ಭಾರತದಲ್ಲಿ (India) ಹಲವಾರು ವಿಮಾನ ನಿಲ್ದಾಣಗಳು ಈಗಾಗಲೇ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಈ ಸಾಲಿಗೆ ಮತ್ತೊಂದು ವಿಮಾನ ನಿಲ್ದಾಣ ಸೇರ್ಪಡೆಯಾಗಲು ಸಜ್ಜಾಗಿದೆ. ಭಾರತದ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ (Airport) ಒಂದು ಎಂದು ಗುರುತಿಸಲು ಸಜ್ಜಾಗಿರುವ ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ಜೇವರ್ ಏರ್‌ಪೋರ್ಟ್ (Noida International Airport) ಇನ್ನೇನು ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ.

ಹೌದು, ಭಾರತದ ಬಹು ನಿರೀಕ್ಷೆಯ, ಅತಿದೊಡ್ಡ ವಿಮಾನ ನಿಲ್ದಾಣಗಳ ಸಾಲಿಗೆ ಸೇರ್ಪಡೆಯಾಗಲಿರುವ ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (NIA) ಇದೀಗ ಕಾರ್ಯಾರಂಭಕ್ಕೆ ಸಜ್ಜಾಗಿದೆ. ಅಂದರೆ ಎಲ್ಲಾ ಅಡೆತಡೆಗಳನ್ನು, ನಿಯವಾವಳಿಗಳ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ದಾಟಿ ಟೇಕ್ ಆಫ್‌ಗೆ ಸಿದ್ಧವಾಗಿದೆ.
45 ದಿನದೊಳಗೆ ಆರಂಭ!
ಡೈರೆಕ್ಟರೇಟ್ ಜನರಲ್ ಆಪ್ ಸಿವಿಲ್ ಏವಿಯೇಷನ್‌ನಿಂದ (DGCA) ಏರೋಡ್ರೋಮ್ ಲೈಸೆನ್ಸ್ ಸಿಕ್ಕ ಬೆನ್ನಲ್ಲೇ, ಮುಂದಿನ 45 ದಿನದೊಳಗೆ ಈ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೇವರ್ ಏರ್‌ಪೋರ್ಟ್‌ನ ವಿವರ:
ಇನ್ನು ಈ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ಜೇವರ್ ಏರ್‌ಪೋರ್ಟ್ ಉತ್ತರ ಪ್ರದೇಶದ ಜೇವರ್‌ನಲ್ಲಿ 1,300 ಹೆಕ್ಟೇರ್‌ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿದೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGI) ಮೇಲಿರುವಂತಹ ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಮಾಣ ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ ಈ ವಿಮಾನ ನಿಲ್ದಾಣದ ಮೂಲಕ ವಾರ್ಷಿಕವಾಗಿ 1.2 ಕೋಟಿ ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಸದ್ಯಕ್ಕೆ ಒಂದು ರನ್‌ವೇ ಮತ್ತು ಒಂದು ಟರ್ಮಿನಲ್‌ನೊಂದಿಗೆ ಮಾತ್ರ ಆರಂಭವಾಗಲಿದೆ. ಒಂದು ವೇಳೆ ಎಲ್ಲಾ ಕಾಮಗಾರಿ ಪೂರ್ಣಗೊಂಡರೆ ವಾರ್ಷಿಕವಾಗಿ ಸುಮಾರು 7 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಇದರದ್ದಾಗಲಿದೆ ಎಂದು ಹೇಳಲಾಗಿದೆ. ಆ ನಂತರ ಈ ವಿಮಾನ ನಿಲ್ದಾಣ ಏಷ್ಯಾದಲ್ಲೇ ಅತಿದೊಡ್ಡ ಏರ್‌ಪೋರ್ಟ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ.
ಭರದಿಂದ ಸಾಗುತ್ತಿದೆ ಅಭಿವೃದ್ಧಿ ಕೆಲಸಗಳು!
ಕೆಲವು ದಿನಗಳ ಹಿಂದಷ್ಟೇ, ಅಂದರೆ ಮಾರ್ಚ್ 5 ರಂದು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯೂರಿಟಿ (BCAS)ನಿಂದ ಭದ್ರತಾ ಅನುಮೋದನೆ ಸಿಕ್ಕಿದ್ದು, ಮಾರ್ಚ್ 6 ರಂದು ಡಿಜಿಸಿಎನಿಂದ ಏರೋಡ್ರೋಮ್ ಲೈಸೆನ್ಸ್ ಕೂಡಾ ನೀಡಲಾಗಿದೆ. ಇನ್ನು ಭದ್ರತಾ ವ್ಯವಸ್ಥೆಗಳು, ಸಿಸಿಟಿವಿ, ಆಗಮನ, ನಿರ್ಗಮನ ನಿಯಂತ್ರಣ ಹೀಗೆ ಎಲ್ಲವನ್ನೂ ಸಂಪೂರ್ಣವಾಗಿ ಪರೀಕ್ಷೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಭದ್ರತಾ ಪರೀಕ್ಷೆಗಳು ಈಗಾಗಲೇ ಮುಗಿದಿದ್ದು, ಇನ್ನು ಡಿಜಿಸಿಎ ಪರಿಶೀಲನೆ ಮಾತ್ರ ಬಾಕಿ ಇದೆ ಎಂದು ವರದಿಯಾಗಿದೆ. ಇನ್ನೊಂದು ವಾರದಲ್ಲೇ ಡಿಜಿಸಿಎ ಪರಿಶೀಲನೆಯೂ ಮುಗಿಯಲಿದ್ದು, ಆ ನಂತರ ಪರವಾನಗಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಪರವಾನಗಿ ಸಿಕ್ಕರೆ, ಮುಂದಿನ 45 ದಿನದೊಳಗೆ ಈ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ ಮತ್ತು ದೇಶೀಯ ವಿಮಾನ ಹಾಗೂ ಸರಕು ವಿಮಾನಗಳ ಕಾರ್ಯಾಚರಣೆಗೂ ಸಜ್ಜಾಗಲಿದೆ ಎನ್ನಲಾಗಿದೆ.


Click it and Unblock the Notifications