ನವದೆಹಲಿ, ಸೆಪ್ಟೆಂಬರ್ 25: ಭಾರತದಲ್ಲಿ ವೈಮಾನಿಕ ಸಂಚಾರದ ಸೇವೆ ನೀಡಲು ಮತ್ತೊಂದು ವಿಮಾನಯಾನ ಕಂಪನಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಮೂಲಕ ಭಾರತದ ವೈಮಾನಿಕ ಕ್ಷೇತ್ರಕ್ಕೆ ಹೊಸ ವಿಮಾನಯಾನ ಸಂಸ್ಥೆ ಕಾಲಿಡಲು ಸಿದ್ದವಾಗಿದೆ.
ಶಂಖ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಒಡೆತನದ ಭಾರತದ ಹೊಸ ವಿಮಾನಯಾನ ಸಂಸ್ಥೆಯಾದ ಶಂಖ್ ಏರ್, ಕಾರ್ಯಾಚರಣೆಯನ್ನು ಪ್ರಾರಂಭಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದಿಂದ ಅನುಮೋದನೆಯನ್ನು ಪಡೆದುಕೊಂಡಿದೆ. ಆದರೆ ಈ ಏರ್‌ಲೈನ್‌ಗೆ ಮೂರು ವರ್ಷಗಳವರೆಗೆ ಮಾನ್ಯತೆ ಇಲ್ಲದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ನೀಡಲಾಗಿದೆಯಾಗಿದ್ದರೂ, ಇದು ವಿಮಾನಯಾನವನ್ನು ಪ್ರಾರಂಭಿಸುವ ಮೊದಲು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ನಿಂದ ಅನುಮತಿಯನ್ನು ಪಡೆಯಬೇಕಾಗಿದ್ದು, ಇದು ಇನ್ನೂ ಸಿಕ್ಕಿಲ್ಲ.

ಉತ್ತರ ಪ್ರದೇಶದ ಶ್ರವಣ್ ಕುಮಾರ್ ವಿಶ್ವಕರ್ಮ ಎಂಬವರ ಮಾಲೀಕತ್ವವನ್ನು ಹೊಂದಿರುವ ಶಂಖ್ ಏರ್ ಲೈನ್ಸ್ ಶೀಘ್ರದಲ್ಲೇ ಹಾರಾಟ ನಡೆಸುವ ಸಾಧ್ಯತೆ ಇದೆ. ಲಕ್ನೋ ಮತ್ತು ನೋಯ್ಡಾದಲ್ಲಿ ಕೇಂದ್ರಗಳೊಂದಿಗೆ ಉತ್ತರ ಪ್ರದೇಶವು ವಿಮಾನಯಾನಕ್ಕೆ ಕೇಂದ್ರೀಕೃತ ರಾಜ್ಯವಾಗಿದೆ. ವಿಮಾನಯಾನ ಕಂಪನಿಯ ವೆಬ್‌ಸೈಟ್ ಪ್ರಕಾರ, ಶಂಖ್ ಏರ್ ಉತ್ತರ ಪ್ರದೇಶದಿಂದ ಪ್ರಾರಂಭವಾಗುವ ಮೊದಲ ನಿಗದಿತ ವಿಮಾನಯಾನ ಸಂಸ್ಥೆಯಾಗಿದೆ, ಪ್ರಮುಖ ನಗರಗಳಿಗೆ ಸಂಪರ್ಕವನ್ನು ಸುಲಭಗೊಳಿಸಲು ಲಕ್ನೋ ಮತ್ತು ನೋಯ್ಡಾದಲ್ಲಿ ತನ್ನ ಬೇಸ್ ಗಳನ್ನು ನಿರ್ಮಾಣ ಮಾಡಲು ಯೋಜಿಸುತ್ತಿದೆ. ಹೆಚ್ಚಿನ ಬೇಡಿಕೆ ಮತ್ತು ಸೀಮಿತ ನೇರ ವಿಮಾನ ಆಯ್ಕೆಗಳನ್ನು ಹೊಂದಿರುವ ಪ್ರದೇಶಗಳ ಮೇಲೆ ಕೇಂದ್ರೀಕರಿಸುವ ವಿಮಾನಯಾನ ಸಂಸ್ಥೆಯು ಅಂತರ-ರಾಜ್ಯವಾಗಿ ಕಾರ್ಯನಿರ್ವಹಿಸಲು ಯೋಜಿಸಿದೆ. ಈ ಮೂಲಕ ದೇಶದ ಎಲ್ಲಾ ಪ್ರಮುಖ ನಗರಗಳಿಗೂ ವಿಮಾನಯಾನ ಸೇವೆ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಭವಿಷ್ಯದ ಯೋಜನೆಗಳು:
ಶ್ರವಣ್ ಕುಮಾರ್ ವಿಶ್ವಕರ್ಮ ಅವರು ಭವಿಷ್ಯದ ಯೋಜನೆ ಮತ್ತು ನಾಯಕತ್ವದ ಕುರಿತು ಮಾತನಾಡುತ್ತಾ, " ಶಂಖ್ ಏರ್ ಜಾಗತಿಕವಾಗಿ ಅನೇಕ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸುತ್ತಿದೆ. ಈ ಬಗ್ಗೆ ನಾವು ಶೀಘ್ರದಲ್ಲೇ ಅಧಿಕೃತ ಘೋಷಣೆಗಳನ್ನು ಮಾಡಲಿದ್ದೇವೆ. ಸ್ಪರ್ಧಾತ್ಮಕ ಬೆಲೆ, ವಿಶ್ವಾಸಯುಕ್ತ ಮತ್ತು ಪ್ರಯಾಣಿಕರ ಅತ್ಯುತ್ತಮ ಸೌಕರ್ಯವನ್ನು ನೀಡುವತ್ತ ತಮ್ಮ ಗಮನ ಕೇಂದ್ರಿಕರಿಸಿದ್ದು, ಭಾರತೀಯ ವಾಯುಯಾನ ಕ್ಷೇತ್ರಕ್ಕೆ ಹೊಸ ದೃಷ್ಟಿಕೋನವನ್ನು ನೀಡುವ ಗುರಿಯನ್ನು ಏರ್ ಲೈನ್ ಹಾಕಿಕೊಂಡಿದೆ.
ನಿಯಮಗಳಿಗೆ ಬದ್ದತೆ:
ನಾಗರಿಕ ವಿಮಾನಯಾನ ಸಚಿವಾಲಯದ ಅನುಮೋದನೆ ಪತ್ರವು ವಿದೇಶಿ ನೇರ ಹೂಡಿಕೆ(ಎಫ್ ಡಿ ಐ) ಮತ್ತು ಸೆಕ್ಯುರಿಟೀಸ್ ಆಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸೇರಿದಂತೆ ಎಲ್ಲಾ ನಿಯಮಗಳನ್ನು ಅನುಸರಿಸುತ್ತೇವೆ ನೂತನ ಏರ್ ಲೈನ್ಸ್ ಗೆ ನಿರ್ದೇಶನ ನೀಡಿದೆ.
ಶಂಖ್ ಏರ್ ಹೊಸ ತಲೆಮಾರಿನ ಬೋಯಿಂಗ್ 737-800NG ನ್ಯಾರೋ-ಬಾಡಿ ವಿಮಾನಗಳ ಸಮೂಹದೊಂದಿಗೆ ತನ್ನ ವಿಮಾನಯಾನ ಸೇವೆಗಳನ್ನು ನೀಡಲು ತುದಿಗಾಲಲ್ಲಿ ನಿಂತಿದ್ದು ಎಲ್ಲವೂ ಅನುಕೂಲಕರವಾಗಿ ಪರಿಣಮಿಸಿದರೆ ಶೀಘ್ರ ಪ್ರಯಾಣಿಕರಿಗೆ ತನ್ನ ಸೇವೆಯನ್ನು ನೀಡಬಹುದು.
ಜೂನ್‌ನಲ್ಲಿ ಶ್ರವಣ್ ಕುಮಾರ್ ವಿಶ್ವಕರ್ಮ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಅವರನ್ನು ಭೇಟಿಯಾಗಿ ಏರ್‌ಲೈನ್‌ನ ಕಾರ್ಯತಂತ್ರದ ನಿರ್ದೇಶನವನ್ನು ಚರ್ಚಿಸಿದ್ದರು. ಇದಾದ ಬಳಿಕ ಮಾರ್ಚ್‌ನಲ್ಲಿ, ನಿರ್ವಹಣಾ ತಂಡವು ಉತ್ತರ ಪ್ರದೇಶದಲ್ಲಿ ವಾಯು ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಪಾಲುದಾರಿಕೆಗಳನ್ನು ಅನ್ವೇಷಿಸಲು ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ CEO ಕ್ರಿಸ್ಟೋಫ್ ಷ್ನೆಲ್‌ಮನ್ ಅವರನ್ನು ಭೇಟಿ ಮಾಡಿತ್ತು.


Click it and Unblock the Notifications