ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ 2025ಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಚಾಲನೆ ನೀಡಿದ್ದಾರೆ. ಮುಂದಿನ ಮೂರು ದಿನಗಳ ಕಾಲ ನಡೆಯುವ ಈ ಸಮಾವೇಶವು ಕರ್ನಾಟಕವನ್ನು 'ಜಾಗತಿಕ ಬಂಡವಾಳ ಹೂಡಿಕೆಯ ಶಕ್ತಿಕೇಂದ್ರ'ವನ್ನಾಗಿ ಅಭಿವೃದ್ಧಿಪಡಿಸಲು ಸಹಾಯವಾಗಲಿದೆ. ಈ ಕಾರ್ಯಕ್ರಮದಲ್ಲಿ ಒಪ್ಪಂದಗಳು, ಸರಣಿ ವಿಚಾರ ಸಂಕಿರಣಗಳು, ನೀತಿ ಘೋಷಣೆಗಳು ಮತ್ತು ನವೋದ್ಯಮಗಳಿಗೆ ಇರುವ ಸವಾಲುಗಳ ಬಗ್ಗೆ ಚರ್ಚೆ ನಡೆಯಲಿದೆ.
ಅರಮನೆ ಆವರಣದಲ್ಲಿ ಆಯೋಜಿಸಿರುವ 'ಇನ್ವೆಸ್ಟ್ ಕರ್ನಾಟಕ-2025' ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ರಾಜನಾಥ್ ಸಿಂಗ್, ಭಾರತವು ಸ್ಥಿರ ಮತ್ತು ಸುಸ್ಥಿರ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸುವ ಮೂಲಕ ನಿರ್ಣಾಯಕ ಅನಿಶ್ಚಿತತೆಯ ನೀತಿಯ ಸಮಸ್ಯೆಯನ್ನು ಪರಿಹರಿಸಿದೆ. ಭಾರತ ಹೂಡಿಕೆದಾರರಿಗೆ ಕೆಂಪು ರತ್ನಗಂಬಳಿ ಹಾಸಿದೆಯೇ ಹೊರತು ಕೆಂಪು ಪಟ್ಟಿ ಇಲ್ಲ. ದೇಶದಲ್ಲಿ ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಸರ್ವರ ಒಮ್ಮತವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಮತ್ತು ಕರ್ನಾಟಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದಲ್ಲದೇ ಮಹೀಂದ್ರಾ ಮತ್ತು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ, ಜೆಎಸ್‌ಡಬ್ಲ್ಯೂ ಗ್ರೂಪ್ ಅಧ್ಯಕ್ಷೆ ಸಜ್ಜನ್ ಜಿಂದಾಲ್, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಕಿರ್ಲೋಸ್ಕರ್ ಸಿಸ್ಟಮ್ಸ್ ಅಧ್ಯಕ್ಷೆ ಗೀತಾಂಜಲಿ ಕಿರ್ಲೋಸ್ಕರ್ ಮತ್ತು ಹೀರೋ ಫ್ಯೂಚರ್ ಎನರ್ಜಿಸ್ ಅಧ್ಯಕ್ಷ ರಾಹುಲ್ ಮುಂಜಾಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಾವೀನ್ಯತೆ, ಕೈಗಾರಿಕಾ ಅಭಿವೃದ್ಧಿ ಮತ್ತು ಜಾಗತಿಕ ಪಾಲುದಾರಿಕೆಗಳನ್ನು ಬೆಳೆಸುವಲ್ಲಿ ದಕ್ಷಿಣ ರಾಜ್ಯದ ಕಾರ್ಯತಂತ್ರದ ಅನುಕೂಲಗಳನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿರುವ ಮೂರು ದಿನಗಳ ಜಾಗತಿಕ ಹೂಡಿಕೆದಾರರ ಸಭೆಯು ಇಂದಿನ ಉದ್ಘಾಟನೆಯ ನಂತರ ನಾಳೆ ಅಂದರೆ ಫೆಬ್ರವರಿ 12 ರಂದು ಅಧಿಕೃತವಾಗಿ ಪ್ರಾರಂಭವಾಗಲಿದೆ. ಫೆ.14ರಂದು ಮಧ್ಯಾಹ್ನ 12 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರದ ಸಚಿವರು, ರಾಜ್ಯ ಸಚಿವರು, ಉದ್ಯಮಿಗಳು, ಇತರರು ಉಪಸ್ಥಿತರಿರಲಿದ್ದಾರೆ.
ಈ ಸಮಾವೇಶದಲ್ಲಿ 19 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಜತೆಗೆ 9 ದೇಶಗಳ ಪೆವಿಲಿಯನ್‌ಗಳು ಹಾಗೂ ವಿಶೇಷ ಸಂವಾದ ಕಾರ್ಯಕ್ರಮಗಳು ನಡೆಯಲಿವೆ.
ಬಹ್ರೇನ್ ದೇಶದ ರಾಯಭಾರಿ ಮಹಮದ್ ಅಲ್ ಗಾವ್ಡ್, ಕ್ಯೂಬಾದ ಅಬೆಲ್ ಅಬಾಲ್ ಡೆಸ್ಪೇನ್, ಇಟಲಿಯ ಆಂಟೋನಿಯೊ ಬಾರ್ತೋಲಿ, ನೇಪಾಳದ ಡಾ. ಶಂಕರ್ ಪ್ರಸಾದ್ ಶರ್ಮ, ಪೋಲೆಂಡಿನ ಸೆಬಾಸ್ಟಿಯನ್ ಡಾಮ್ಜಾಲ್ಸ್ಕಿ, ಮಲೇಷ್ಯಾದ ದಾತೊ ಮಜಾಫರ್ ಷಾ ಮುಸ್ತಫ, ಜಪಾನಿನ ಓನೋ ಕೀಚಿ, ಕಾಂಗೋದ ರೇಮಂಡ್ ಸರ್ಜ್ ಬೇಲ್, ಜಮೈಕಾದ ಜೇಸನ್ ಹಾಲ್ ಫಿಜಿಯ ಜಗನ್ನಾಥ ಸ್ವಾಮಿ, ಜಮೈಕಾದ ಜೇಸನ್ ಹಾಲ್, ಕಝಕಸ್ತಾನದ ನೂರುಲಾನ್ ಝಲ್ಗಸ್ಬಯೇವ್, ಮೊರಾಕ್ಕೋದ ಮಹಮದ್ ಮಾಲೀಕಿ, ಸೀಷೆಲ್ಸ್ ನ ಲಲಟಿಯಾನಾ ಅಕೌಷೆ, ತಝಕಿಸ್ತಾನದ ಲೂಕ್ಮನ್ ಬೊಬಕಾಲೊಜೋಡ, ಟೋಗೋದ ಯಾವೋ ಇಡೆಂ ಮತ್ತು ಜಿಂಬಾಬ್ವೆಯ ಸ್ಟೆಲ್ಲಾ ನೋಮೋ ಸೇರಿದಂತೆ ಒಟ್ಟು ವಿವಿಧ ದೇಶಗಳ ರಾಯಭಾರಿಗಳು ಭಾಗವಹಿಸಿದ್ದಾರೆ.


Click it and Unblock the Notifications