ಕೇಂದ್ರ ಬಜೆಟ್ ಗೂ ಮುನ್ನ ಘೋಷಣೆ ಮಾಡಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರದಂದು (ಮೇ 28, 2020) ಅಧಿಕೃತವಾಗಿ ಇನ್ ಸ್ಟಂಟ್ PAN ಕಾರ್ಡ್ ವಿತರಣೆ ಸೇವೆಗೆ ಚಾಲನೆ ನೀಡಿದ್ದಾರೆ. ಇದು ಆಧಾರ್ ಬಳಸಿ ಇ- ಕೆವೈಸಿ ಮೂಲಕ PAN ಕಾರ್ಡ್ ವಿತರಿಸಲಾಗುತ್ತದೆ.
ಯಾರೆಲ್ಲ ಆಧಾರ್ ಹೊಂದಿದ್ದು, UIDAI ಡೇಟಾ ಬೇಸ್ ನಲ್ಲಿ ಮೊಬೈಲ್ ಸಂಖ್ಯೆ ನೋಂದಣಿ ಮಾಡಿಸಿಕೊಂಡಿರುತ್ತಾರೋ ಅಂಥವರು PAN ಕಾರ್ಡ್ ಗೆ ಅರ್ಜಿ ಹಾಕಬಹುದು. ಅರ್ಜಿ ಹಾಕಿಕೊಂಡ ತಕ್ಷಣವೇ PAN ಕಾರ್ಡ್ (e- PAN) ಆದಾಯ ತೆರಿಗೆ ಇಲಾಖೆಯಿಂದ ಉಚಿತವಾಗಿ ಅರ್ಜಿದಾರರಿಗೆ ದೊರೆಯುತ್ತದೆ. ಈ ವಿತರಣೆ ಪ್ರಕ್ರಿಯೆ ಕಾಗದರಹಿತವಾಗಿದ್ದು, ಎಲೆಕ್ಟ್ರಾನಿಕ್ PAN ಆಗಿರುತ್ತದೆ.
ಫೆಬ್ರವರಿಯಿಂದಲೇ ಪ್ರಾಯೋಗಿಕವಾಗಿ ಶುರು
ಆಧಾರ್ ಆಧಾರಿತವಾಗಿ ಇ ಕೆವೈಸಿ ವಿತರಣೆ ಅಧಿಕೃತವಾಗಿ ಗುರುವಾರದಿಂದ ಆರಂಭವಾದರೂ ಇದರ 'ಬೇಟಾ ವರ್ಷನ್' ಪ್ರಾಯೋಗಿಕವಾಗಿ ಫೆಬ್ರವರಿಯಿಂದ ಆದಾಯ ತೆರಿಗೆ ಇಲಾಖೆಯ ಇ- ಫೈಲಿಂಗ್ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಅಲ್ಲಿಂದ ಈಚೆಗೆ 6.7 ಲಕ್ಷಕ್ಕೂ ಹೆಚ್ಚು ಇನ್ ಸ್ಟಂಟ್ PAN ಕಾರ್ಡ್ ಪಡೆದಿದ್ದಾರೆ.
PAN ಕಾರ್ಡ್ ಪಡೆಯುವ ಪ್ರಕ್ರಿಯೆ ಬಹಳ ಸುಲಭ
ಇನ್ ಸ್ಟಂಟ್ PAN ಕಾರ್ಡ್ ಪಡೆಯುವ ಪ್ರಕ್ರಿಯೆ ಬಹಳ ಸುಲಭ. ಆದಾಯ ತೆರಿಗೆ ಇಲಾಖೆಯ ಇ- ಫೈಲಿಂಗ್ ವೆಬ್ ಸೈಟ್ ನಲ್ಲಿ ಆಧಾರ್ ಸಂಖ್ಯೆ ನಮೂದಿಸಿದರೆ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ಹಂಚಿಕೊಳ್ಳಬೇಕು. ಇಡೀ ಪ್ರಕ್ರಿಯೆ ಮುಗಿದ ಮೇಲೆ ಹದಿನೈದು ಸಂಖ್ಯೆಯ ಖಾತ್ರಿ ವಿವರ ಬರುತ್ತದೆ.
ಆಧಾರ್- ಪ್ಯಾನ್ ಕಾರ್ಡ್ ಜೋಡಣೆಗೆ ಜೂನ್ 30ರ ಗಡುವು
ವಿತರಣೆ ಆದ ತಕ್ಷಣ ಇ-ಪ್ಯಾನ್ ಅನ್ನು ಪೋರ್ಟಲ್ ನಿಂದ ಡೌನ್ ಲೋಡ್ ಮಾಡಬಹುದು. ಅರ್ಜಿದಾರರ ಇ- ಮೇಲೆ ಐಡಿಗೂ ಅದನ್ನು ಕಳುಹಿಸಲಾಗುತ್ತದೆ. ಆದಾಯ ತೆರಿಗೆ ಇಲಾಖೆ ಮೇ 25ನೇ ತಾರೀಕು ನೀಡಿದ ಮಾಹಿತಿ ಪ್ರಕಾರ, ತೆರಿಗೆ ಪಾವತಿದಾರರಿಗೆ 50.52 ಕೋಟಿ ಪ್ಯಾನ್ ವಿತರಿಸಲಾಗಿದೆ. ಅದರಲ್ಲಿ 49.39 ಕೋಟಿ ಮಂದಿ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ವಿತರಣೆ ಮಾಡಲಾಗಿದೆ. 32.17 ಕೋಟಿ ಆಧಾರ್ ಜತೆಗೆ ಜೋಡಣೆ ಮಾಡಲಾಗಿದೆ. ಈ ವರ್ಷದ ಜೂನ್ 30ರೊಳಗೆ ಕಡ್ಡಾಯವಾಗಿ ಆಧಾರ್ ಜತೆಗೆ ಪ್ಯಾನ್ ಕಾರ್ಡ್ ಜೋಡಣೆ ಮಾಡಬೇಕಿದೆ. ಇಲ್ಲದಿದ್ದಲ್ಲಿ ಪ್ಯಾನ್ ಕಾರ್ಡ್ ಕಾರ್ಯ ನಿರ್ವಹಿಸುವುದಿಲ್ಲ.


Click it and Unblock the Notifications