ಅತಿದೊಡ್ಡ ಭಾರತೀಯ ವಿಮಾನಯಾನ ಸಂಸ್ಥೆಗಳಲ್ಲೊಂದಾದ ಇಂಡಿಗೋ ಸಂಸ್ಥೆ (IndiGo Airlines) ಸದ್ಯ ಭಾರೀ ಸಂಕಷ್ಟದಲ್ಲಿ ಸಿಲುಕಿದೆ. ಅತ್ತ ದೇಶದಲ್ಲಿ 500ಕ್ಕೂ ಅಧಿಕ ವಿಮಾನಗಳು ರದ್ದಾಗಿದ್ದು, ಪ್ರಯಾಣಿಕರು ಏರ್‌ಪೋರ್ಟ್‌ನಲ್ಲೇ ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಇದೀಗ ಇಂಡಿಗೋ ವಿಮಾನ ರದ್ಧತಿಯಿಂದ ಹಲವಾರು ವ್ಯವಹಾರಗಳ ಮೇಲೂ ಭಾರೀ ಒತ್ತಡ ಬಿದ್ದಿದ್ದು, ಟಿಕೆಟ್ ಬುಕ್ ಮಾಡಲು ಜನ ಹಿಂದೇಟು ಹಾಕುತ್ತಿದ್ದಾರೆ. ಇದೀಗ ಇಂಡಿಗೋ ವಿಮಾನ ರದ್ಧತಿಯಿಂದಾಗಿ (Flight Cancel) ತಮ್ಮ ಆರತಕ್ಷತೆಗಾಗಿ ಹುಬ್ಬಳ್ಳಿ (Hubballi) ಬರಬೇಕಿದ್ದ ನವವಿವಾಹಿತ ಜೋಡಿಯೊಂದು ಒಡಿಶಾದಲ್ಲಿ ಸಿಲುಕಿದೆ. ಆದ್ದರಿಂದ ಆರತಕ್ಷತೆ ಆನ್‌ಲೈನ್‌ನಲ್ಲೇ ನೆರವೇರಿಸುವಂತಾಗಿದೆ.

ಇಂಡಿಗೋ ವಿಮಾನ ರದ್ದತಿಗಳಿಂದ ನವವಿವಾಹಿತ ಜೋಡಿಯೊಂದು ಒಡಿಶಾದ ಭುವನೇಶ್ವರದಲ್ಲಿ ಸಿಲುಕಿದ ಕಾರಣ, ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಅವರ ಆರತಕ್ಷತೆಯು ಆನ್‌ಲೈನ್‌ನಲ್ಲಿ ನಡೆಸಲಾಯಿತು. ತಂದೆ-ತಾಯಿ, ಕುಟುಂಬ ಸಭಾಂಗಣದಲ್ಲಿದ್ದು, ನವ ವಧು-ವರ 1,400 ಕಿ.ಮೀ ದೂರದಲ್ಲಿದ್ದ ಕಾರಣ ಆನ್‌ಲೈನ್ ಮೂಲಕವೇ ಆರತಕ್ಷತೆ ನೆರವೇರಿಸಲಾಯಿತು..
ಯಾರು ಈ ಜೋಡಿ?
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಹುಬ್ಬಳ್ಳಿಯ ಮೇಘಾ ಕ್ಷೀರಸಾಗರ್ ಮತ್ತು ಭುವನೇಶ್ವರದ ಸಂಗಮ್ ದಾಸ್ ಅವರ ವಿವಾಹ ನವೆಂಬರ್ 23 ರಂದು ಒಡಿಶಾದ ಭುವನೇಶ್ವರದಲ್ಲಿ ನಡೆಯಿತು. ಈ ದಂಪತಿಯ ಆರತಕ್ಷತೆ ಬುಧವಾರ, ಡಿಸೆಂಬರ್ 3 ರಂದು ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ನಿಗದಿ ಪಡಿಸಲಾಗಿತ್ತು.
ದಂಪತಿ ಡಿಸೆಂಬರ್ 2 ರಂದು ಹುಬ್ಬಳ್ಳಿಗೆ ಬರಲು ಬೆಂಗಳೂರು ಮೂಲಕ ವಿಮಾನ ಕಾಯ್ದಿರಿಸ್ದದರು. ಇನ್ನೂ ಕೆಲವು ಸಂಬಂಧಿಕರು ಮುಂಬೈ ಮೂಲಕ ಪ್ರಯಾಣಿಸಲು ಯೋಜಿಸಿದ್ದರು. ಆದರೆ, ಡಿಸೆಂಬರ್ 2ರಂದು ಆರಂಭವಾದ ವಿಮಾನ ವಿಳಂಬಗಳು, ನಂತರವೂ ಎದುರಿಸುವಂತಾಯಿತು. ಡಿಸೆಂಬರ್ 3ರ ಮುಂಜಾನೆ ಅವರು ಬುಕ್ ಮಾಡಿದ್ದ ವಿಮಾನ ರದ್ದಾದ ಹಿನ್ನೆಲೆ, ಬದಲಿ ಆಯ್ಕೆಗಳೂ ಇರಲಿಲ್ಲ.
ಇದೇ ಕಾರಣದಿಂದ ದಂಪತಿ ಹುಬ್ಬಳ್ಳಿಗೆ ಆಗಮಿಸಲು ಸಾಧ್ಯವಾಗುವುದಿಲ್ಲ. ಇನ್ನು ಈ ಬಗ್ಗೆ ಮಾತನಾಡಿದ ವಧುವಿನ ತಾಯಿ, "ನವೆಂಬರ್ 23 ರಂದು ಅದ್ಧೂರಿಯಾಗಿ ಮದುವೆ ನಡೆದಿದೆ. ಡಿಸೆಂಬರ್ 2 ರಂದು ಹುಬ್ಬಳ್ಳಿಯಲ್ಲಿ ಆರತಕ್ಷತೆ ನಿಗದಿಯಾಗಿತ್ತು, ಎಲ್ಲರನ್ನೂ ಆಹ್ವಾನಿಸಿದ್ದೆವು. ಹಠಾತ್ತನೆ, ಬೆಳಗಿನ ಜಾವ 4 ಗಂಟೆ ಸುಮಾರಿಗೆ ವಿಮಾನ ರದ್ದಾಗಿದೆ ಎಂದು ತಿಳಿಯಿತು. ಎಂದು ಬೇಸರ ವ್ಯಕ್ತಪಡಿಸಿದರು."
ಆನ್‌ಲೈನ್‌ನಲ್ಲೇ ಆರತಕ್ಷತೆ ನೆರವೇರಿಸಿದ ಹುಬ್ಬಳ್ಳಿ ಜೋಡಿ!
ಇನ್ನು ಮೊದಲೇ ಆರತಕ್ಷತೆ ನಿರ್ಧರಿಸಿದ್ದರಿಂದ, ಜನರನ್ನು, ಕುಟುಂಬದವರನ್ನು ಆಹ್ವಾನಿಸಿದ್ದರಿಂದ ಎಲ್ಲರೂ ಬರುವ ತೀರ್ಮಾನವಾಗಿತ್ತು. ಅದೇ ರೀತಿ ಮನೆಯವರು ಕೂಡಾ ಆರತಕ್ಷತೆ ನಡೆಸುವುದಾಗಿ ನಿರ್ಧರಿಸಿದರು. ಆದರೆ ವಿಶೇಷವೆಂದರೆ ವರ್ಚುವಲ್ ಮೂಲಕ ವಧು-ವರರನ್ನು ಸ್ಕ್ರೀನ್‌ನಲ್ಲಿ ತೋರಿಸಲಾಗಿತ್ತು. ಕೊನೆಗೂ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಮೂಲಕವೂ ಆರತಕ್ಷತೆಯನ್ನು ನೆರವೇರಿಸಲಾಯಿತು.
ಇನ್ನು ವಧು-ವರರಿಗಾಗಿ ಮೀಸಲಿಟ್ಟಿದ್ದ ಆಸನಗಳಲ್ಲಿ ವಧುವಿನ ಪೋಷಕರು ಕುಳಿತು ಸಂಪ್ರದಾಯಬದ್ಧವಾಗಿ ಆರತಕ್ಷತೆಗಳನ್ನು ನೆರವೇರಿಸಿದರು. ಮೇಘಾ ಮತ್ತು ಸಂಗಮ್, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅತಿಥಿಗಳನ್ನು ಸ್ವಾಗತಿಸಿದ್ದು, ಆರತಕ್ಷತೆಯು ಸಂಪೂರ್ಣ ಆನ್‌ಲೈನ್ ಆಚರಣೆಯಾಗಿ ಬದಲಾಯಿತು. ಸದ್ಯ ಸೋಷಿಯಲ್ ಮೀಡಿಯಾದಲ್ಲೂ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಕೆಲವರು ಇಂಡಿಗೋ ವಿಮಾನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications