ಭಾರತದಲ್ಲಿ ಚಿನ್ನಕ್ಕೆ ಪವಿತ್ರವಾದ ಸ್ಥಾನವನ್ನು ನೀಡಲಾಗುತ್ತದೆ. ಎಲ್ಲ ಸಮಾರಂಭಗಳಿಗೂ ಚಿನ್ನದ ಆಭರಣಗಳನ್ನು ಖರೀದಿ ಮಾಡುವ ರೂಢಿಯನ್ನು ಭಾರತೀಯರು ಹೊಂದಿದ್ದಾರೆ. ಅದರಲ್ಲೂ ಭಾರತವು ವಿಶ್ವದಲ್ಲೇ ಎರಡನೇ ಅತೀ ಹೆಚ್ಚು ಚಿನ್ನ ಬಳಕೆ ಮಾಡುವ ದೇಶವಾಗಿದೆ. ಆದರೆ ಬೆಲೆ ಏರಿಕೆಯಾಗುತ್ತಿದ್ದಂತೆ ದೇಶದಲ್ಲಿ ಬಂಗಾರ ಬೇಡಿಕೆಯು ಕುಸಿಯುತ್ತಿದೆ.
ಭಾರತದಲ್ಲಿ ಏಪ್ರಿಲ್‌ನಿಂದ ಜೂನ್ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆಯು ಸುಮಾರು ಶೇಕಡ 7 ರಷ್ಟು ಕುಸಿತ ಕಂಡಿದ್ದು 158.1 ಟನ್‌ಗೆ ಇಳಿಕೆಯಾಗಿದೆ. ಸ್ಥಳೀಯ ಮಟ್ಟದಲ್ಲಿ ಚಿನ್ನದ ಬೆಲೆಯು ಭಾರೀ ಪ್ರಮಾಣದಲ್ಲಿ ಜಿಗಿತ ಕಂಡಿದೆ. ಚಿನ್ನವು ದುಬಾರಿಯಾಗುತ್ತಿದೆ. ಈ ನಡುವೆ ಭಾರತದಲ್ಲಿ ಬೇಡಿಕೆಯು ಕೂಡಾ ಕಡಿಮೆಯಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ (ಡಬ್ಲ್ಯೂಜಿಸಿ) ತಿಳಿಸಿದೆ.

ಹಣಕಾಸು ವರ್ಷ 2023 ರ ಎರಡನೇ ತ್ರೈಮಾಸಿಕದಲ್ಲಿ ಚಿನ್ನದ ಆಮದು ಪ್ರಮಾಣವು ಸುಮಾರು ಶೇಕಡ 16ರಷ್ಟು ಏರಿಕೆಯಾಗಿ, 209 ಟನ್‌ಗೆ ತಲುಪಿದೆ. ಆದರೆ ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಇಳಿಕೆಯಾಗಿದೆ. ಮೊದಲ ಆರು ತಿಂಗಳುಗಳ ಅವಧಿಯಲ್ಲಿ ಚಿನ್ನವು ಬೇಡಿಕೆ ಅಂದಾಜು 271 ಟನ್ ಆಗಿದೆ. ಈ ಬೇಡಿಕೆಯು ಈ ವರ್ಷದ ಅಂತ್ಯದಲ್ಲಿ 650-750 ಟನ್ ಆಗಬಹುದು ಎಂದು ಡಬ್ಲ್ಯೂಜಿಸಿ ಅಭಿಪ್ರಾಯಿಸಿದೆ.
"ಬೆಲೆ ಹೆಚ್ಚಳವಾಗಿರುವ ಕಾರಣದಿಂದಾಗಿ ಎರಡನೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇಕಡ 7ರಷ್ಟು ಇಳಿಕೆಯಾಗಿದೆ. ಚಿನ್ನದ ಮೇಲೆ ಖರೀದಿದಾರರ ಭಾವನೆ ಮತ್ತು ಖರೀದಿ ಸಾಮರ್ಥ್ಯವು ಪ್ರಭಾವ ಉಂಟು ಮಾಡಿದೆ ಎಂದು ಡಬ್ಲ್ಯೂಜಿಸಿ ಇಂಡಿಯಾದ ಸ್ಥಳೀಯ ಸಿಇಒ ಸೋಮಸುಂದರಮ್ ತಿಳಿಸಿದ್ದಾರೆ.
ಸ್ವಲ್ಪ ಸಮಯದಲ್ಲೇ ಚಿನ್ನದ ಬೆಲೆ ಏರಿಕೆ
ಚಿನ್ನದ ಬೆಲೆಯು ಸ್ವಲ್ಪ ಸಮಯದಲ್ಲೇ ಭಾರತದಲ್ಲಿ ಏರಿಕೆಯಾಗಿದೆ. ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆಯು 64,000 ರೂಪಾಯಿಯ ಗರಿಷ್ಟ ಮಟ್ಟಕ್ಕೆ ತಲುಪಿದೆ. ತೆರಿಗೆ ಸಂಬಂಧಿತ ಕಾರಣಗಳಿಂದಾಗಿಯೂ ಭಾರತದಲ್ಲಿ ಚಿನ್ನದ ಬೇಡಿಕೆಯು ಕಡಿಮೆಯಾಗುತ್ತಿದೆ ಎಂದು ಸೋಮಸುಂದರಮ್ ಅಭಿಪ್ರಾಯಿಸಿದ್ದಾರೆ.
ಡಬ್ಲ್ಯೂಜಿಸಿ ಪ್ರಕಾರ ಭಾರತದ ಚಿನ್ನದ ಬೇಡಿಕೆಯು ಈ ತ್ರೈಮಾಸಿಕದಲ್ಲಿ ಶೇಕಡ 7 ರಷ್ಟು ಇಳಿಕೆಯಾಗಿ, 158.1 ಟನ್‌ಗೆ ತಲುಪಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆಯು 170.7 ಟನ್‌ಗಳು ಆಗಿತ್ತು. ಇನ್ನು ಮೌಲ್ಯದ ಲೆಕ್ಕಾಚಾರದಲ್ಲಿ ನಾವು ನೋಡಿದಾಗ ಎರಡನೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ 82,530 ಕೋಟಿ ರೂಪಾಯಿ ಆಗಿದೆ.
ಒಂದು ವರ್ಷಕ್ಕೂ ಹಿಂದಿನ ಬೇಡಿಕೆಯ ಮೌಲ್ಯ ಲೆಕ್ಕಾಚಾರವನ್ನು ನಾವು ನೋಡಿದಾಗ ಈ ವರ್ಷವು ಮೌಲ್ಯವು ಜಿಗಿತ ಕಂಡಿದೆ. ದೇಶದಲ್ಲಿ ಚಿನ್ನದ ಬೇಡಿಕೆ ಕಡಿಮೆಯಾಗಿದ್ದರೂ ಕೂಡಾ ಚಿನ್ನಕ್ಕಾಗಿ ತೆತ್ತ ಮೊತ್ತ ಕಡಿಮೆಯಾಗಿಲ್ಲ. 82,530 ಕೋಟಿ ರೂಪಾಯಿಯಿಂದ 79,270 ಕೋಟಿ ರೂಪಾಯಿಗೆ ತಲುಪಿದೆ.
ಒಟ್ಟಾರೆ ಚಿನ್ನದ ಬೇಡಿಕೆಯಲ್ಲಿ ಚಿನ್ನದ ಜ್ಯುವೆಲ್ಲರಿ ಬೇಡಿಕೆ ಶೇಕಡ 8ರಷ್ಟಿ ಕುಸಿದಿದ್ದು 128.6 ಟನ್‌ಗೆ ತಲುಪಿದೆ. ಒಂದು ವರ್ಷಕ್ಕೂ ಹಿಂದೆ 140.3 ಟನ್ ಆಗಿತ್ತು. ಮಾಹಿತಿ ಪ್ರಕಾರ 18 ಕ್ಯಾರೆಟ್ ಚಿನ್ನಕ್ಕೆ ಬೇಡಿಕೆ ಅಧಿಕವಾಗಿದೆ. ಇನ್ನು ಬಾರ್, ಕಾಯಿನ್‌ಗಳ ಬೇಡಿಕೆಯು ಕೂಡಾ ಹೆಚ್ಚಳವಾಗಿದೆ.


Click it and Unblock the Notifications