ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಮತ್ತೆ ಸಾರ್ವಕಾಲಿಕ ಕುಸಿತವನ್ನು ಕಂಡಿದೆ. ಭಾರತೀಯ ರೂಪಾಯಿಯು ಯುಎಸ್ ಡಾಲರ್ ಎದುರು 31 ಪೈಸೆ ಕೆಳಕ್ಕೆ ಇಳಿದಿದ್ದು, 80.15ಕ್ಕೆ ಇಳಿದಿದೆ. ಯುಎಸ್ ಫೆಡರಲ್ ರಿಸರ್ವ್ ಮತ್ತೆ ದರವನ್ನು ಏರಿಕೆ ಮಾಡುವ ಸೂಚನೆ ನೀಡಿದ ಬೆನ್ನಲ್ಲೇ ರೂಪಾಯಿ ಮೌಲ್ಯ ಕುಸಿದಿದೆ.
ಯುಎಸ್ ಫೆಡರಲ್ ರಿಸರ್ವ್ ಚೇರ್‌ಮೆನ್ ಜೆರೋಮ್ ಪೋವೆಲ್ ಮತ್ತೆ ಬಡ್ಡಿದರ ಹೆಚ್ಚಳ ಮಾಡುವ ಸುಳಿವನ್ನು ನೀಡಿದ್ದಾರೆ. ಈ ಬೆನ್ನಲ್ಲೇ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿದಿದೆ.
ಈ ಹಿಂದಿನ ವಹಿವಾಟಿನಲ್ಲಿ ರೂಪಾಯಿ 79.8650ಕ್ಕೆ ವಹಿವಾಟು ಕೊನೆ ಮಾಡಿತ್ತು. ಸೋಮವಾರ ವಹಿವಾಟಿನ ಆರಂಭದಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ 80.0750ಕ್ಕೆ ಇಳಿದು ವಹಿವಾಟು ಆರಂಭಿಸಿದೆ.

ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರದಲ್ಲಿ ಪರಿಷ್ಕರಣೆಗೆ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಫಿನ್‌ರೆಕ್ಸ್ ಟ್ರೆಝರಿ ಸಲಹೆಗಾರ ಅನಿಲ್ ಕುಮಾರ್ ಭನ್ಸಾಲಿ, "80ಕ್ಕೆ ಇಳಿಯುವ ಮೂಲಕ ಆರ್‌ಬಿಐ ಕಡೆಗೆ ಎಲ್ಲರ ಚಿತ್ತ ಹರಿಯುವಂತಾಗಿದೆ. ಹೂಡಿಕೆದಾರರು ಮುಂದೆ ಆರ್‌ಬಿಐನ ನಡೆ ಏನಿದೆ ಎಂದು ನೋಡುತ್ತಿದ್ದಾರೆ," ಎಂದು ತಿಳಿಸಿದ್ದಾರೆ.
ಆರ್‌ಬಿಐನತ್ತ ಹೂಡಿಕೆದಾರರ ಚಿತ್ತ
ಇನ್ನು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆಯಾಗುತ್ತಿದ್ದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವಿತ್ತೀಯ ನೀತಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಈ ಹಿಂದೆ ರೂಪಾಯಿ ಮೌಲ್ಯ ಇಳಿಕೆಯಾಗುತ್ತಿದ್ದಂತೆ ಆರ್‌ಬಿಐ ಮೂರು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ.
ಸಾಮಾನ್ಯವಾಗಿ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದರೆ ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಬ್ಯಾಂಕ್‌ಗಳು ಏರಿಕೆ ಮಾಡುತ್ತದೆ. ಈ ಹಿಂದೆ ಮೂರು ಬಾರಿ ಆರ್‌ಬಿಐ ರೆಪೋ ದರ ಹೆಚ್ಚಳ ಮಾಡಿದಾಗ ಬ್ಯಾಂಕ್ ಬಡ್ಡಿದರ ಅಧಿಕ ಮಾಡಿದೆ. ಇದರಿಂದಾಗಿ ಕಾರು ಹಾಗೂ ಗೃಹ ಸಾಲ ಪಡೆದವರಿಗೆ ಇಎಂಐ ಹೊರೆ ಹೆಚ್ಚಳವಾಗಿದೆ.


Click it and Unblock the Notifications