ಭಾರತದ ಸರಕುಗಳ ವ್ಯಾಪಾರ ಕೊರತೆಯು ದಾಖಲೆಯ ಮಟ್ಟಕ್ಕೆ ವಿಸ್ತರಿಸಿದೆ. ಈ ನಡುವೆ ಎನ್‌ಡಿಎಫ್ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ 80ಕ್ಕೆ ಇಳಿಕೆ ಕಂಡಿದೆ. ಇನ್ನು ಸ್ಟಾಟ್ ರೂಪಾಯಿ ಗುರುವಾರ ಯುಎಸ್ ಡಾಲರ್ ಎದುರು 79.92 ಹೊಸ ಸಾರ್ವಕಾಲಿಕ ಕುಸಿತ ಕಂಡಿದೆ.
ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಗುರುವಾರ ಕರೆನ್ಸಿ ವಿನಿಮಯ ವೇಳೆ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡಿತ್ತು. ಡಾಲರ್ ಎದುರು ರೂಪಾಯಿ ಮೌಲ್ಯವು 79.99ಕ್ಕೆ ತಲುಪಿತ್ತು. ಯುರೋ ಮತ್ತು ಯೆನ್‌ನಂತಹ ವಿಶ್ವದ ಪ್ರಮುಖ ಕರೆನ್ಸಿಗಳ ಎದುರು ಡಾಲರ್ ಸೂಚ್ಯಂಕವು 22-ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಈ ಹಿನ್ನೆಲೆಯಿಂದಾಗಿ ರೂಪಾಯಿ ನಿರಂತರವಾಗಿ ಕುಸಿಯುತ್ತಿದೆ.
ಪ್ರಮುಖವಾಗಿ ಜೂನ್‌ನಲ್ಲಿ ದಾಖಲೆ ಮಟ್ಟದಲ್ಲಿ ವ್ಯಾಪಾರದ ಕೊರತೆಯು ಕಂಡು ಬಂದಿದೆ. ಪೆಟ್ರೋಲಿಯಂ ಉತ್ಪನ್ನಗಳ ಆಮದು ಶೇಕಡ 119ರಷ್ಟು ಏರಿಕೆ ಕಂಡು 8.65 ಬಿಲಿಯನ್ ಡಾಲರ್‌ಗೆ ತಲುಪಿದೆ. ಈ ಸಂದರ್ಭದಲ್ಲೇ ರತ್ನಗಳು ಮತ್ತು ಆಭರಣಗಳು ಶೇಕಡ 25, 3.53 ಬಿಲಿಯನ್ ಡಾಲರ್, ಎಲೆಕ್ಟ್ರಾನಿಕ್ ಸರಕುಗಳ ಶೇಕಡ 61ರಷ್ಟು ಏರಿಕೆಯಾಗಿ 1.67 ಬಿಲಿಯನ್ ಡಾಲರ್ ಆಗಿದೆ.

ಶೇಕಡ 7ಕ್ಕಿಂತ ಅಧಿಕವಾಗಿಯೇ ಉಳಿದ ರಿಟೇಲ್ ಹಣದುಬ್ಬರ
ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದಾಗಿ ಕಚ್ಚಾ ಮತ್ತು ಖಾದ್ಯ ತೈಲ ಬೆಲೆಗಳನ್ನು ಪರಿಷ್ಕರಣೆ ಮಾಡಿ ಭಾರತದಲ್ಲಿ ಹಣದುಬ್ಬರವನ್ನು ನಿಯಂತ್ರಣ ಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಆದರೆ ಈ ನಡುವೆ ಭಾರತದಲ್ಲಿ ರಿಟೇಲ್ ಹಣದುಬ್ಬರವು ಆರ್‌ಬಿಐನ ಗರಿಷ್ಠ ಮಟ್ಟ ಶೇಕಡಾ 6 ಕ್ಕಿಂತ ಹೆಚ್ಚಳವಾಗಿದೆ. ಜೂನ್ 2022 ರಲ್ಲಿ ರಿಟೇಲ್ ಹಣದುಬ್ಬರವು ಇನ್ನೂ ಕೂಡಾ ಶೇಕಡ 7ರಷ್ಟಿದೆ.
ಈ ನಡುವೆ ರೂಪಾಯಿ ಎದುರು ಡಾಲರ್ ನಿರಂತರವಾಗಿ ಕುಸಿತ ಕಾಣುತ್ತಿದೆ. ಇನ್ನು ಸಗಟು ಹಣದುಬ್ಬರದ ಪ್ರಮಾಣವು ಸತತ 15 ತಿಂಗಳುಗಳಿಂದ ಎರಡಂಕಿಯಲ್ಲಿ ಉಳಿದಿದೆ. ದೇಶದಲ್ಲಿ ಆರ್ಥಿಕ ಕೊರತೆ ತೀವ್ರವಾಗುವ ಸಾಧ್ಯತೆ ಇದೆ.


Click it and Unblock the Notifications