿವ್ ಪರಿಣಾಮಕ್ಕೆ ಭಾರತ ಒಂದು ಉದಾಹರಣೆ ಎಂಬುದು ಇಮ್ರಾನ್ ಖಾನ್ ಸಮರ್ಥನೆ.


Click it and Unblock the Notifications