ಭಾರತದ ಆರ್ಥಿಕ ವಲಯವು ಸ್ಥಿರವಾಗಿದೆ, ನಾವು ಆರ್ಥಿಕತೆಯ ಮೇಲೆ ಗಮನಹರಿಸುತ್ತಿದ್ದೇವೆ. ಚೇತರಿಸಿಕೊಳ್ಳುತ್ತಿರುವ ಭವಿಷ್ಯಕ್ಕಾಗಿ ಸಿದ್ಧವಾಗಿರುವ ಬ್ಯಾಂಕ್ ಆರ್ಥಿಕವಾಗಿ, ಕಾರ್ಯಾಚರಣೆ ಮತ್ತು ಸಾಂಸ್ಥಿಕವಾಗಿ ಚೇತರಿಸಿಕೊಳ್ಳುವ ಅಗತ್ಯವಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ತಿಳಿಸಿದ್ದಾರೆ.
ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಸ್ಥಿರತೆಯನ್ನು ಹೊಂದಿದೆ ಮತ್ತು ಒತ್ತಡವು ನಮ್ಮ ಭಾರತೀಯ ಬ್ಯಾಂಕುಗಳು ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಕನಿಷ್ಠ ಅಗತ್ಯಕ್ಕಿಂತ ಹೆಚ್ಚಿನ ಬಂಡವಾಳವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂದು ಕೂಡಾ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

"ದೇಶದಲ್ಲಿನ ಹಣಕಾಸು ವಲಯ ಮತ್ತು ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳಂತಹ ಘಟಕಗಳು ಎಲ್ಲಾ ಸಮಯದಲ್ಲೂ ಚೇತರಿಸಿಕೊಳ್ಳಬೇಕು. ಬ್ಯಾಂಕುಗಳು, ಎನ್‌ಬಿಎಫ್‌ಸಿಗಳು ಅತ್ಯಂತ ಒತ್ತಡದ ಸಮಯದಲ್ಲೂ ಕೂಡಾ ಸರಿಯಾಗಿ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ಆಂತರಿಕ ಶಕ್ತಿಯನ್ನು ಹೊಂದಿರಬೇಕು," ಎಂದು ಕೇಂದ್ರ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತ್ ದಾಸ್ ಮುಂಬೈನಲ್ಲಿ ಆರ್‌ಬಿಐ ಪ್ರೋಮೋಟೆಡ್ ಕಾಲೇಜ್ ಆಫ್ ಸೂಪರ್‌ವೈಸರ್ ಆಯೋಜಿಸಿದ್ದ 'ಆರ್ಥಿಕ ಸ್ಥಿತಿಸ್ಥಾಪಕತ್ವದ ಜಾಗತಿಕ ಸಮ್ಮೇಳನ' ವನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕ್‌ಗಳು ಮತ್ತು ಇತರ ನಿಯಂತ್ರಿತ ಘಟಕಗಳ ಮೇಲ್ವಿಚಾರಣೆ ಮತ್ತು ನಿಬಂಧನೆಗಳನ್ನು ಆರ್‌ಬಿಐ ಗಮನಾರ್ಹವಾಗಿ ಬಲಪಡಿಸಿದೆ. ಕೇಂದ್ರೀಯ ಬ್ಯಾಂಕಿನ ವಿಧಾನವು ಆರ್ಥಿಕ ವಲಯದ ಸ್ಥಿತಿಸ್ಥಾಪಕತ್ವ ಮತ್ತು ದೃಢತೆಯನ್ನು ಹೆಚ್ಚಿಸುವುದು. ಇದರಿಂದಾಗಿ ಬ್ಯಾಂಕ್, ಇತರೆ ಹಣಕಾಸು ಘಟಕಗಳು ಒತ್ತಡದ ಸಂದರ್ಭಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತದೆ. ದೇಶದ ಆರ್ಥಿಕ ಅಭಿವೃದ್ಧಿಯ ಪ್ರಕ್ರಿಯೆಗೆ ಕೊಡುಗೆ ನೀಡುವುದನ್ನು ಮುಂದುವರಿಸುತ್ತವೆ ಎಂದು ಗವರ್ನರ್ ತಿಳಿಸಿದ್ದಾರೆ.
"ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಸ್ಥಿರತೆಯನ್ನು ಹೊಂದಿದೆ ಮತ್ತು ಕೆಲವು ಮುಂದುವರಿದ ಆರ್ಥಿಕತೆಗಳಲ್ಲಿ ಕಂಡುಬರುವ ಇತ್ತೀಚಿನ ಆರ್ಥಿಕ ಅಸ್ಥಿರತೆಯು ಭಾರತದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಿಲ್ಲ. ನಾವು ಪರಿಶೀಲನೆ ಮಾಡಿದಾಗ ಭಾರತೀಯ ಬ್ಯಾಂಕ್‌ಗಳು ತಮ್ಮ ಕನಿಷ್ಠ ಅಗತ್ಯತೆಗಳಿಗಿಂತ ಅಧಿಕ ಸಂಕಟದ ಘಟನೆಗಳನ್ನು ಕೂಡಾ ನಿರ್ವಹಣೆ ಮಾಡಬಲ್ಲದು ಎಂದು ತಿಳಿದುಬಂದಿದೆ," ಎಂದು ಹೇಳಿದ್ದಾರೆ.
ಯುಎಸ್, ಯುರೋಪ್‌ನಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಬಿಕ್ಕಟ್ಟು
ಯುಎಸ್‌ನಲ್ಲಿ ಮತ್ತು ಯುರೋಪ್‌ನಲ್ಲಿ ಹಲವಾರು ಬ್ಯಾಂಕುಗಳು ಹಣಕಾಸು ಬಿಕ್ಕಟ್ಟನ್ನು ಹೊಂದಿದೆ. ಈಗಾಗಲೇ ಎರಡು ಬ್ಯಾಂಕ್‌ಗಳನ್ನು ಮುಚ್ಚಲಾಗಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಮತ್ತು ಸಿಗ್ನೇಚರ್ ಬ್ಯಾಂಕ್ ಹಣಕಾಸು ಸಂಕಷ್ಟವನ್ನು ಕಂಡಿದೆ. ಇನ್ನು ಯುಎಸ್‌ನ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಕೂಡಾ ಪ್ರಸ್ತುತ ಆರ್ಥಿಕ ಸಂಕಷ್ಟದಲ್ಲಿದೆ.
ಈ ಹಿಂದೆಯೂ ಬ್ಯಾಂಕ್ ಬಗ್ಗೆ ಹೇಳಿಕೆ ನೀಡಿದ್ದ ಆರ್‌ಬಿಐ
ಅದಾನಿ ಸಂಸ್ಥೆಯು ವಂಚನೆ ಮಾಡಿದೆ ಎಂಬ ಹಿಂಡನ್‌ಬರ್ಗ್ ವರದಿಯಲ್ಲಿ ಆರೋಪ ಮಾಡಲಾದ ಬಳಿಕ ನಿರಂತರವಾಗಿ ಅದಾನಿ ಸಂಸ್ಥೆಯ ಸ್ಟಾಕ್‌ಗಳು ಭಾರೀ ಇಳಿಕೆ ಕಾಣುತ್ತಿದೆ. ಇದರಿಂದಾಗಿ ಅದಾನಿ ಸಂಸ್ಥೆಗೆ ಅಧಿಕ ಮೊತ್ತದ ಸಾಲವನ್ನು ನೀಡಿರುವ ಬ್ಯಾಂಕ್‌ಗಳು ಅಪಾಯದಲ್ಲಿದೆ ಎಂಬ ಸುದ್ದಿಗಳಾಗಿದ್ದವು. ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೇಳಿಕೆಯನ್ನು ನೀಡಿದೆ.
ನಮ್ಮ ದೇಶದ ಬ್ಯಾಂಕಿಂಗ್ ವಲಯವು ಯಾವುದೇ ಕೆಟ್ಟ ಸ್ಥಿತಿಯಿಂದಲೂ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಸ್ಥಿರವಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಸಂಕ್ಷಿಪ್ತವಾದ ಹೇಳಿಕೆಯೊಂದನ್ನು ಆರ್‌ಬಿಐ ನೀಡಿದೆ.
"ಆರ್‌ಬಿಐ ಪ್ರಸ್ತುತ ಮಾಡಿದ ಮೌಲ್ಯಮಾಪನದ ಪ್ರಕಾರ ಬ್ಯಾಂಕಿಂಗ್ ವಲಯವು ಯಾವುದೇ ಕಷ್ಟವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಸ್ಥಿರವಾಗಿದೆ. ಒಂದು ವಹಿವಾಟು ಸಂಸ್ಥೆಗೆ ಭಾರತೀಯ ಬ್ಯಾಂಕುಗಳು ಅಧಿಕ ಸಾಲವನ್ನು ನೀಡಿ ಹೆಚ್ಚಿನ ಅಪಾಯದಲ್ಲಿದೆ ಎಂಬ ಬಗ್ಗೆ ವರದಿಗಳಾಗಿದೆ. ಈ ಹಿನ್ನೆಲೆ ಸ್ಪಷ್ಟಣೆಯನ್ನು ನೀಡಲಾಗಿದೆ," ಎಂದು ಆರ್‌ಬಿಐ ವಿವರಿಸಿದೆ. ಆದರೆ ಅದಾನಿ ಗ್ರೂಪ್‌ನ ಬಗ್ಗೆ ಆರ್‌ಬಿಐ ಎಲ್ಲಿಯೂ ಉಲ್ಲೇಖಿಸಿಲ್ಲ.


Click it and Unblock the Notifications