ಭಾರತದ ಎಂಟು ಅತಿದೊಡ್ಡ ಬ್ಯಾಂಕ್ ಗಳಲ್ಲಿ ಉದ್ದೇಶಿತ ಸುಸ್ತಿದಾರರ ಬಾಕಿ ಆರು ತಿಂಗಳಲ್ಲೇ ಸೆಪ್ಟೆಂಬರ್ ನಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿದೆ. 37,000 ಕೋಟಿ ರುಪಾಯಿ ಇದ್ದ ಬಾಕಿ ಸಾಲ ಮೊತ್ತ 1.5 ಲಕ್ಷ ಕೋಟಿ ರುಪಾಯಿಗೆ ಏರಿದೆ. ಕ್ರೆಡಿಟ್ ಬ್ಯುರೋ ಟ್ರಾನ್ಸ್ ಯೂನಿಯನ್ ಸಿಬಿಲ್ ದತ್ತಾಂಶದಲ್ಲಿ ಈ ಅಂಶ ಬಯಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್- ಸೆಪ್ಟೆಂಬರ್ 30ರ ಕೊನೆಗೆ ಸಾಲದ 75% ಉದ್ದೇಶಿತ ಸುಸ್ತಿದಾರರಿದ್ದಾರೆ.
ಬ್ಯಾಂಕ್ ಗಳ ವಿಲೀನ ಆದವು
ಕಳೆದ ವರ್ಷ ಇದೇ ಅವಧಿಯಲ್ಲಿ 10,000 ಕೋಟಿ ರುಪಾಯಿಯಷ್ಟು ಏರಿಕೆ ಆಗಿತ್ತು. ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕ್ ಗಳು ಏಪ್ರಿಲ್ 1ನೇ ತಾರೀಕಿನಂದು ವಿಲೀನ ಆದ ಮೇಲೆ ಆಂಕರ್ ಬ್ಯಾಂಕ್ ಗಳು ಉದ್ದೇಶಿತ ಸುಸ್ತಿದಾರರ ಮೊತ್ತವನ್ನು ತಮ್ಮ ಖಾತೆ ಪುಸ್ತಕಕ್ಕೆ ವರ್ಗಾಯಿಸಿಕೊಂಡವು. ಆದರೆ ಸಾಲದ ಬಾಕಿ ಪ್ರಮಾಣ ಹೆಚ್ಚಾಗಲು ಅದೊಂದೇ ಕಾರಣ ಅಲ್ಲ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ವಿಲೀನದಲ್ಲಿ ಒಳಗೊಂಡಿಲ್ಲ. ಆದರೆ ಉದ್ದೇಶಿತ ಸುಸ್ತಿದಾರರ ಸಾಲ ಮೊತ್ತ ಮಾರ್ಚ್ ನಿಂದ ಸೆಪ್ಟೆಂಬರ್ ತನಕ 14,000 ಕೋಟಿ ರುಪಾಯಿ ಹೆಚ್ಚಳವಾಗಿ, 58,475 ಕೋಟಿ ರುಪಾಯಿಗೆ ತಲುಪಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ 60% ಹೆಚ್ಚಳ
ಏಪ್ರಿಲ್ 1ನೇ ತಾರೀಕು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿ) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಒಂದಾದವು. ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಜತೆಯಾದವು. ಒಬಿಸಿ, ಯುನೈಟೆಡ್ ಬ್ಯಾಂಕ್, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಗೆ ಈ ವರ್ಷದ ಮಾರ್ಚ್ ಕೊನೆಗೆ ಉದ್ದೇಶಿತ ಸುಸ್ತಿದಾರರ ಬಾಕಿ 21,837 ಕೋಟಿ ರು. ಇತ್ತು. ಆದರೆ ಅದು ರಿಯಾಯಿತಿ ನೀಡಿದ ಮೇಲೂ ಕಳೆದ ವರ್ಷದ ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯದ ಅವಧಿಗೆ ಹೋಲಿಸಿದಲ್ಲಿ 60% ಹೆಚ್ಚಳವಾಗಿದೆ.
ಐಸಿಐಸಿಐ ಬ್ಯಾಂಕ್ ಮಾತ್ರ ಇಳಿಕೆ ಕಂಡಿದೆ
ಹಾಗೆ ಈ ಅವಧಿಯಲ್ಲಿ ಸಾಲ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಇಳಿಕೆ ಕಂಡಿರುವುದು ಐಸಿಐಸಿಐ ಬ್ಯಾಂಕ್ ಮಾತ್ರ. 0.2% ಇಳಿಕೆ ಆಗಿದೆ. ಇನ್ನು ಎಚ್ ಡಿಎಫ್ ಸಿ ಬ್ಯಾಂಕ್ 0.8% ಹೆಚ್ಚಳವನ್ನು ಕಂಡಿದೆ. ಸರಾಸರಿ ಹೆಚ್ಚಳ ಗಮನಿಸಿದರೆ ಕೆಲವೇ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳಿಂದಲೇ ಬಂದಿವೆ. ಉದ್ದೇಶಿತ ಸುಸ್ತಿದಾರರು ಅಂತ ಯಾರನ್ನು ಕರೆಯಲಾಗುತ್ತದೆ? ಒಬ್ಬ ವ್ಯಕ್ತಿ ಸಾಲವನ್ನು ಪಡೆದು, ಅದನ್ನು ಹಿಂತಿರುಗಿಸುವ ಸಾಮರ್ಥ್ಯ ಇದ್ದಾಗಲೂ ವಾಪಸ್ ಮಾಡದಿದ್ದರೆ ಅಥವಾ ಯಾವ ಉದ್ದೇಶಕ್ಕಾಗಿ ಸಾಲ ಪಡೆದಿರುತ್ತಾರೋ ಅದಕ್ಕೆ ಆ ಮೊತ್ತವನ್ನು ಬಳಸಿಕೊಳ್ಳದೆ ಬೇರೆ ಉದ್ದೇಶಕ್ಕೆ ಆ ಹಣವನ್ನು ಬಳಕೆ ಮಾಡಿರುತ್ತಾರೋ ಅಂಥವರನ್ನು ಉದ್ದೇಶಿತ ಸುಸ್ತಿದಾರರು ಎನ್ನಲಾಗುತ್ತದೆ. ಇನ್ನು ಈ ವರ್ಷ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಮಾರ್ಚ್ ನಿಂದ ಆಗಸ್ಟ್ ತನಕ ಸಾಲದ ಇಎಂಐ ಪಾವತಿಯಿಂದ ವಿನಾಯಿತಿ ಘೋಷಿಸಲಾಗಿತ್ತು.


Click it and Unblock the Notifications