ಮುಂದಿನ ವರ್ಷವೇ ಲೋಕಸಭೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಎಲ್ಲ ಪಕ್ಷಗಳು ಭರ್ಜರಿ ತಯಾರಿಯನ್ನು ಈಗಾಗಲೇ ಆರಂಭ ಮಾಡಿದೆ. ಬಹುತೇಕ ವಿಪಕ್ಷಗಳು ಜೊತೆಯಾಗಿದ್ದು, ಬಿಜೆಪಿ ವಿರುದ್ಧದ ಚುನಾವಣೆಗೆ ಸನ್ನದ್ಧವಾಗಿದೆ. ಈ ನಡುವೆ ಸಮೀಕ್ಷೆಯೊಂದು ಮುಂದಿನ ಪ್ರಧಾನ ಮಂತ್ರಿಯಾಗಿ ಹೆಚ್ಚಿನ ಹಿಂದುಳಿದ ವರ್ಗವು ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದೆ.
ಬಿಹಾರದ ಜಾತಿ ಗಣತಿ ದತ್ತಾಂಶ ಬಿಡುಗಡೆಯಾದ ನಂತರ ದೇಶದ 12 ರಾಜ್ಯಗಳಾದ್ಯಂತ 48 ಲೋಕಸಭಾ ಸ್ಥಾನಗಳಲ್ಲಿ ಮುಂದಿನ ಪಿಎಂ ಯಾರಾಗಬೇಕು ಎಂದು ಇಂಡಿಯಾ ಟಿವಿ- ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹವನ್ನು ನಡೆಸಿದೆ.
ಇದರ ಪ್ರಕಾರವಾಗಿ ಹೆಚ್ಚಿನ ಹಿಂದುಳಿದ ವರ್ಗಗಳಾದ ಒಬಿಸಿ ಮತ್ತು ದಲಿತ ಮತದಾರರು 2024 ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯನ್ನು ದೇಶದ ಪ್ರಧಾನಿಯಾಗಿಸಲು ಬಯಸುತ್ತಾರೆ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಿಎಂ ಸ್ಥಾನಕ್ಕೆ ಈ ವರ್ಗದ ಎರಡನೇ ಆಯ್ಕೆಯಾಗಿದೆ.

ಶೇಕಡ 64 ರಷ್ಟು ಒಬಿಸಿ ಮತದಾರರು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಬಯಸುತ್ತಾರೆ ಎಂದು ಸಮೀಕ್ಷೆಯು ಹೇಳಿದೆ. ಆದರೆ ಈ ವರ್ಗದ ಸುಮಾರು ಶೇಕಡ 15 ರಷ್ಟು ಜನರು ಮಾತ್ರ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ದಲಿತರ ವಿಚಾರಕ್ಕೆ ಬಂದಾಗಲೂ ಈ ಸಮೀಕ್ಷೆಯಲ್ಲಿ ಬಹುತೇಕ ದಲಿತರು ಪ್ರಧಾನಿಯಾಗಿ ಮೋದಿಯನ್ನು ಆಯ್ಕೆ ಮಾಡುವುದಾಗಿ ಹೇಳಿದ್ದಾರೆ. ಸಮೀಕ್ಷೆಯ ಪ್ರಕಾರ, ದಲಿತರಲ್ಲಿ ಶೇಕಡ 58 ರಷ್ಟು ಜನರು ನರೇಂದ್ರ ಮೋದಿಯನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ಬಯಸುತ್ತಾರೆ, ಇನ್ನು ಶೇಕಡ 20 ರಷ್ಟು ಜನರು ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಲು ಬಯಸುತ್ತಾರೆ.
ಸಮೀಕ್ಷೆ ಏನು ಹೇಳುತ್ತದೆ?
ನರೇಂದ್ರ ಮೋದಿ: ಒಬಿಸಿ ಶೇಕಡ 64, ದಲಿತರು ಶೇಕಡ 58
ರಾಹುಲ್ ಗಾಂಧಿ: ಒಬಿಸಿ ಶೇಕಡ 15, ದಲಿತರು ಶೇಕಡ 20
ನಿತೀಶ್ ಕುಮಾರ್: ಒಬಿಸಿ ಶೇಕಡ 3, ದಲಿತರು -
ಅಖಿಲೇಶ್ ಯಾದವ್: ಒಬಿಸಿ ಶೇಕಡ 5, ದಲಿತರು -
ಮಾಯಾವತಿ: ಒಬಿಸಿ -, ದಲಿತರು ಶೇಕಡ 10
ಇತರ ಆಯ್ಕೆಗಳ ಪೈಕಿ, ಶೇಕಡ 5 ರಷ್ಟು ಒಬಿಸಿ ಮತದಾರರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ರನ್ನು ಮುಂದಿನ ಪ್ರಧಾನಿಯಾಗಿ ನೋಡಲು ಬಯಸುತ್ತಾರೆ. ಆದರೆ ಕೇವಲ ಶೇಕಡ 3 ರಷ್ಟು ಜನರು ನಿತೀಶ್ ಕುಮಾರ್ ಮುಂದಿನ ಪ್ರಧಾನಿಯಾಗಬೇಕು ಎಂದು ಹೇಳುತ್ತಾರೆ.
ಇನ್ನು ದಲಿತರಲ್ಲಿ ಶೇಕಡ 10 ರಷ್ಟು ಮತದಾರರು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮತ್ತು ಯುಪಿ ಮಾಜಿ ಮುಖ್ಯಮಂತ್ರಿ ಮಾಯಾವತಿ ಮುಂದಿನ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. ಇನ್ನೊಂದೆಡೆ ಶೇಕಡ 2 ರಷ್ಟು ಜನರು ಮಾತ್ರ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಬೇಕು ಎಂದು ಅಭಿಪ್ರಾಯಿಸಿದ್ದಾರೆ.
ಒಟ್ಟಾರೆಯಾಗಿ ಶೇಕಡ 61ರಷ್ಟು ಹಿಂದುಳಿದ ವರ್ಗ, ದಮನಿತ ವರ್ಗಕ್ಕೆ ಸೇರಿದ ಮತದಾರರು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಬಯಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಇನ್ನು ಶೇಕಡ 21 ರಷ್ಟು ಜನರು ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಆಗಬೇಕೆಂದು ಬಯಸಿದ್ದಾರೆ ಎಂದು ಸಮೀಕ್ಷೆ ತಿಳಿಸುತ್ತದೆ.
ಶೇಕಡ 3 ರಷ್ಟು ಜನರು ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಅನ್ನು ಪ್ರಧಾನಿ ಸ್ಥಾನದಲ್ಲಿ ಕಾಣಲು ಬಯಸಿದರೆ, ಶೇಕಡ 2 ರಷ್ಟು ಮತದಾರರು ನಿತೀಶ್ ಕುಮಾರ್ ಮತ್ತು ಶೇಕಡ 6 ಮಾಯಾವತಿಯನ್ನು ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ.


Click it and Unblock the Notifications