ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (PBOC) ಎಚ್ ಡಿಎಫ್ ಸಿ ಬ್ಯಾಂಕ್ ನ 1 ಪರ್ಸೆಂಟ್ ಗೂ ಹೆಚ್ಚು ಷೇರನ್ನು ಮೂರು ತಿಂಗಳ ಅವಧಿಯಲ್ಲಿ ಖರೀದಿ ಮಾಡಿದ್ದನ್ನು ಹೂಡಿಕೆದಾರರು, ತಜ್ಞರು, ರಾಜಕಾರಣಿಗಳು ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ. ಆದರೆ ವಿದೇಶಿ ಪೋರ್ಟ್ ಫೋಲಿಯೋ ಹೂಡಿಕೆದಾರರು ಮುಂಚಿನಿಂದಲೂ ಭಾರತದ ಸಂಸ್ಥೆಗಳಲ್ಲಿ, ಅದರಲ್ಲೂ ಹಣಕಾಸಿನ ಸಂಸ್ಥೆಗಳಲ್ಲಿ ದೊಡ್ಡ ಮೊತ್ತವನ್ನು ಹೂಡುತ್ತಲೇ ಬಂದಿದ್ದಾರೆ.
ಆದರೆ, ಈಗ ಪ್ರಶ್ನೆ ಬಂದಿರುವುದು ವಿದೇಶಿ ಸರ್ಕಾರದ ಹಿಡಿತದಲ್ಲಿ ಇರುವ ಸಂಸ್ಥೆಯೊಂದು, ಅಂದರೆ ಅಲ್ಲಿನ ಕೇಂದ್ರ ಬ್ಯಾಂಕ್ ಹಣ ಹೂಡಿಕೆ ಮಾಡಿದೆ. ಸರ್ಕಾರ ಸ್ವಾಮ್ಯದ ಸಂಸ್ಥೆಯು ಹೂಡಿಕೆ ಮಾಡಿದರೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಎಂದು ಪರಿಗಣಿಸಲಾಗುತ್ತದೆ. ಮತ್ತು ಅವು ಭಾರತದ ಬ್ಯಾಂಕ್ ಗಳು ಮತ್ತು ಸಂಸ್ಥೆಗಳಲ್ಲಿ ಮಹತ್ವವಾದ ಪಾಲನ್ನು ಹೊಂದಿವೆ.
ಉದಾಹರಣೆಗೆ ಐಸಿಐಸಿಐ ಬ್ಯಾಂಕ್ ತೆಗೆದುಕೊಳ್ಳಿ. ಅದರಲ್ಲಿ ಎರಡನೇ ಅತಿದೊಡ್ಡ ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ ಸಿಂಗಾಪೂರ ಸರ್ಕಾರ. ಡಿಸೆಂಬರ್ 31, 2019ರ ಮಾಹಿತಿ ಪ್ರಕಾರ, ಸಿಂಗಾಪೂರ ಸರ್ಕಾರವು ಐಸಿಐಸಿಐ ಬ್ಯಾಂಕ್ ನಲ್ಲಿ 2 ಪರ್ಸೆಂಟ್ ಪಾಲನ್ನು ಹೊಂದಿದೆ. ಅದೇ ರೀತಿ ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿಯು ಸವರನ್ ವೆಲ್ತ್ ಫಂಡ್ ಆಗಿದ್ದು, ಅದರ ಮಾಲೀಕತ್ವ ಅಬುಧಾಬಿ ಸರ್ಕಾರದ ಬಳಿ ಇದೆ.

ಈಗ ಐಸಿಐಸಿಐ ಬ್ಯಾಂಕ್ ನಲ್ಲಿ ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟ್ ಮೆಂಟ್ ಹೇಗಿದೆ ನೋಡಿ:
ಡಾಡ್ಜ್ ಅಂಡ್ ಕಾಕ್ಸ್ ಇಂಟರ್ ನ್ಯಾಷನಲ್ ಸ್ಟಾಕ್ ಫಂಡ್ 4.11%
ಸಿಂಗಾಪೂರ ಸರ್ಕಾರ 2.09%
ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿ 1.07%
ಎಚ್ ಡಿಎಫ್ ಸಿ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ವಿಚಾರದಲ್ಲೂ ಹೀಗೆ ಆಗಿದೆ. ಎಚ್ ಡಿಎಫ್ ಸಿ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ಅಂದರೆ ಫಾರಿನ್ ಪೋರ್ಟ್ ಫೋಲಿಯೋ ಹೂಡಿಕೆದಾರರಿಗೆ ಬಲು ಪ್ರೀತಿ. ನಿರಂತರವಾಗಿ ಇವುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.
ಎಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ 37.92% ಪಾಲನ್ನು ಹೊಂದಿದ್ದಾರೆ. ಎಚ್ ಡಿಎಫ್ ಸಿ ಬ್ಯಾಂಕ್ ನಲ್ಲಿನ ಪ್ರಮುಖ ಎಫ್ ಪಿಐ ಷೇರುದಾರರು ಯಾರು ಎಂಬ ವಿವರ ಹೀಗಿದೆ:
ಯುರೋ ಪೆಸಿಫಿಕ್ ಗ್ರೋಥ್ ಫಂಡ್ 4.76%
ಸಿಂಗಾಪೂರ ಸರ್ಕಾರ 1.27%
ಚೀನಾದ ಬ್ಯಾಂಕ್ ಹೂಡಿಕೆ ಮಾಡಿದರೆ ತಪ್ಪೆ?
ಪುಸ್ತಕಗಳ ಮಾಹಿತಿಯನ್ನೇ ಹೇಳುವುದಾದರೆ, ಇತರ ಸವರನ್ ವೆಲ್ತ್ ಫಂಡ್ ಗಳು ಬ್ಯಾಂಕ್ ಗಳು ಹಾಗೂ ಸಂಸ್ಥೆಗಳಲ್ಲಿ ಷೇರನ್ನು ಖರೀದಿ ಮಾಡಬಹುದು. ಈಗ ಚೀನಾದ ಬ್ಯಾಂಕ್ ವಿಚಾರಕ್ಕೆ ಬಂದರೆ ಇದೇ ನಿಯಮ ಅನ್ವಯಿಸುತ್ತದೆ. ಇನ್ನೂ ಒಂದು ಮುಖ್ಯ ವಿಚಾರ ಏನೆಂದರೆ, ಡಿಸೆಂಬರ್ 31, 2019ಕ್ಕೆ ಎಫ್ ಪಿಐಗಳು ಎಚ್ ಡಿಎಫ್ ಸಿಯಲ್ಲಿ ಹೊಂದಿದ್ದ ಷೇರಿನ ಪಾಲಿನ ಶೇಕಡಾ 72ರಷ್ಟಿದೆ. ಆದ್ದರಿಂದ ಚೀನಾದ ಪೀಪಲ್ಸ್ ಬ್ಯಾಂಕ್ 1% ಷೇರು ಖರೀದಿಸುವುದು ದೊಡ್ಡ ವಿಷಯ ಏನಲ್ಲ.
ಎಚ್ ಡಿಎಫ್ ಸಿ ಷೇರಿನ ಬೆಲೆ ಬಿದ್ದ ಪರಿ ಕಂಡು ಹೂಡಿಕೆ ಮಾಡುವ ಆಲೋಚನೆ ಬರುತ್ತದೆ. ಸಾಮಾನ್ಯವಾಗಿ ಇಂಥ ಬೆಳವಣಿಗೆಗೆ ಗಾಬರಿ ಆಗುವ ಅಗತ್ಯ ಇಲ್ಲ. ಆದರೆ ಚೀನಾದ ಕೇಂದ್ರ ಬ್ಯಾಂಕ್ ನಿಂದ (ನಮ್ಮಲ್ಲಿನ ರಿಸರ್ವ್ ಬ್ಯಾಂಕ್ ನಂಥ ಸಂಸ್ಥೆ) ಪ್ರಮುಖ ಬ್ಲ್ಯೂಚಿಪ್ ಕಂಪೆನಿಯಾದ ಎಚ್ ಡಿಎಫ್ ಸಿ ಷೇರುಗಳನ್ನು ಖರೀದಿ ಮಾಡುವುದು ವಿರಳ. ಇದು ಹುಬ್ಬೇರಿಸುವಂತೆ ಮಾಡುತ್ತದೆ. ಹೀಗೆ ಸ್ವಲ್ಪ ಪ್ರಮಾಣದಲ್ಲಿ ಚೀನಾದ ಬ್ಯಾಂಕ್ ಖರೀದಿ ಮಾಡುತ್ತಾ ತನ್ನ ಪಾಲನ್ನು ಹೆಚ್ಚಿಸಿಕೊಳ್ಳಬಹುದು ಎಂಬ ಅಪಾಯದ ಎಚ್ಚರಿಕೆ ಗಂಟೆ ಇದು.
ಎಫ್ ಪಿಐ ಹೂಡಿಕೆ ನಿಯಂತ್ರಿಸುವವರು ಯಾರು?
ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್, ನಾನ್ ರೆಸಿಡೆಂಟ್ ಇಂಡಿಯನ್ಸ್ (ಎನ್ ಆರ್ ಐ) ಹಾಗೂ ಪರ್ಸನ್ಸ್ ಆಫ್ ಇಂಡಿಯನ್ ಆರಿಜಿನ್ (ಪಿಐಒ) ಭಾರತದ ಪ್ರಾಥಮಿಕ ಹಾಗೂ ಸೆಕೆಂಡರಿ ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಅದು ಪೋರ್ಟ್ ಫೋಲಿಯೋ ಇನ್ವೆಸ್ಟ್ ಮೆಂಟ್ ಸ್ಕೀಮ್ (ಪಿಐಎಸ್) ಮೂಲಕ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಪ್ರತಿ ದಿನ ಈ ಹೂಡಿಕೆದಾರರು ಹೊಂದಿರುವ ಷೇರು ಪ್ರಮಾಣವನ್ನು ನಿಗಾ ಮಾಡುತ್ತದೆ.
ಈ ಪೋರ್ಟ್ ಫೋಲಿಯೋ ಇನ್ವೆಸ್ಟ್ ಮೆಂಟ್ ಸ್ಕೀಮ್ ಮೂಲಕ ಎಫ್ ಪಿಐ/ಎನ್ ಆರ್ ಐಗಳು ಭಾರತೀಯ ಕಂಪೆನಿಗಳ ಷೇರು ಅಥವಾ ಡಿಬೆಂಚರ್ ಗಳನ್ನು ಷೇರು ಮಾರುಕಟ್ಟೆಯಲ್ಲಿ ಖರೀದಿ ಮಾಡಬಹುದು. ಎಫ್ ಪಿಐನಿಂದ ಎಷ್ಟು ಹೂಡಿಕೆ ಮಾಡಬಹುದು, ಯಾವ ವಲಯದ ಮೇಲೆ ಎಷ್ಟು ಹೂಡಿಕೆ ಎಂಬ ಮಿತಿಯನ್ನು ವಿಶೇಷ ನಿರ್ಣಯವನ್ನು ತೆಗೆದುಕೊಳ್ಳುವ ಮೂಲಕ ನಿಗದಿ ಪಡಿಸಲಾಗುತ್ತದೆ.
ಆಯಾ ಕಂಪೆನಿಗಳು ಹೊರಡಿಸುವ ನಿರ್ಣಯದ ಆಧಾರದ ಮೇಲೆ ಎನ್ ಆರ್ ಐಗಳು, ಪಿಐಒಗಳಿಗೆ ಇರುವ 10 ಪರ್ಸೆಂಟ್ ಮಿತಿಯನ್ನು 24 ಪರ್ಸೆಂಟ್ ತನಕ ಏರಿಸಬಹುದು. ಯಾವಾಗ ಆ ಮಿತಿಯು ಮೀರುತ್ತದೋ ಆ ಕೂಡಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಮಧ್ಯಪ್ರವೇಶಿಸಿ, ಈ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ.


Click it and Unblock the Notifications