ದೇಶದ ಎರಡನೇ ಅತೀ ದೊಡ್ಡ ಟೆಕ್ ಸಂಸ್ಥೆಯಾದ ಇನ್ಫೋಸಿಸ್ ಷೇರು ಶುಕ್ರವಾರ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ನಿನ್ನೆಯಷ್ಟೇ (ಜುಲೈ 20) ಇನ್ಫೋಸಿಸ್ ಹಣಕಾಸು ವರ್ಷ 2023-24ನೇ ಮೊದಲ ತ್ರೈಮಾಸಿಕದ ವರದಿಯನ್ನು ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಇನ್ಫೋಸಿಸ್ ಹಣಕಾಸು ವರ್ಷ 2024ರ ರೆವೆನ್ಯೂ ಗೈಡೆನ್ಸ್ ಅನ್ನು ಇಳಿಸಿದೆ. ಈ ಬೆನ್ನಲ್ಲೇ ಸ್ಟಾಕ್ ಬೆಲೆ ಕುಸಿದಿದೆ.
ಜುಲೈ 21ರಂದು ಆರಂಭಿಕ ವಹಿವಾಟಿನಲ್ಲಿ ಇನ್ಫೋಸಿಸ್‌ನ ಷೇರು ದರವು ಬಿಎಸ್‌ಇಯಲ್ಲಿ ಶೇಕಡ 9.5ರಷ್ಟು ಕುಸಿತ ಕಂಡಿದೆ. ಪ್ರಸ್ತುತವು ಇನ್ಫೋಸಿಸ್ ಷೇರು ನಷ್ಟದೊಂದಿಗೆ ವಹಿವಾಟು ನಡೆಸುತ್ತಿದೆ. ಈ ಸಮಯಕ್ಕೆ ಇನ್ಫೋಸಿಸ್ ಷೇರು ಸುಮಾರು ಶೇಕಡ 7.64ರಷ್ಟು ಕುಸಿತ ಕಂಡು, 1,338.75 ರೂಪಾಯಿಗೆ ಕುಗ್ಗಿದೆ. ಇನ್ನು ವಾಲ್‌ಸ್ಟ್ರೀಟ್‌ನಲ್ಲಿ ಇನ್ಫೋಸಿಸ್ ಅಮೆರಿಕನ್ ಡೆಪಾಸಿಟರಿ ರಿಸಿಪ್ಟ್ಸ್ (ಎಡಿಆರ್) ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಒಂದು ದಿನದಲ್ಲೇ ಕುಸಿತ ಕಂಡಿದೆ.

ಇನ್ಫೋಸಿಸ್ ಮಾರುಕಟ್ಟೆ ಮೌಲ್ಯ ಭಾರೀ ಕುಸಿತ
ಇನ್ಫೋಸಿಸ್ ಷೇರು ಬೆಲೆ ಕುಸಿತ ಕಾಣುತ್ತಿದ್ದಂತೆ ಮಾರುಕಟ್ಟೆ ಮೌಲ್ಯವು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇನ್ಫೋಸಿಸ್ ಮಾರುಕಟ್ಟೆ ಮೌಲ್ಯ ಶುಕ್ರವಾರ 56,943.2 ಕೋಟಿ ರೂಪಾಯಿಯಷ್ಟು ನಷ್ಟ ಉಂಟಾಗಿದೆ. ಇಂಡ್ರಾಡೇಯಲ್ಲಿನ ಇನ್ಫೋಸಿಸ್ ಮಾರುಕಟ್ಟೆ ಮೌಲ್ಯ 5,44,357.45 ಕೋಟಿ ರೂಪಾಯಿ ಆಗಿದೆ. ಆದರೆ ಗುರುವಾರ ವಹಿವಾಟಿನ ಅಂತ್ಯದಲ್ಲಿ ಇನ್ಫೋಸಿಸ್ 6,01300.62 ಕೋಟಿ ರೂಪಾಯಿ ಆಗಿತ್ತು.
ಓವರ್‌ನೈಟ್ ನ್ಯೂಯಾರ್ಕ್ ಸ್ಟಾಟ್ ಎಕ್ಸ್‌ಚೇಂಜ್‌ನಲ್ಲಿ ಇನ್ಫೋಸಿಸ್ ಎಡಿಆರ್ ಶೇಕಡ 8.41ರಷ್ಟು ಅಥವಾ 16.22 ಡಾಲರ್ ಕುಸಿತ ಕಂಡು ವಹಿವಾಟು ಅಂತ್ಯ ಮಾಡಿದೆ. ಮಾರ್ಚ್ 2023ರ ತ್ರೈಮಾಸಿಕ ವರದಿಯ ಬಳಿಕ ಇನ್ಫೋಸಿಸ್ ಎಡಿಆರ್ ಏಪ್ರಿಲ್ 13ರಂದು ಶೇಕಡ 9ರಷ್ಟು ಕುಸಿತ ಕಂಡಿತ್ತು. ಗುರುವಾರ ಎಡಿಆರ್ ಸುಮಾರು ಶೇಕಡ 13.44ರಷ್ಟು ಇಳಿಕೆ ಕಂಡಿದ್ದು, ಮಾರ್ಚ್ 2020ರ ಬಳಿಕ ಅತೀ ಹೆಚ್ಚು ಕುಸಿತ ಇದಾಗಿದೆ.
ಇನ್ಫೋಸಿಸ್ ತ್ರೈಮಾಸಿಕ ವರದಿ
ಜೂನ್ 30, 2023ರಲ್ಲಿ ಕೊನೆಗೊಂಡ ಹಣಕಾಸು ವರ್ಷ 2023-24ರ ಮೊದಲ ತ್ರೈಮಾಸಿಕದ ವರದಿಯನ್ನು ಇನ್ಫೋಸಿಸ್ ನಿನ್ನೆ ಬಿಡುಗಡೆ ಮಾಡಿದೆ. ವರದಿ ಪ್ರಕಾರ ಸಂಸ್ಥೆಯ ನಿವ್ವಳ ಲಾಭವು ಸುಮಾರು 5,945 ಕೋಟಿ ರೂಪಾಯಿ ಆಗಿದೆ. ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭವು ಸುಮಾರು ಶೇಕಡ 10.9ರಷ್ಟು ಮತ್ತು ಕಳೆದ ತ್ರೈಮಾಸಿಕದಿಂದ ಈ ತ್ರೈಮಾಸಿಕಕ್ಕೆ ಶೇಕಡ 3ರಷ್ಟು ಏರಿಕೆ ಕಂಡಿದೆ.
ಇನ್ನು ಉತ್ಪಾದನಾ ಆದಾಯವು ಮೊದಲ ತ್ರೈಮಾಸಿಕದಲ್ಲಿ 37,933 ಕೋಟಿ ರೂಪಾಯಿ ಆಗಿದೆ. ವರ್ಷದಿಂದ ವರ್ಷಕ್ಕೆ ಶೇಕಡ 10ರಷ್ಟು, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 1.3ರಷ್ಟು ಏರಿಕೆ ಕಂಡಿದೆ. ಆದಾಯ ಬೆಳವಣಿಗೆಯು ವರ್ಷದಿಂದ ವರ್ಷಕ್ಕೆ ಶೇಕಡ 4.2 ಆಗಿದೆ. ಇನ್ನು ಟಿವಿಎಡಸ್ ಜೊತೆಗಿನ ಡೀಲ್ ಬಗ್ಗೆಯೂ ಮಾಹಿತಿಯನ್ನು ಇನ್ಫೋಸಿಸ್ ನೀಡಿದೆ. ಇನ್ನು ರೆವೆನ್ಯೂ ಗೈಡೆನ್ಸ್ ಅನ್ನು ಶೇಕಡ 4-7ರಿಂದ ಶೇಕಡ 1-3.5ಕ್ಕೆ ಇಳಿದಿದೆ.
ಇಂದು ಯಾವೆಲ್ಲ ತ್ರೈಮಾಸಿಕ ವರದಿ?
ಇಂದು ಅಲ್ಟ್ರಾಟೆಕ್ ಸಿಮೆಂಟ್, ಜೆಎಸ್‌ಡಬ್ಲ್ಯೂ ಸ್ಟೀಲ್, ಎಚ್‌ಡಿಎಫ್‌ಸಿ ಲೈಫ್, ಹಿಂದೂಸ್ತಾನ್ ಜಿಂಕ್, ಅಶೋಕ್ ಲೇಲ್ಯಾಂಡ್, ಕ್ರೆಡಿಟ್ಆಕ್ಸೆಸ್ ಗ್ರಾಮೀಣ್, ಔಟ್ಲ್, ತೇಜಸ್ ನೆಟ್‌ವರ್ಕ್ಸ್, ರಾಮಕೃಷ್ಣ ಫೋರ್ಜಿಂಗ್ಸ್, ಗ್ಲೆನ್ಮಾರ್ಕ್ ಲೈಫ್ ಸೈನ್ಸಸ್, ರಾಜಸ್ಥಾನ ಗ್ಲೋಬಲ್ ವೈರ್, ದೊಡ್ಲ ಡೈರಿ ಮೊದಲ ತ್ರೈಮಾಸಿಕದ ವರದಿಯನ್ನು ಪ್ರಕಟಿಸಲಿದೆ.
ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ತಿರುಮಲಾಯಿ ಕೆಮಿಕಲ್ ಮೊದಲ ತ್ರೈಮಾಸಿಕದ ವರದಿಯನ್ನು ಜುಲೈ 22 ಪ್ರಕಟ ಮಾಡಲಿದೆ.


Click it and Unblock the Notifications