ಸಾಮಾನ್ಯವಾಗಿ ಐಟಿ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ವೇತನ ಏರಿಕೆಯನ್ನು ಮಾಡಲಾಗುತ್ತದೆ. ಆದರೆ ಈ ವರ್ಷ ಹಲವಾರು ಸಂಸ್ಥೆಗಳು ಈ ಪ್ರಕ್ರಿಯೆಯಿಂದ ಹಿಂದೆ ಸರಿದಿದೆ. ಈ ನಡುವೆ ದೇಶದ ಎರಡನೇ ಅತೀ ದೊಡ್ಡ ಐಟಿ ಸೇವೆಯನ್ನು ನೀಡುವ ಸಂಸ್ಥೆಯಾದ ಇನ್ಫೋಸಿಸ್ ಮ್ಯಾನೆಜರ್ ಹುದ್ದೆಗಿಂತ ಕೆಳದರ್ಜೆಯ ಉದ್ಯೋಗಿಗಳಿಗೆ ವೇತನ ಏರಿಕೆ ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡಿದೆ.
ಈಗಾಗಲೇ ಹಲವಾರು ಸಂಸ್ಥೆಗಳು ವೆಚ್ಚವನ್ನು ಕಡಿತ ಮಾಡಲು ಕ್ರಮಗಳನ್ನು ಕೈಗೊಂಡಿದೆ. ಬಹುತೇಕ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಕಡಿತವನ್ನು ಮಾಡಿದೆ. ಇನ್ನು ಈ ನಡುವೆ ಕೆಲವು ಸಂಸ್ಥೆಗಳು ತಮ್ಮ ಕೆಲವು ಕಚೇರಿಗಳನ್ನು ಮುಚ್ಚಿದೆ. ಒಟ್ಟಿನಲ್ಲಿ ಎಲ್ಲವೂ ಕೂಡಾ ಈ ಹಣದುಬ್ಬರವ ನಡುವೆ ತಮ್ಮ ಹಣಕಾಸು ಸ್ಥಿತಿ ನಿರ್ವಹಣೆ ಮಾಡುವ ಪ್ರಯತ್ನವಾಗಿದೆ. ಈಗ ವೆಚ್ಚ ನಿರ್ವಹಣೆಗಾಗಿ ವೇತನ ಏರಿಕೆಯನ್ನು ಕೂಡಾ ತಡೆಹಿಡಿಯಲಾಗುತ್ತಿದೆ.

ಈ ಬಗ್ಗೆ ಇನ್ಫೋಸಿಸ್‌ನ ಉದ್ಯೋಗಿಗಳು ಮಾಹಿತಿ ನೀಡಿರುವುದಾಗಿ ಮನಿಕಂಟ್ರೋಲ್ ವರದಿ ಮಾಡಿದೆ. ಜೂನ್ ತ್ರೈಮಾಸಿಕ ಅಂತ್ಯವಾದರೂ ಕೂಡಾ ಇನ್ನೂ ವೇತನ ಏರಿಕೆ ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಯಾವಾಗ ವೇತನ ಏರಿಕೆ ಪ್ರಕ್ರಿಯೆ ನಡೆಯಲಿದೆ. ಯಾವಾಗ ಸಂಬಳ ಹೆಚ್ಚಿಸಲಾಗುತ್ತದೆ ಎಂಬ ಬಗ್ಗೆ ಈವರೆಗೂ ಯಾವುದೇ ಮಾಹಿತಿಯನ್ನು ಕೂಡಾ ಇನ್ಫೋಸಿಸ್ ಸಂಸ್ಥೆ ನೀಡಿಲ್ಲ ಎಂದು ತಿಳಿಸಲಾಗಿದೆ.
ಸಂಸ್ಥೆಯಲ್ಲಿ ಜುಲೈ ತಿಂಗಳಿನಲ್ಲಿ ಹಿರಿಯ ನಿರ್ವಾಹಕ ಹುದ್ದೆಗಳಿಗೆ ವೇತನ ಏರಿಕೆ ಪ್ರಕ್ರಿಯೆ ಆರಂಭವಾಗಿದೆ. ಆದರೆ ಈವರೆಗೆ ಅದರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ ಎಂಬ ಮಾಹಿತಿಯಿದೆ. ಹಿರಿಯ ಹುದ್ದೆಗಳಿಗೂ ಕೂಡಾ ವೇತನ ಏರಿಕೆಯನ್ನು ವಿಳಂಬ ಮಾಡಲಾಗುತ್ತದೆಯೇ ಎಂಬ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ.
ಕೊರೊನಾ ಸಂದರ್ಭದಲ್ಲಿ ವೇತನ ಏರಿಕೆಗೆ ತಡೆ
ಈ ಹಿಂದೆ ಹಲವಾರು ಸಂಸ್ಥೆಗಳು ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ವೇತನ ಏರಿಕೆಯನ್ನು ಮಾಡಿಲ್ಲ. ಇನ್ಫೋಸಿಸ್‌ನಲ್ಲಿಯೂ ಈ ವೇಳೆ ಸ್ಯಾಲರಿ ಹೈಕ್ ಪ್ರಕ್ರಿಯೆ ನಡೆದಿಲ್ಲ. 2020ರಲ್ಲಿ ಇನ್ಫೋಸಿಸ್‌ನಲ್ಲಿ ವೇತನ ಹೆಚ್ಚಳ ಮಾಡಿಲ್ಲದಿದ್ದರೂ 2021ರ ಜನರಿಯಲ್ಲಿ ಏರಿಕೆ ಮಾಡಲಾಗಿದೆ. ಇನ್ನು ಕೆಲವು ಸಂಸ್ಥೆಗಳು ಉದ್ಯೋಗಿಗಳಿಗೆ ಈ ಬಾರಿ ವೇತನ ಹೆಚ್ಚಿಸಲಾಗುವುದಿಲ್ಲ ಎಂದು ತಿಳಿಸಿದ್ದರೆ, ಇನ್ನು ಕೆಲವು ಸಂಸ್ಥೆಗಳು ವಿಳಂಬವಾಗಲಿದೆ ಎಂದು ತಿಳಿಸಿದೆ.
ಇನ್ಫೋಸಿಸ್ ಆದಾಯ ಏರಿಕೆ
ಹಣಕಾಸು ವರ್ಷ 23-24ರಲ್ಲಿ ಇನ್ಪೋಸಿಸ್ ಆದಾಯವು ಶೇಕಡ 4ರಿಂದ 7ರವರೆಗೆ ಏರಿಕೆಯಾಗಿದೆ. 2018ರ ಬಳಿಕ ಮೊದಲ ಬಾರಿಗೆ ಸಂಸ್ಥೆಯಲ್ಲಿ ಇಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಳ ಮಾಡಲಾಗಿದೆ. ಹಣಕಾಸು ವರ್ಷ 2023ರ ಕೊನೆಯ ತ್ರೈಮಾಸಿಕದಲ್ಲಿ ಸರಾಸರಿ ವೇತನವನ್ನು ಶೇಕಡ 60ರಷ್ಟು ಕಡಿಮೆ ಮಾಡಿದೆ. ಇನ್ನು 2023ರ ಹಣಕಾಸು ವರ್ಷದಲ್ಲಿ ಉತ್ತಮ ಆದಾಯ ಲಭಿಸಿದ್ದರೂ ಕೂಡಾ ನಾಲ್ಕನೇ ತ್ರೈಮಾಸಿಕದಲ್ಲಿ ಸಂಸ್ಥೆಯ ಬೆಳವಣಿಗೆ ಉತ್ತಮವಾಗಿಲ್ಲ. ನಾಲ್ಕು ತ್ರೈಮಾಸಿಕದಲ್ಲಿ ನಮ್ಮ ಆದಾಯವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಇಳಿಕೆ ಕಾಣುತ್ತಿದೆ ಎಂದು ಇನ್ಫೋಸಿಸ್ ಹೇಳಿಕೊಂಡಿದೆ.
ಇನ್ನು ನಾಲ್ಕನೇ ತ್ರೈಮಾಸಿಕದ ನಿವ್ವಳ ಆದಾಯವನ್ನು ಇನ್ಫೋಸಿಸ್ ಘೋಷಣೆ ಮಾಡಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಭಾರೀ ನಷ್ಟವನ್ನು ಕಂಡಿದೆ. ಇನ್ಫೋಸಿಸ್ ಷೇರು ಕುಸಿತವಾದ ಬಳಿಕ ಪ್ರಮುಖ ಷೇರುದಾರರು ಆದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಮೂರ್ತಿ ಕುಟುಂಬವು ಭಾರೀ ನಷ್ಟವನ್ನು ಕಂಡಿದೆ. ಐಟಿ ಸಂಸ್ಥೆ ಇನ್ಫೋಸಿಸ್‌ನಲ್ಲಿ ಒಟ್ಟು 28,13,85,267 ಷೇರುಗಳನ್ನು ಅಥವಾ ಶೇಕಡ 7.71ರಷ್ಟು ಷೇರುಗಳನ್ನು ಎಲ್‌ಐಸಿ ಹೊಂದಿದೆ.


Click it and Unblock the Notifications