ಜಾಗತಿಕವಾಗಿ ಕಾಡುತ್ತಿರುವ ಆರ್ಥಿಕ ಹಿಂಜರಿತವು ಹಲವಾರು ದೇಶಗಳ ಮೇಲೆ ಪರಿಣಾಮ ಉಂಟು ಮಾಡಿದೆ. ಇದರಿಂದ ಭಾರತವು ಕೂಡಾ ಹೊರತಾಗಿಲ್ಲ ಅದಕ್ಕೆ ಬುಧವಾರ ಬಿಡುಗಡೆ ಮಾಡಲಾದ ಭಾರತದ ಜಿಡಿಪಿ ಸಾಕ್ಷಿಯಾಗಿದೆ. ಹೌದು ಭಾರತದ ಎರಡನೇ ತ್ರೈಮಾಸಿಕದ ಜಿಡಿಪಿ ಶೇಕಡ 6.3ಕ್ಕೆ ಕುಂಠಿತವಾಗಿದೆ.
ಕಳೆದ ತ್ರೈಮಾಸಿಕದಲ್ಲಿ ಶೇಕಡ 13.5ರಷ್ಟಿದ್ದ ಜಿಡಿಪಿಯು ಸೆಪ್ಟೆಂಬರ್‌ನಲ್ಲಿ ಅಂತ್ಯವಾದ ತ್ರೈಮಾಸಿಕದಲ್ಲಿ ಶೇಕಡ 6.3ಕ್ಕೆ ಇಳಿದಿದೆ. ಕಳೆದ ವರ್ಷ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡ 8.4ರಷ್ಟಿತ್ತು. ಆದರೆ ಈ ವರ್ಷ ಶೇಕಡ 6.3ರಷ್ಟಿದೆ.
ಪ್ರಸಕ್ತ ಹಣಕಾಸು ವರ್ಷದ (2022-23) 2ನೇ ತ್ರೈಮಾಸಿಕದ ಈ ಡೇಟಾವನ್ನು ರಾಷ್ಟ್ರೀಯ ಅಂಕಿಅಂಶ ಕಚೇರಿಯು (NSO) ಬುಧವಾರ ಬಿಡುಗಡೆ ಮಾಡಿದೆ. ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ತಿಂಗಳ ಆರಂಭದಲ್ಲಿ ತನ್ನ ವರದಿಯಲ್ಲಿ Q2ನಲ್ಲಿ ಶೇ.6.1 ರಿಂದ 6.3ರಷ್ಟು ಬೆಳವಣಿಗೆ ದರವನ್ನು ಅಂದಾಜು ಮಾಡಿತ್ತು.

ಬೆಳವಣಿಗೆ ದರ ತಗ್ಗಿಸಿದ್ದ ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್
ಇನ್ನು 2022-23ರ ಹಣಕಾಸು ವರ್ಷದಲ್ಲಿ ಶೇ. 7.3ರಷ್ಟು ಬೆಳವಣಿಗೆ ಆಗಬಹುದು ಎಂದು ಸೆಪ್ಟೆಂಬರ್‌ನಲ್ಲಿ ನಿರೀಕ್ಷಿಸಿದ್ದ ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್, ಇದೀಗ ಅದನ್ನು ಶೇ. 7ಕ್ಕೆ ತಗ್ಗಿಸಿತ್ತು. ಮುಂದಿನ ದಿನಗಳಲ್ಲಿ ವೇಗ ಇನ್ನಷ್ಟು ತಗ್ಗಬಹುದು. 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು ಎಂದು ಹೊಸ ಅಂದಾಜು ಮಾಡಿತ್ತು.
ಇದೇ ವೇಳೆ ರಾಯ್ಟರ್ಸ್ ನಡೆಸಿದ ಆರ್ಥಿಕ ತಜ್ಞರ ಸಮೀಕ್ಷೆಯಲ್ಲಿ ಭಾರತದ ಆರ್ಥಿಕ ಪ್ರಗತಿ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಶೇ. 6.2ಕ್ಕೆ ಇಳಿದಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಏಪ್ರಿಲ್‌ನಿಂದ ಜೂನ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ದರ 13.5ರಷ್ಟು ಇತ್ತು. ಅದಕ್ಕೆ ಹೋಲಿಸಿದರೆ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಳವಣಿಗೆ ಬಹಳ ಕಡಿಮೆ ಆಗುವ ಸೂಚನೆ ಇತ್ತು.
ಪ್ರಮುಖವಾಗಿ ಉತ್ಪಾದನೆ ಹಾಗೂ ಗಣಿ ಕ್ಷೇತ್ರದಲ್ಲಿ ಉಂಟಾದ ಕುಸಿತವು ಜಿಡಿಪಿ ಮೇಲೆ ಪರಿಣಾಮ ಉಂಟು ಮಾಡಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಪ್ರಕಾರ ಟ್ರೇಡ್, ಹೊಟೇಲ್, ಸಾರಿಗೆ, ಸಂವಹನ ಹಾಗೂ ಸೇವೆ ಸಂಬಂಧಿತ ವಲಯದಲ್ಲಿ ಶೇಕಡ 14.7ರಷ್ಟು ಆರ್ಥಿಕ ಬೆಳವಣಿಗೆ ಕಂಡು ಬಂದಿದೆ. ಹಾಗೆಯೇ ರಿಯಲ್ ಎಸ್ಟೇಟ್ ವಲಯದಲ್ಲಿ ಶೇಕಡ 7.2ರಷ್ಟು ಬೆಳವಣಿಗೆ ಕಂಡಿದೆ.


Click it and Unblock the Notifications