ವಿಶ್ವದಲ್ಲಿ ಕೊರೊನಾವೈರಸ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹಾಗೆಯೇ ಆರ್ಥಿಕ ನಷ್ಟವೂ ಕೂಡ ದುಪ್ಪಟ್ಟಾಗುತ್ತಿದೆ. ಅಭಿವೃದ್ಧಿ ದೇಶಗಳಿಂದ ಹಿಡಿದು, ಬಡ ರಾಷ್ಟ್ರಗಳು ಕೊರೊನಾ ಕಾಟಕ್ಕೆ ಕಂಗಾಲಾಗಿ ಹೋಗಿವೆ. ಜಾಗತಿಕ ಆರ್ಥಿಕತೆಯನ್ನು ಬುಡಮೇಲು ಮಾಡಿರುವ ಕೊರೊನಾ ಅರ್ಥವ್ಯವಸ್ಥೆಯನ್ನು ತಲೆಕೆಳಗಾಗಿ ಮಾಡಿದೆ.
ಭಾರತವು ಕೂಡ ಕೊರೊನಾ ಲಾಕ್‌ಡೌನ್‌ದಿಂದಾಗಿ ಲಕ್ಷಾಂತರ ಕೋಟಿ ನಷ್ಟ ಅನುಭವಿಸಿದೆ. ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಲಾಕ್‌ಡೌನ್ ಮುಂದುವರಿದರೆ ಕೊರೊನಾ ಸಾವಿಗಿಂತ ಹೆಚ್ಚಿನ ಜನರು ಹಸಿವಿನಿಂದ ಸಾಯುತ್ತಾರೆ ಎಂದು ಹೇಳಿದ್ದನ್ನು ನಾವು ಇಲ್ಲಿ ಉಲ್ಲೇಖಿಸಬಹುದು.
ಹಾಗಿದ್ದರೆ ಕೊರೊನಾ ಶೂನ್ಯವಾಗುವವರೆಗೂ ಲಾಕ್‌ಡೌನ್ ತೆರವಿಗೆ ಸಾಧ್ಯವಿಲ್ಲವೇ? ದೇಶದ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತುವುದು ಹೇಗೆ? ಹೀಗೆ ನಾನಾ ಪ್ರಶ್ನೆಗಳು ಹೆಚ್ಚುತ್ತಲೇ ಹೋಗುತ್ತಿವೆ. ಈ ಕುರಿತು ಮಾತನಾಡಿರುವ ಇನ್ಪೋಸಿಸ್ ನಾರಾಯಣ ಮೂರ್ತಿ ಕೊರೊನಾ ಹೋರಾಟಕ್ಕೆ ಸೂತ್ರ ನೀಡಿದ್ದಾರೆ.
ಕೊರೊನಾವನ್ನು ದೇಶ ಸಹಜವಾಗಿ ಕಾಣಬೇಕು
ಕೊರೊನಾವೈರಸ್ ಸೋಂಕು ಮತ್ತೊಂದು ಹೊಸ ಸೋಂಕು ಎನ್ನುವಷ್ಟರ ಮಟ್ಟಿಗೆ ದೇಶವು ಸಹಜವಾಗಿ ಕಾಣಬೇಕು ಎಂಬುದು ನಾರಾಯಣಮೂರ್ತಿ ಅಭಿಪ್ರಾಯ. ಸೋಂಕು ತಗಲುವುದಕ್ಕೆ ಸಾಧ್ಯತೆ ಇರುವವರಿಗೆ ರಕ್ಷಣೆ ನೀಡಿ ಜನರು ಕೆಲಸಕ್ಕೆ ಮರಳಬೇಕಿದೆ ಎಂದಿದ್ದಾರೆ.
ಭಾರತದಲ್ಲಿನ ಕೊರೊನಾವೈರಸ್ ಯಾವ ರೀತಿ ಭಿನ್ನ ಎಂಬುದರ ಬಗ್ಗೆ ಮಾಹಿತಿ, ಅಧ್ಯಯನಗಳು ನಡೆದಿವೆ. ಭಾವುಕತೆಯನ್ನು ಬದಿಗಿರಿಸಿ ಇದನ್ನು ಯಾವ ರೀತಿ ಎದುರಿಸಬಹುದು ಎಂದು ನೋಡಬೇಕು. ಕೊರೊನಾ ಡೇಟಾಯುಕ್ತ ಸಮಸ್ಯೆಯಾಗಿದ್ದು, ದೇಶದ ಜನರ ಆರೋಗ್ಯ ಮತ್ತು ಆರ್ಥಿಕತೆಗೆ ಹೊಡೆತ ಬೀಳದಂತೆ ಪರಿಹರಿಸಿಕೊಳ್ಳಬಹುದು.
ಮುಂದಿನ ಒಂದೂವರೆ ವರ್ಷ ಕೊರೊನಾ ನಮ್ಮೊಂದಿಗೆ ಇರಲಿದೆ!
ಕೊರೊನಾವೈರಸ್ ಇದೆ ಎಂದು ಲಾಕ್‌ಡೌನ್ ದೀರ್ಘಾವಧಿಯ ಕಾಲ ಮುಂದುವರಿಸಲು ಸಾಧ್ಯವಿಲ್ಲ. ಕಾರ್ಪೋರೇಟ್ ಮತ್ತು ವ್ಯಹವಾರಗಳು ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಕಾರ್ಯವೆಸಗಲು ಸರ್ಕಾರ ಅನುಮತಿ ನೀಡಬೇಕು. ಕೆಲಸದ ವೇಳೆ ಅಂತರ ಕಾಯ್ದುಕೊಳ್ಳುವುದಕ್ಕಕಾಗಿ ಹೆಚ್ಚಿನ ಪಾಳಿಗಳಲ್ಲಿ ಕೆಲಸ ಮಾಡಬೇಕು. ಏಕೆಂದರೆ ಮುಂದಿನ 12 ರಿಂದ 18 ತಿಂಗಳವರೆಗೆ ಕೊರೊನಾವೈರಸ್ ದಿನನಿತ್ಯದ ಜೀವನದಲ್ಲಿ ಇರಲಿದೆ.
ಪ್ರತಿದಿನ 1 ಲಕ್ಷ ಜನರ ಕೊರೊನಾ ಪರೀಕ್ಷೆ ಮಾಡಿದರೂ, ಪೂರ್ಣಗೊಳಿಸಲು 37 ವರ್ಷ ಬೇಕು
ದೇಶದಲ್ಲಿರುವ ಕೊರೊನಾ ಪರೀಕ್ಷಾ ಸಾಮರ್ಥ್ಯದ ಕುರಿತು ಮಾತನಾಡಿರುವ ನಾರಾಯಣ ಮೂರ್ತಿ, ಭಾರತದಲ್ಲಿ ಪ್ರತಿದಿನ 1 ಲಕ್ಷ ಜನರನ್ನು ಪರೀಕ್ಷೆಗೊಳಪಡಿಸಿದರೂ ಪ್ರತಿಯೊಬ್ಬರನ್ನು ಪರೀಕ್ಷೆ ಮಾಡಲು 37 ವರ್ಷ ಬೇಕಾಗುತ್ತದೆ ಎಂದಿದ್ದಾರೆ.
ಸದ್ಯ ಯಾವುದೇ ಔಷಧಿಯನ್ನು ಕಂಡು ಹಿಡಿದಿಲ್ಲ. ಮುಂಬರುವ ದಿನಗಳಲ್ಲಿ ಔಷಧಿ ಕಂಡು ಹಿಡಿದರೆ ಅದು ಭಾರತದ ಜೀನ್ ಮೇಲೆ ಅದು ಪರಿಣಾಮಕಾರಿಯಾಗಲಿದೆಯೇ ಎಂಬುದು ನಮಗೆ ಗೊತ್ತಿಲ್ಲ ಎಂದಿದ್ದಾರೆ.
ಪ್ರತಿಯೊಬ್ಬರು ವಾರಕ್ಕೆ 60 ಗಂಟೆ ಕೆಲಸ ಮಾಡಿದರೆ ದೇಶದ ಅಭಿವೃದ್ಧಿ ಸಾಧ್ಯ!
ಸದ್ಯ ಕೊರೊನಾವೈರಸ್‌ನಿಂದಾಗಿ ದೇಶದಲ್ಲಿ ಆಗಿರುವ ನಷ್ಟ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಭಾರತೀಯರು ಮತ್ತಷ್ಟು ಶ್ರಮದಿಂದ ಹೆಚ್ಚು ಹೊತ್ತು ಕೆಲಸ ಮಾಡಬೇಕಿದೆ ಎಂಬುದು ನಾರಾಯಣ ಮೂರ್ತಿ ಅಭಿಪ್ರಾಯವಾಗಿದೆ.
ಮುಂದಿನ ಎರಡು-ಮೂರು ವರ್ಷಗಳಲ್ಲಿ ದೇಶ ಅಭಿವೃದ್ಧಿ ಹೊಂದಬೇಕಾದರೆ ಭಾರತೀಯರು ವಾರದ 6 ದಿನ 10 ಗಂಟೆಗಳ ಕಾಲ ಕೆಲಸ ಮಾಡುವ ಪ್ರತಿಜ್ಞೆ ಕೈಗೊಳ್ಳಬೇಕಿದೆ. ವಾರದಲ್ಲಿ 40 ಗಂಟೆ ಕಾಲ ಕೆಲಸ ಮಾಡುವುದನ್ನು 60 ಗಂಟೆಗಳಿಗೆ ಹೋಲಿಸಿದರೆ ತ್ವರಿತ ಗತಿಯಲ್ಲಿ ದೇಶ ಅಭಿವೃದ್ಧಿ ಹೊಂದಲಿದೆ. ಸ್ವಂತ ಉದ್ದಿಮೆದಾರರು ದಿನಕ್ಕೆ 10 ಗಂಟೆ ಕೆಲಸ ಮಾಡುವ ಮೂಲಕ ಸಮತೋಲನ ಕಂಡುಕೊಳ್ಳಬೇಕು ಎಂದಿದ್ದಾರೆ.
ನಾರಾಯಣ ಮೂರ್ತಿ ಸೂತ್ರಕ್ಕೆ ಮಿಶ್ರ ಪ್ರತಿಕ್ರಿಯೆ
ವಾರಕ್ಕೆ 60 ಗಂಟೆ ದುಡಿದರೆ ದೇಶವು ಆರ್ಥಿಕ ಬಿಕ್ಕಟ್ಟಿನಿಂದ ಪರಿಹಾರಗೊಳ್ಳಲಿದೆ ಎಂಬ ಮೂರ್ತಿಯವರ ಮಾತಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವರ ಮಾತನ್ನು ಬೆಂಬಲಿಸಿದರೆ, ಮತ್ತೆ ಕೆಲವರು ಭಾರತದಲ್ಲಿ 70 ಪರ್ಸೆಂಟ್‌ನಷ್ಟು ಜನರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದು, ಯಾವುದೇ ಪಿಎಫ್, ಭದ್ರತೆ ಇರದೆ ಇವರು ಈಗಾಗಲೇ ವಾರಕ್ಕೆ 10 ಗಂಟೆ ದುಡಿಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ನಮಗೆ 60 ಗಂಟೆಗೆ ಸಮನಾದ ವೇತನ ನೀಡಿ ಆರ್ಥಿಕ ವ್ಯವಸ್ಥೆ ಸರಿಯಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಭಾರತದ ಟಾಪ್ ಶತಕೋಟ್ಯಾಧಿಪತಿಗಳು ತಮ್ಮ 1 ಪರ್ಸೆಂಟ್ ಸಂಪತ್ತನ್ನು ತ್ಯಾಗ ಮಾಡಲಿ ಎಲ್ಲವೂ ಸರಿಹೋಗಲಿದೆ ಎಂದು ಕಾಲೆಳೆದಿದ್ದಾರೆ.


Click it and Unblock the Notifications