ಚಿನ್ನ ಖರೀದಿಯಲ್ಲಿ ಭಾರತದ ಮುಂದೆ, ಚೀನಾ ದೇಶ ಹಿಂದೆ! 2024ರಲ್ಲಿ ಹೆಚ್ಚು ಚಿನ್ನ ಖರೀದಿ ಮಾಡಿದ ಎರಡನೇ ದೊಡ್ಡ ರಾಷ್ಟ್ರ ಭಾರತ. ಹಾಗಿದ್ರೆ, ಚಿನ್ನ ಖರೀದಿಯಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ? ನೀವೆ ನೋಡಿ. ಹೌದು, 2024ರ ನವೆಂಬರ್ನಲ್ಲಿ ಜಾಗತಿಕ ಕೇಂದ್ರ ಬ್ಯಾಂಕುಗಳು ಚಿನ್ನ ಖರೀದಿಯಲ್ಲಿ ಸಕ್ರಿಯವಾಗಿವೆ. ಒಟ್ಟಾರೆಯಾಗಿ ಈ ಬ್ಯಾಂಕುಗಳು ಬರೋಬ್ಬರಿ 53 ಟನ್ ಬಂಗಾರ ಖರೀದಿಸಿವೆ. ಈ ಪೈಕಿ ಭಾರತದ ಪಾಲು ಎಷ್ಟು ಗೊತ್ತಾ? ಈ ಬಗ್ಗೆ ತಿಳಿಯಲು ಮುಂದೆ ಓದಿ.
ಹೌದು, ಡಬ್ಲ್ಯುಜಿಸಿ (ವರ್ಲ್ಡ್ ಗೋಲ್ಡ್ ಕೌನ್ಸಿಲ್) 2024ರಲ್ಲಿ ಹೆಚ್ಚು ಚಿನ್ನ ಖರೀದಿ ಮಾಡಿದ ದೇಶಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ಮಧ್ಯೆಯೂ ಬಂಗಾರ ಸುರಕ್ಷಿತ ಹೂಡಿಕೆಯ ಆಸ್ತಿಯಾಗಿ ಮುಂದುವರಿದಿದೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಭಾರತದ ಬಳಿಯೇ ಇದೆ ಸಾಕಷ್ಟು ಚಿನ್ನದ ಸಂಗ್ರಹ. ಈ ಪೈಕಿ ಪೋಲೆಂಡ್ ದೇಶ ಅಗ್ರಸ್ಥಾನವನ್ನು ಅಲಂಕರಿಸಿದೆ.

90 ಟನ್ ಬಂಗಾರ ಖರೀದಿಸಿದ ಪೋಲೆಂಡ್
ನವೆಂಬರ್ ತಿಂಗಳಲ್ಲಿ ಎನ್ಬಿಪಿ (ನ್ಯಾಷನಲ್ ಬ್ಯಾಂಕ್ ಆಫ್ ಪೋಲೆಂಡ್) ಚಿನ್ನ ಖರೀದಿಯಲ್ಲಿ ಅತಿದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮಿದೆ. ಈ ಬ್ಯಾಂಕಿನ ಚಿನ್ನ ಖರೀದಿಯು 21 ಟನ್ಗಳಷ್ಟು ಹೆಚ್ಚಳವಾಗಿದೆ. ಇದು 448 ಟನ್ಗಳಿಗೆ ಏರಿಕೆಯಾಗಿದೆ. ಪೋಲೆಂಡ್ನ ಒಟ್ಟು ಮೀಸಲುಗಳಲ್ಲಿ ಬಂಗಾರದ ಪಾಲು ಶೇ.18 ರಷ್ಟಿದೆ. ವರ್ಷದಿಂದ ವರ್ಷಕ್ಕೆ 90 ಟನ್ ಬಂಗಾರ ಖರೀದಿ ಮಾಡಿದೆ. ಈ ಮೂಲಕ ಎನ್ಬಿಪಿಯು, 2024 ರಲ್ಲಿ ಚಿನ್ನ ಖರೀದಿಯಲ್ಲಿ ಅಗ್ರಸ್ಥಾನವನ್ನು ಸಂಪಾದಿಸಿದೆ.
2024ರಲ್ಲಿ 73 ಟನ್ ಚಿನ್ನ ಖರೀದಿಸಿದ ಇಂಡಿಯಾ: ನವೆಂಬರ್ ಅಂತ್ಯದ ವೇಳೆಗೆ ಭಾರತವು ಒಟ್ಟು 876 ಟನ್ ಚಿನ್ನದ ಮೀಸಲು ದಾಸ್ತಾನು ಹೊಂದಿದೆ. ಅಲ್ಲದೇ ಹೊಸದಾಗಿ 73 ಟನ್ ಚಿನ್ನ ಖರೀದಿಸುವ ಮೂಲಕ ಪೋಲೆಂಡ್ ನಂತರ 2024 ರ ಎರಡನೇ ಅತಿದೊಡ್ಡ ಚಿನ್ನ ಖರೀದಿದಾರ ದೇಶವಾಗಿದೆ ಎಂದು ಡಬ್ಲ್ಯುಜಿಸಿ ತಿಳಿಸಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಉಜ್ಬೇಕಿಸ್ತಾನ್ ಕೂಡ ಗಮನಾರ್ಹ ಪ್ರಮಾಣದಲ್ಲಿ ಚಿನ್ನ ಖರೀದಿ ಮಾಡಿದೆ. ಜುಲೈನಿಂದ ಕೆಲ ಕಾಲ ವಿರಾಮದ ನಂತರ ಅದು ತನ್ನ ಚಿನ್ನದ ಮೀಸಲುಗಳನ್ನು 9 ಟನ್ಗಳಷ್ಟು ಹೆಚ್ಚಿಸಿದೆ. ವಾರ್ಷಿಕವಾಗಿ ಅದು ನಿವ್ವಳ 11 ಟನ್ ಚಿನ್ನ ಖರೀದಿಸಿದೆ. ಅಲ್ಲಿಗೆ ಅದರ ಒಟ್ಟು ಹಿಡುವಳಿ ಈಗ 382 ಟನ್ಗೆ ಏರಿಕೆಯಾಗಿದೆ. ಹಾಗೆಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಚಿನ್ನ ಖರೀದಿಯನ್ನು ಮುಂದುವರಿಸಿದ್ದು, ನವೆಂಬರ್ನಲ್ಲಿ 8 ಟನ್ ಚಿನ್ನವನ್ನು ಖರೀದಿಸಿದೆ.
5 ಟನ್ ಚಿನ್ನ ಖರೀದಿಸಿದ ಚೀನಾ: ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಒಸಿ) ಆರು ತಿಂಗಳ ವಿರಾಮದ ನಂತರ ಚಿನ್ನದ ಖರೀದಿಯನ್ನು ಪುನರಾರಂಭಿಸಿದ್ದು, ಹೊಸದಾಗಿ 5 ಟನ್ ಚಿನ್ನ ಖರೀದಿಸಿದೆ. ಅಲ್ಲಿಗೆ ಅದರ ಒಟ್ಟು ಚಿನ್ನದ ಹಿಡುವಳಿಯು 2,264 ಟನ್ಗೆ ಏರಿಕೆಯಾಗಿದೆ. ಇನ್ನು ಸೆಂಟ್ರಲ್ ಬ್ಯಾಂಕ್ ಆಫ್ ಜೋರ್ಡಾನ್ ನವೆಂಬರ್ನಲ್ಲಿ ತನ್ನ ಚಿನ್ನದ ಹಿಡುವಳಿಯನ್ನು 4 ಟನ್ಗಳಷ್ಟು ಹೆಚ್ಚಿಸಿಕೊಂಡಿದೆ.
ಟರ್ಕಿಯ ಸೆಂಟ್ರಲ್ ಬ್ಯಾಂಕ್ ತನ್ನ ಚಿನ್ನದ ಮೀಸಲಿಗೆ 3 ಟನ್ಗಳನ್ನು ಸೇರಿಸಿದೆ ಮತ್ತು ದೇಶೀಯ ಬ್ಯಾಂಕುಗಳೊಂದಿಗೆ ಗೋಲ್ಡ್ -ಫಾರ್ - ಲಿರಾ ವಿನಿಮಯ ಒಪ್ಪಂದಗಳ ಮೂಲಕ ತನ್ನ ನಗದು ನಿರ್ವಹಣಾ ಪ್ರಯತ್ನಗಳನ್ನು ಮುಂದುವರೆಸಿದೆ. ಏತನ್ಮಧ್ಯೆ, ಜೆಕ್ ನ್ಯಾಷನಲ್ ಬ್ಯಾಂಕ್ ತನ್ನ ಖರೀದಿ ಸರಣಿಯನ್ನು ಸತತ 21ನೇ ತಿಂಗಳಿಗೆ ವಿಸ್ತರಿಸಿದ್ದು, ಸುಮಾರು 2 ಟನ್ ಚಿನ್ನ ಖರೀದಿಸಿದೆ. ಬ್ಯಾಂಕ್ ಆಫ್ ಘಾನಾ ತನ್ನ ದೇಶೀಯ ಚಿನ್ನ ಖರೀದಿ ಕಾರ್ಯಕ್ರಮದ ಭಾಗವಾಗಿ ನವೆಂಬರ್ನಲ್ಲಿ 1 ಟನ್ ಚಿನ್ನ ಸೇರಿಸಿದ್ದು, ಅದರ ಒಟ್ಟು ಮೀಸಲು 29 ಟನ್ಗಳಿಗೆ ತಲುಪಿದೆ.


Click it and Unblock the Notifications