ಸೋಮವಾರ ಆರಂಭಿಕ ವಹಿವಾಟಿನಲ್ಲಿಯೇ ಯುಎಸ್ ಡಾಲರ್ ಎದುರು ರೂಪಾಯಿ ಹೊಸ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ಈ ಹಿಂದಿನ ವಹಿವಾಟಿನಲ್ಲಿ 77.93ಕ್ಕೆ ತಲುಪಿ ವಹಿವಾಟು ಅಂತ್ಯ ಮಾಡಿದ್ದ ರೂಪಾಯಿ, ಸೋಮವಾರ ಡಾಲರ್ ಎದುರು 78ರ ಗಡಿ ದಾಟಿದೆ. ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಪತನವಾಗಿದೆ.
ಯುಎಸ್ ಹಣದುಬ್ಬರವು ನಾಲ್ಕು ದಶಕಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ ಬಳಿಕ ಭಾರತೀಯ ರೂಪಾಯಿಯ ಮೇಲೆ ಒತ್ತಡ ಉಂಟು ಮಾಡಿದೆ. ಕಳೆದ ಮಾರ್ಚ್ ತಿಂಗಳಿನಿಂದ ಯುಎಸ್ ಡಾಲರ್ ಎದುರು ರೂಪಾಯಿ ಪದೇ ಪದೇ ಹೊಸ ದಾಖಲೆ ಮಟ್ಟದ ಕುಸಿತವನ್ನು ಕಾಣುತ್ತಿದೆ. ಸೋಮವಾರ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ 36 ಪೈಸೆ ಕುಸಿದು ದಾಖಲೆಯ 78.29 ಕ್ಕೆ ತಲುಪಿದೆ.
ಜಾಗತಿಕ ಕಚ್ಚಾ ತೈಲ ಬೆಲೆಗಳು ಕೂಡಾ ನಿರಂತರವಾಗಿ ಏರಿಕೆ ಕಾಣುತ್ತಿದೆ. ಉಕ್ರೇನ್, ರಷ್ಯಾ ಯುದ್ಧದ ನಡುವೆ ಭಾರೀ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗುತ್ತಿದೆ. ಜಾಗತಿಕವಾಗಿ ಹಣದುಬ್ಬರ ಕಾಡುತ್ತಿದೆ. ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ನಡುವೆ ಡಾಲರ್ ಮೌಲ್ಯ ಹೆಚ್ಚಾಗುತ್ತಿದೆ. ಈ ನಡುವೆ ಭಾರತದಲ್ಲಿ ಸ್ಥಳೀಯ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆ ಹಿಂಪಡೆಯಲಾಗುತ್ತಿದೆ. ಇವೆಲ್ಲವೂ ಕೂಡಾ ಭಾರತದ ಕರೆನ್ಸಿಯ ಮೇಲೆ ಭಾರೀ ಒತ್ತಡವನ್ನು ಉಂಟು ಮಾಡುತ್ತಿದೆ.
ಡಾಲರ್ ಎದುರು ರೂಪಾಯಿ ನಿರಂತರವಾಗಿ ಕುಸಿತ ಕಾಣುತ್ತಿರುವಾಗ ಆರ್‌ಬಿಐ ಸಾಮಾನ್ಯವಾಗಿ ಮಧ್ಯಪ್ರವೇಶ ಮಾಡಿ ರೆಪೋ ದರವನ್ನು ಏರಿಕೆ ಮಾಡಿದೆ. ಇದರಿಂದಾಗಿ ಗೃಹ ಸಾಲ, ಶಿಕ್ಷಣ ಸಾಲ ಮೊದಲಾದ ಸಾಲವನ್ನು ಪಡೆದಿರುವವರಿಗೆ ಇಎಂಐ ಹೊರೆಯು ಅಧಿಕವಾಗಿದೆ. ಹಾಗಾದರೆ ಡಾಲರ್ ಎದುರು ರೂಪಾಯಿ ಈ ರೀತಿ ಕುಸಿತವನ್ನು ಕಾಣಲು ಕಾರಣವೇನು ಎಂದು ತಿಳಿಯೋಣ ಮುಂದೆ ಓದಿ..
ಯುಎಸ್ ಗ್ರಾಹಕ ಬೆಲೆ ಸೂಚ್ಯಂಕ ಏರಿಕೆ
ಯುಎಸ್ ಗ್ರಾಹಕ ಬೆಲೆ ಸೂಚ್ಯಂಕವು ಮೇ ತಿಂಗಳಲ್ಲಿ ಶೇ.8.6 ರಷ್ಟು ಜಿಗಿದಿದೆ. ಡಿಸೆಂಬರ್ 1981ರ ಬಳಿಕ ಮೊದಲ ಬಾರಿಗೆ ಭಾರೀ ಹೆಚ್ಚಳ ಕಂಡು ಬಂದಿದೆ. ಹಣದುಬ್ಬರವನ್ನು ಗಗನಕ್ಕೆ ಏರುತ್ತಿದೆ. ಇದನ್ನು ನಿಯಂತ್ರಣಕ್ಕೆ ತರಲು ಯುಎಸ್ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಯುಎಸ್ ಹಣದುಬ್ಬರವು ನಿರೀಕ್ಷೆಗಳನ್ನು ಮೀರಿದ ನಂತರ ಶುಕ್ರವಾರದಂದು ಸುಮಾರು 12 ಮೂಲಾಂಕ ಗಳಿಸಿ ಬೆಂಚ್‌ಮಾರ್ಕ್‌ನಲ್ಲಿ US 10-year yield ಸೋಮವಾರ ಶೇಕಡ 3.2ಕ್ಕೆ ತಲುಪಿದೆ. ಸೋಮವಾರ ಯುಎಸ್ ಗ್ರಾಹಕ ಬೆಲೆ ಸೂಚ್ಯಂಕವು ಏರಿಕೆ ಮುಂದುವರಿಸಿದೆ. ಡಾಲರ್ ಸೂಚ್ಯಂಕವು ಕಳೆದ ವಾರ ಸುಮಾರು ನಾಲ್ಕು ವಾರಗಳ ಗರಿಷ್ಠ ಮಟ್ಟಕ್ಕೆ ಏರಿದೆ.
ಭಾರತದಲ್ಲಿನ ಹಣದುಬ್ಬರ
ಯುಎಸ್ ಡಾಲರ್ ಎದುರು ರೂಪಾಯಿ ಕುಸಿತಕ್ಕೆ ಭಾರತದಲ್ಲಿ ಇರುವ ಹಣದುಬ್ಬರ ಕೂಡಾ ಕಾರಣವಾಗಿದೆ. ಕಚ್ಚಾ ತೈಲ ಬೆಲೆಗಳು ಏರಿಕೆ ಆದಂತೆ ದೇಶೀಯ ಹಣದುಬ್ಬರ ಹೆಚ್ಚಾಗುತ್ತಿದೆ. ಈ ನಡುವೆ ಹಣದುಬ್ಬರ ಇಳಿಕೆ ಮಾಡುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಏರಿಕೆ ಮಾಡಿದೆ. ಹಣದುಬ್ಬರವೂ ಕೂಡಾ ಡಾಲರ್ ಎದುರು ರೂಪಾಯಿ ಇಳಿಕೆಗೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಡಾಲರ್ ಪ್ರಬಲ: ರೂಪಾಯಿ ಕುಸಿತ
ರೂಪಾಯಿ ಕುಸಿತಕ್ಕೆ ಡಾಲರ್ ಬಲಗೊಳ್ಳುತ್ತಿರುವುದು ಕೂಡಾ ಒಂದು ಪ್ರಮುಖ ಕಾರಣವಾಗಿದೆ. ಹೆಚ್ಚಿದ ಕಚ್ಚಾ ಬೆಲೆಗಳು ಮತ್ತು ದೇಶೀಯ ಹಣದುಬ್ಬರವು ಭಾರತೀಯ ರೂಪಾಯಿ ಕುಸಿತದ ಹಿಂದಿನ ಕಾರಣಗಳಾಗಿವೆ. ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಹೆಚ್ಚಳವಾದಾಗ ಡಾಲರ್ ಮೌಲ್ಯವು ಅಧಿಕವಾಗುತ್ತದೆ. ಬಲವಾದ ಡಾಲರ್ ಭಾರತದ ರೂಪಾಯಿ ಮೌಲ್ಯವು ಕುಸಿತ ಕಾಣಲು ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ರೂಪಾಯಿ 80ರ ಗಡಿ ದಾಟುತ್ತಾ?
ಇನ್ನು ರೂಪಾಯಿ 80 ರ ಗಡಿಯನ್ನು ದಾಟುತ್ತದೆಯೇ ಎಂಬ ಪ್ರಶ್ನೆ ಕೂಡಾ ಈಗ ಉದ್ಭವವಾಗಿದೆ. ದೇಶೀಯ ಷೇರುಗಳಲ್ಲಿ ವಿದೇಶಿ ಹೂಡಿಕೆಯು ಮಾರಾಟವಾಗುತ್ತಿದ್ದಂತೆ ರೂಪಾಯಿ ಮೇಲೆ ಮತ್ತಷ್ಟು ಒತ್ತಡ ಅಧಿಕವಾಗುತ್ತದೆ. ಇದರಿಂದಾಗಿ ರೂಪಾಯಿ ಮೌಲ್ಯ ಇನ್ನಷ್ಟು ಕೆಳಕ್ಕೆ ತಳ್ಳಲ್ಪಟ್ಟಿದೆ. ಈ ನಡುವೆ ರೂಪಾಯಿ ಇನ್ನಷ್ಟು ಕುಸಿತ ಕಾಣುವ ಸಾಧ್ಯತೆ ಇದೆ.


Click it and Unblock the Notifications