ಪೋಸ್ಟ್ ಆಫೀಸ್ ಅಂದರೆ ಬರೀ ಅಷ್ಟೇ ಅಲ್ಲ ಎಂಬುದು ನಿಮ್ಮ ಗಮನಕ್ಕೆ ಬಂದಿದೆಯಾ? ಮತ್ತಿನ್ನೇನು ಅನ್ನೋದು ಪ್ರಶ್ನೆಯಾದರೆ ಈ ಲೇಖನದಲ್ಲಿ ಉತ್ತರ ಇದೆ. ನಿಮ್ಮ ಅಗತ್ಯಗಳಿಗೆ ತಕ್ಕಂತೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ನಿಂದ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸದ್ಯಕ್ಕೆ ಮೂರು ಬಗೆಯ ಉಳಿತಾಯ ಖಾತೆಗಳಿವೆ. ರೆಗ್ಯುಲರ್, ಡಿಜಿಟಲ್ ಮತ್ತು ಬೇಸಿಕ್ ಸೇವಿಂಗ್ಸ್ ಅಕೌಂಟ್.
ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸುವುದರಿಂದ ಮೊದಲುಗೊಂಡು ಶೂನ್ಯ ಬ್ಯಾಲೆನ್ಸ್ ನ ಖಾತೆ ತೆರೆಯುವ ತನಕ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಹಲವಾರು ಸವಲತ್ತು ನೀಡುತ್ತಿದೆ. ಆ ಹೊಸ ಸವಲತ್ತುಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಝೀರೋ ಬ್ಯಾಲೆನ್ಸ್ ಖಾತೆ
ಸಾಮಾನ್ಯ ಉಳಿತಾಯ ಖಾತೆಯನ್ನು ಝೀರೋ ಬ್ಯಾಲೆನ್ಸ್ ನೊಂದಿಗೆ ಆರಂಭಿಸಬಹುದು. ಇದರ ಜತೆಗೆ ಸರಾಸರಿ ಮಂಥ್ಲಿ ಬ್ಯಾಲೆನ್ಸ್ ಇಷ್ಟೇ ಇರಬೇಕು ಎಂಬ ನಿಯಮವೂ ಇಲ್ಲ. ನಗದು ವಿಥ್ ಡ್ರಾ ಮೇಲೆ ಮಿತಿ ಇಲ್ಲ. ಸದ್ಯಕ್ಕೆ ಪ್ರತಿ ತ್ರೈ ಮಾಸಿಕಕ್ಕೆ ದಿನದ ಕೊನೆಯ ಬ್ಯಾಲೆನ್ಸ್ ಆಧಾರದಲ್ಲಿ 4% ಬಡ್ಡಿದರ ನೀಡಲಾಗುತ್ತದೆ. ಬಡ್ಡಿಯನ್ನು ತ್ರೈಮಾಸಿಕ ಲೆಕ್ಕಾಚಾರದಲ್ಲಿ ಕೊಡಲಾಗುತ್ತದೆ. 10 ವರ್ಷದ ಮೇಲ್ಪಟ್ಟವರು KYC ಮಾಹಿತಿಯೊಂದಿಗೆ ಇಂಡಿಯಾ ಪೇಮಂಟ್ಸ್ ಬ್ಯಾಂಕ್ ನಲ್ಲಿ ಖಾತೆ ತೆರೆಯಬಹುದು.
ಕ್ಯೂಆರ್ ಕಾರ್ಡ್
ಮಾಮೂಲಿ ಉಳಿತಾಯ ಖಾತೆಯೊಂದಿಗೆ ಬ್ಯಾಂಕ್ ನಿಂದ ವಿಶಿಷ್ಟವಾದ ಕ್ಯೂಆರ್ ಕಾರ್ಡ್ ನೀಡಲಾಗುತ್ತದೆ. ನೀವು ಈ ಕಾರ್ಡ್ ಬಳಸಲು ಪಿನ್/ಪಾಸ್ ವರ್ಡ್ ಯಾವುದನ್ನೂ ನೆನಪಿಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಬಯೋಮೆಟ್ರಿಕ್ ಬಳಸಿಯೇ ಕ್ಯೂಆರ್ ಕಾರ್ಡ್ ಕೆಲಸ ಮಾಡುತ್ತದೆ. ಪ್ರತಿ ವ್ಯವಹಾರಕ್ಕೂ ಮೊಬೈಲ್ ಫೋನ್ ನಂಬರ್ ಗೆ ಒಟಿಪಿ ಬರುತ್ತದೆ. ಅದನ್ನು ಬಳಸಿ, ಜತೆಗೆ ಅಧಿಕೃತವಾದ ದಾಖಲೆಯೊಂದನ್ನು ತೋರಿಸಬೇಕಾಗುತ್ತದೆ. ನಗದು ವ್ಯವಹಾರ, ಹಣ ವರ್ಗಾವಣೆ, ಬಿಲ್ ಪಾವತಿ, ನಗದುರಹಿತ ಶಾಪಿಂಗ್ ಅನ್ನು ಈ ಕ್ಯೂಆರ್ ಕಾರ್ಡ್ ಬಳಸಿ ಮಾಡಬಹುದು. ಒಂದು ವೇಳೆ ಈ ಕಾರ್ಡ್ ಕಳೆದುಹೋದಲ್ಲಿ ಅಥವಾ ಕಳುವಾದಲ್ಲಿಯೂ ನಿಮ್ಮ ಹಣ ಸುರಕ್ಷಿತವಾಗಿಯೇ ಇರುತ್ತದೆ. ಏಕೆಂದರೆ ಕ್ಯೂಆರ್ ಕಾರ್ಡ್ ನ ಪ್ರತಿ ವ್ಯವಹಾರ ಬಯೋಮೆಟ್ರಿಕ್ ಬಳಸಿಯೇ ಆಗುತ್ತದೆ.
ಮನೆ ಬಾಗಿಲಿಗೆ ಬ್ಯಾಂಕಿಂಗ್
ಖಾತೆ ತೆರೆಯುವುದಕ್ಕೆ ಶಾಖೆಗೆ ಹೋಗಬೇಕು ಅಂತಲೇ ಇಲ್ಲ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಿಂದ ಮನೆ ಬಾಗಿಲಿಗೆ ಸೇವೆಯನ್ನು ಒದಗಿಸಲಾಗುತ್ತದೆ. ನಿಮ್ಮ ಮನೆ ಬಾಗಿಲಿಗೇ ಬಂದು ಖಾತೆ ತೆರೆಯುವುದಕ್ಕೆ ಹೆಚ್ಚುವರಿ ಶುಲ್ಕ ಏನೂ ಇರುವುದಿಲ್ಲ. ನಗದು ಮತ್ತು ನಗದು ಹೊರತಾದ ವ್ಯವಹಾರಗಳನ್ನು ಮಾಡಬಹುದು. ಖಾತೆ ತೆರೆಯುವುದು, ಹಣ ವರ್ಗಾವಣೆ, ನಗದು ಜಮೆ, ವಿಥ್ ಡ್ರಾ, ರೀಚಾರ್ಜ್ ಮತ್ತು ಬಿಲ್ ಪಾವತಿಯನ್ನು ಈ ಮನೆ ಬಾಗಿಲಿನ ಸೇವೆಯಲ್ಲೇ ಮಾಡಬಹುದು. ಆಧಾರ್ ಕಾರ್ಡ್ ಬಳಸಿ ಈ ಖಾತೆ ತೆರೆದರೆ ಆಧಾರ್ ಜೋಡಣೆ ಆಗಿರುವ ಖಾತೆಗಳಿಗೆ ಮನೆ ಬಾಗಿಲಿನ ಬ್ಯಾಂಕಿಂಗ್ ವ್ಯವಸ್ಥೆ ಬಳಸಬಹುದು. ಐಪಿಪಿಬಿ ಖಾತೆಯಿಂದ ಮಾತ್ರ ಅಲ್ಲ, ಇತರ ಆಧಾರ್ ಗೆ ಸಂಬಂಧಿಸಿದ ಬ್ಯಾಂಕ್ ಅಕೌಂಟ್ ನಿಂದ ಹಣ ವಿಥ್ ಡ್ರಾ ಮಾಡಬಹುದು. ಈ ಮನೆ ಬಾಗಿಲಿನ ಬ್ಯಾಂಕಿಂಗ್ ಸೇವೆಗೆ ಸ್ವಲ್ಪ ಮಟ್ಟಿಗೆ ಶುಲ್ಕ ವಿಧಿಸಲಾಗುತ್ತದೆ. ನಗದು ವಿಥ್ ಡ್ರಾ ಮತ್ತು ಜಮೆಗೆ ಪ್ರತಿ ವ್ಯವಹಾರಕ್ಕೆ ಇಪ್ಪತ್ತೈದು ರುಪಾಯಿ, ನಗದು ಜಮೆ ಮತ್ತು ವಿಥ್ ಡ್ರಾ ಹೊರತಾದ ಇತರ ಸೇವೆಗೆ ತಲಾ ಹದಿನೈದು ರುಪಾಯಿ ಪಾವತಿಸಬೇಕಾಗುತ್ತದೆ.
ಡಿಜಿಟಲ್ ಉಳಿತಾಯ ಖಾತೆ
ಐಪಿಪಿಬಿಯ ಮತ್ತೊಂದು ವಿಶಿಷ್ಟ ಫೀಚರ್ ಅಂದರೆ ಡಿಜಿಟಲ್ ಉಳಿತಾಯ ಖಾತೆ. ಐಪಿಪಿಬಿಯ ಮೊಬೈಲ್ ಅಪ್ಲಿಕೇಷನ್ ನಿಂದ ಡಿಜಿಟಲ್ ಖಾತೆಯನ್ನು ತೆರೆಯಬಹುದು. ಹದಿನೆಂಟು ವರ್ಷ ಮೇಲ್ಪಟ್ಟವರು ಈ ಖಾತೆ ತೆರೆಯಲು ಅರ್ಹರು. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಎರಡೂ ಕಡ್ಡಾಯ. ಒಂದು ವರ್ಷದಲ್ಲಿ ಈ ಖಾತೆಯಲ್ಲಿ ಎರಡು ಲಕ್ಷ ರುಪಾಯಿ ತನಕ ಹಣ ಇಡಬಹುದು. ಅದಕ್ಕೂ ಮುನ್ನ ಕೆವೈಸಿಯನ್ನು ಪೂರ್ಣಗೊಳಿಸಬೇಕು. ಅದಕ್ಕಾಗಿ ಐಪಿಪಿಬಿ ಕೇಂದ್ರಕ್ಕೆ ಭೇಟಿ ನೀಡಬೇಕು.


Click it and Unblock the Notifications