ನವದೆಹಲಿ: ಇಂಡಿಗೋ ಏರ್‌ಲೈನ್ಸ್ ವಿಮಾನ ಸಂಸ್ಥೆಯ ಸರ್ವರ್ಗಳಲ್ಲಿ ಅಕ್ಭೋಬರ್ 5ರ ಶನಿವಾರ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಸಮಸ್ಯೆಯಿಂದಾಗಿ ದೇಶದಾದ್ಯಂತ ಇಂಡಿಗೋ ಏರ್ಲೈನ್ಸ್ನ ಹಾರಾಟದ ಮೇಲೆಯೂ ಪರಿಣಾಮ ಬೀರಿದ್ದು ಪ್ರಯಾಣಿಕರು ವಿವಿಧ ಏರ್ಪೋರ್ಟ್ಗಳ ಕೌಂಟರ್ಗಳಲ್ಲಿ ಗಂಟೆಗಟ್ಟಲೆ ಕ್ಯೂ ನಿಂತುಕೊಳ್ಳುವಂತಾಗಿದೆ.
ಇಂಡಿಗೋ ಏರ್‌ಲೈನ್ ಶನಿವಾರ ಮಧ್ಯಾಹ್ನ 12:30 ರ ಸುಮಾರಿಗೆ ಪ್ರಮುಖ ಸಿಸ್ಟಮ್ ಸ್ಥಗಿತದ ವರದಿಯನ್ನು ಮಾಡಿದೆ. ತನ್ನ ಸರ್ವರ್‌ಗಳು ಡೌನ್ ಆಗಿರುವ ವಿಚಾರವನ್ನು ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯೇ ಖಚಿತಪಡಿಸಿದ್ದು, ಸಮಸ್ಯೆ ಬಗೆಹರಿಯುವವರೆಗೂ ಸಹಕರಿಸಿ ಎಂದು ಪ್ರಯಾಣಿಕರಲ್ಲಿ ವಿನಂತಿಸಿದೆ.

ಇಂಡಿಗೋ ತಾಂತ್ರಿಕ ಸಮಸ್ಯೆಯಿಂದಾಗಿ ಅನೇಕ ಪ್ರಯಾಣಿಕರು ಟಿಕೆಟ್‌ಗಳನ್ನು ಬುಕ್ ಮಾಡಲು ಅಥವಾ ವಿಮಾನವನ್ನು ಏರಲು ಸಾಧ್ಯವಾಗಿಲ್ಲ. ಇದರಿಂದ ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿಬಿದ್ದವರು ತೀವ್ರ ಕಿರಿಕಿರಿ ಅನುಭವಿಸಿದ್ದು, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ತಾವು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಬರೆದುಕೊಂಡಿದ್ದಾರೆ. ಬಹಳಷ್ಟು ಮಂದಿ ಮೈಕ್ರೋ ಬ್ಲಾಗಿಂಗ್ ಸೈಟ್ X ನಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ (DGCA) ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸಿಸ್ಟಂ ವೈಫಲ್ಯದಿಂದ ಫ್ಲೈಟ್ ವಿಳಂಬಗಳು, ವಿಮಾನ ಹಾರಾಟ ಕ್ಯಾನ್ಸಲ್ ಮತ್ತು ಹೊಸ ಬುಕಿಂಗ್ ಅಥವಾ ಈಗಾಗಲೇ ಮಾಡಿರುವ ಬುಕ್ಕಿಂಗ್ ನ ಬದಲಾವಣೆ ಮುಂತಾದ ಹಲವು ತೊಂದರೆಗೆ ಕಾರಣವಾಯಿತು. ಅಡಚಣೆಯನ್ನು ನಿಭಾಯಿಸಲು ಹಸ್ತಚಾಲಿತ ಚೆಕ್-ಇನ್ ಕಾರ್ಯವಿಧಾನಗಳನ್ನು ಅಳವಡಿಸದ್ದು ಇದರಿಂದ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ದೀರ್ಘ ಕಾಲ ಕಾಯುವಂತಾಯಿತು. ಇಂಡಿಗೋ ಸಂಸ್ಥೆಯೂ ಸರ್ವರ್ ಸಮಸ್ಯೆಯನ್ನು ಒಪ್ಪಿಕೊಂಡಿದ್ದು, ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಇಂಡಿಗೋ ಏರ್ ಲೈನ್ಸ್ "ನಾವು ಪ್ರಸ್ತುತ ನಮ್ಮ ನೆಟ್‌ವರ್ಕ್‌ನಾದ್ಯಂತ ತಾತ್ಕಾಲಿಕ ಸಮಸ್ಯೆ ಎದುರಿಸುತ್ತಿದ್ದೇವೆ. ಇದು ನಮ್ಮ ವೆಬ್ ಸೈಟ್ ಮತ್ತು ಬುಕಿಂಗ್ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಪರಿಣಾಮವಾಗಿ, ಗ್ರಾಹಕರು ನಿಧಾನಗತಿಯ ಚೆಕ್-ಇನ್‌ಗಳು ಮತ್ತು ವಿಮಾನ ನಿಲ್ದಾಣದಲ್ಲಿ ದೀರ್ಘ ಸರತಿ ಸಾಲುಗಳು, ಗ್ರಾಹಕರು ಹೆಚ್ಚಿನ ಕಾಯುವ ಸಮಯ ಸೇರಿದಂತೆ ಸಮಸ್ಯೆ ಎದುರಿಸಿದೆ. ಸಾಧ್ಯವಾದಷ್ಟು ಬೇಗ ಸ್ಥಿರತೆ ಮತ್ತು ಸಹಜತೆಯನ್ನು ಮತ್ತೆ ಸ್ಥಾಪಿಸಲು ನಮ್ಮ ತಂಡವು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ" " ಎಂದು ತಿಳಿಸಿದೆ.
ಮಧ್ಯಾಹ್ನ 12 ಗಂಟೆಯಿಂದ ಬುಕಿಂಗ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಮಧ್ಯಾಹ್ನ 1.05 ಕ್ಕೆ ಕಾರ್ಯಾಚರಣೆಗಳು ಪುನರಾರಂಭಗೊಂಡವು. ಅದರೂ ವ್ಯವಸ್ಥೆಯು ಆಗ್ಗಾಗ್ಗೆ ಕೈ ಕೊಡುತ್ತಲೇ ಇತ್ತು ಮೂಲಗಳು ತಿಳಿಸಿವೆ.
ಏರ್ಲೈನ್ಸ್ನ ಸರ್ವರ್ ಡೌನ್ ಆಗಲು ಕಾರಣ ಇನ್ನೂ ಗೊತ್ತಾಗಿಲ್ಲ. ದೆಹಲಿ, ಬೆಂಗಳೂರು, ಚೆನ್ನೈ ಸೇರಿದಂತೆ ಹಲವು ನಗರಗಳ ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ಏರ್ಲೈನ್ಸ್ನ ಟಿಕೆಟ್ ಕೌಂಟರ್ಗಳಲ್ಲಿ ಜನರು ಪರದಾಡುತ್ತಿರುವುದು ಸಾಮಾನ್ಯವಾಗಿತ್ತು.
ಇದೇ ಕಾರಣಕ್ಕೆ ಇಂಡಿಗೋ ಏರ್ಲೈನ್ಸ್ನ ವಿಮಾನಗಳ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಿದೆ. ಹಲವು ವಿಮಾನಗಳು ನಿಗದಿಗಿಂತ ತುಸು ತಡವಾಗಿ ಹೊರಡುತ್ತಿವೆ.
"ಕೊನೆಯ ನಿಮಿಷದ ವಿಮಾನದ ಟಿಕೆಟ್ ಬುಕ್ ಮಾಡಿದ್ದೆ. ಏಕೆಂದರೆ ನಾನು ಆದಷ್ಟು ಬೇಗ ಮನೆಗೆ ಹೋಗಬೇಕಾದ ಅನಿವಾರ್ಯತೆ ಸೄಷ್ಟಿಯಾಗಿತ್ತು. ಆದರೆ ಸರ್ವರ್‌ಗಳು ಕ್ರ್ಯಾಶ್ ಆಗಿದ್ದರಿಂದ ಫ್ಲೈಟ್ ವಿಳಂಬವಾಗಿದೆ. ಹಾಗಾಗಿ ಈಗ, ವಿಮಾನಯಾನವನ್ನು ಆಸ್ವಾದಿಸುವ ಬದಲು, ನಾನು ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದೇನೆ. ತಾಲ್ಮೆಯಿಂದ ವಿಮಾನ ಏರಲು ಕಾಯುತ್ತಿದ್ದೇನೆ" ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.
ಈ ಘಟನೆಯು ತಾಂತ್ರಿಕ ವೈಫಲ್ಯಗಳಿಗೆ ವಿಮಾನಯಾನ ಸಂಸ್ಥೆಯ ದುರ್ಬಲತೆಯನ್ನು ಎತ್ತಿ ತೋರಿಸುತ್ತದೆ. ಭಾರತದ ವಾಯುಯಾನ ಕ್ಷೇತ್ರವು ಬೆಳೆಯುತ್ತಲೇ ಇರುವುದರಿಂದ, ಏರ್‌ಲೈನ್ ವ್ಯವಸ್ಥೆಗಳ ವಿಶ್ವಾಸಾರ್ಹತೆ ಖಚಿತಪಡಿಸಿಕೊಳ್ಳುವುದು ಹೆಚ್ಚು ನಿರ್ಣಾಯಕವಾಗುತ್ತದೆ.


Click it and Unblock the Notifications