ನವದೆಹಲಿ, ಏಪ್ರಿಲ್ 11: ಆನ್‌ಲೈನ್ ಪೇಮೆಂಟ್ ಮೂಲಕ ಇಡೀ ದೇಶದ ಗಮನ ಸೆಳೆದು, ಜಾಗತಿಕವಾಗಿ ಬೆಳೆದಿದ್ದ 'ಪೆಟಿಎಂ' ಸಂಸ್ಥೆ ಈಗ ಮೂಲೆಗುಂಪಾಗಿ ನರಳುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಪೆಟಿಎಂ ಸಂಸ್ಥೆ ಪರಿಸ್ಥಿತಿ ಈಗ ಹೇಗಾಗಿದೆ ಎಂದರೆ ಕಂಪನಿ ಉಳಿಸಿಕೊಂಡರೆ ಸಾಕಪ್ಪಾ ಅಂತಿದ್ದಾರೆ ಉದ್ಯೋಗಿಗಳು. ಏಕೆಂದರೆ ಸಾಲು ಸಾಲು ಸಮಸ್ಯೆ ಎದುರಿಸುತ್ತಿರುವ 'ಪೆಟಿಎಂ' ಇನ್ನೇನು ಸಂಪೂರ್ಣ ಮುಳುಗಿ ಹೋಗುವ ಪರಿಸ್ಥಿತಿ ಕೂಡ ಎದುರಾಗುತ್ತಿದೆ ಎಂಬ ಆರೋಪಗಳು ಈ ಸಮಯದಲ್ಲಿ ಕೇಳಿಬರುತ್ತಿವೆ.

ಆರ್‌ಬಿಐ ನಿರ್ಬಂಧದ ನಂತರ 'ಪೆಟಿಎಂ' ಗ್ರಹಚಾರ ಕೂಡ ಬದಲಾಗಿ ಹೋಗಿದೆ. ಇದೇ ಕಾರಣಕ್ಕೆ 'ಪೆಟಿಎಂ' ಸಂಸ್ಥೆ ಷೇರು ಮಾರುಕಟ್ಟೆಯಲ್ಲಿ ಅಕ್ಷರಶಃ ನೆಲಕ್ಕೆ ಅಪ್ಪಳಿಸಿ, ಮತ್ತೆ ನಿಧಾನವಾಗಿ ಮೇಲೆ ಬಂದಿತ್ತು. ಆದರೆ ಈಗ ಮತ್ತೆ ಹೂಡಿಕೆದಾರರಿಗೆ ಆಘಾತ ಎದುರಾಗಿದೆ. 'ಪೆಟಿಎಂ' ಪೇಮೆಂಟ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ & ಸಿಇಒ ಹುದ್ದೆಗೆ ಸುರೀಂದರ್ ಚಾವ್ಲಾ ರಾಜೀನಾಮೆ ನೀಡಿದ ನಂತರ ಅಲ್ಲೋಲ ಕಲ್ಲೋಲ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಕೂಡ 'ಪೆಟಿಎಂ' ಷೇರುಗಳು ಮತ್ತೆ ಮಕಾಡೆ ಮಲಗುತ್ತಿವೆ.
ಪೆಟಿಎಂ ಷೇರುಗಳ ಕುಸಿತ
ಪಿಪಿಬಿಎಲ್ MD & CEO ಸುರೀಂದರ್ ಚಾವ್ಲಾ ವೈಯಕ್ತಿಕ ಕಾರಣ ಹೇಳಿ ತಮ್ಮ ರಾಜೀನಾಮೆಯ ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆ ಹೊರತಾಗಿ ಜೂನ್ 26, 2024 ರಂದು ತಮ್ಮ ಕರ್ತವ್ಯದಿಂದಲೇ ಬಿಡುಗಡೆ ಆಗಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಈ ಬಗ್ಗೆ ಪೇಟಿಎಂ ಸಂಸ್ಥೆ ಪೋಷಕ ಸಂಸ್ಥೆ ಆಗಿರುವ One97 ಕಮ್ಯುನಿಕೇಷನ್ಸ್ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಇಂದು ಬೆಳಗ್ಗೆಯೇ 'ಪೆಟಿಎಂ' ಷೇರುಗಳು ಮಕಾಡೆ ಮಲಗಿ ಹೂಡಿಕೆ ಮಾಡಿದ್ದವರಿಗೆ ಭಯ ಕೂಡ ಎದುರಾಗಿತ್ತು.
ಸಾಲು ಸಾಲು ವಿವಾದಗಳು
ಆರಂಭದಲ್ಲಿ 'ಪೆಟಿಎಂ' ಷೇರುಗಳು ಮಕಾಡೆ ಮಲಗಿದರೂ ನಂತರ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿವೆ. ಹೀಗಾಗಿ ಷೇರು ಪೇಟೆಯಲ್ಲಿ ಹೂಡಿಕೆದಾರರು ಒಂದಷ್ಟು ನಿಟ್ಟುಸಿರನ್ನು ಬಿಟ್ಟಿದ್ದಾರೆ. ಮತ್ತೊಂದು ಕಡೆ 'ಪೆಟಿಎಂ' ಸಂಸ್ಥೆಯ ಒಳಗೆ ಸಾಕಷ್ಟು ವಿವಾದಗಳು ಮತ್ತು ಬದಲಾವಣೆ ನಡೆಯುತ್ತಿರುವ ಕಾರಣಕ್ಕೆ ಮುಂದಿನ ದಿನಗಳಲ್ಲಿ ಕೂಡ ಪೆಟಿಎಂ ಷೇರುಗಳ ಏರಿಳಿತ ಮಾಮೂಲಿ ಎಂಬ ಮಾತುಗಳೂ ಕೇಳಿಬರುತ್ತಿವೆ. ಇಷ್ಟೆಲ್ಲದರ ನಡುವೆ ಷೇರುಪೇಟೆ ಮಾತ್ರ ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಹಾಗೇ ಹೂಡಿಕೆದಾರರು ಕೂಡ.
ಕೆಲವೇ ವರ್ಷಗಳ ಹಿಂದೆ 'ಪೆಟಿಎಂ' ಹೆಸರು ದೊಡ್ಡ ಪ್ರಮಾಣದಲ್ಲಿ ಹರಡಿತ್ತು. ಆನ್‌ಲೈನ್ ಪೇಮೆಂಟ್ ಅಂದ್ರೆ ಅದು ಪೆಟಿಎಂ ಮಾತ್ರ ಎನ್ನುವಷ್ಟರ ಮಟ್ಟಿಗೆ ಪೆಟಿಎಂ ಸಂಸ್ಥೆ ಹೆಸರು ಗಳಿಸಿತ್ತು. ಆದರೆ ಈಗ ಎಲ್ಲವೂ ಬದಲಾಗಿ ಹೋಗಿದೆ. ಹಾಗೇ 'ಪೆಟಿಎಂ' ಸಾಲು, ಸಾಲು ವಿವಾದದಲ್ಲಿ ಕೂಡ ಸಿಲುಕಿದೆ. ಆರ್‌ಬಿಐ ಕಠಿಣ ನಿರ್ಧಾರದ ಬಳಿಕ ಸಮಸ್ಯೆ ಎದುರಾಗಿದೆ.


Click it and Unblock the Notifications