ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ನೀಡಲಾಗಿದೆ. 3,300 ಕೋಟಿ ರುಪಾಯಿ ಹವಾಲ ಹಗರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ತೆರಿಗೆ ವಂಚನೆ ಪ್ರಕರಣದ ಭಾಗವಾಗಿರುವ ಹೈದರಾಬಾದ್ ಮೂಲದ ಕಂಪೆನಿಯಿಂದ 170 ಕೋಟಿ ರುಪಾಯಿ ಹಣ ಪಡೆದ ಬಗ್ಗೆ ವಿವರಣೆ ಕೇಳಿ ಕಾಂಗ್ರೆಸ್ ಗೆ ನೋಟಿಸ್ ನೀಡಲಾಗಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಸೌಕರ್ಯ ವಲಯದ ಪ್ರಮುಖ ಕಾರ್ಪೊರೇಟ್ ಹೌಸ್ ಗಳ ಮೇಲೆ ದೆಹಲಿ, ಮುಂಬೈ, ಹೈದರಾಬಾದ್ ಗಳಲ್ಲಿ ಕಳೆದ ತಿಂಗಳು ದಾಳಿ ನಡೆಸಲಾಗಿತ್ತು. ಆ ತನಿಖೆಯ ಮುಂದುವರಿದ ಭಾಗವಾಗಿ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ನೀಡಲಾಗಿದೆ. ಅಧಿಕಾರಿಗಳ ಪ್ರಕಾರ, ಹೈದರಾಬಾದ್ ಮೂಲದ ಮೇಘಾ ಇನ್ಫ್ರಾಸ್ಟ್ರಕ್ಚರ್ ಮತ್ತು ಎಂಜಿನಿಯರಿಂಗ್ ನಿಂದ ಕಾಂಗ್ರೆಸ್ ಗೆ ಹಣ ನೀಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಕಾಂಗ್ರೆಸ್ ನ ಕೆಲವು ಪದಾಧಿಕಾರಿಗಳ ಮೇಲೆ ಕೂಡ ತೆರಿಗೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಆದಾಯ ತೆರಿಗೆ ಇಲಾಖೆಯ ನೀತಿಗಳನ್ನು ಮಾಡುತ್ತದೆ. ಸಿಬಿಡಿಟಿ ಮಾಹಿತಿ ನೀಡಿ, ನಕಲಿ ಕಾಂಟ್ರ್ಯಾಕ್ಟ್ ಬಿಲ್ ಗಳ ಮೂಲಕ ಮೂರು ಸಾವಿರದ ಮುನ್ನೂರು ಕೋಟಿ ರುಪಾಯಿ ತನಕ ಹಣದ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಆಂಧ್ರಪ್ರದೇಶದ ಪ್ರಮುಖ ವ್ಯಕ್ತಿಯೊಬ್ಬರಿಗೆ ನೂರೈವತ್ತು ಕೋಟಿಗೂ ಹೆಚ್ಚು ಮೊತ್ತದ ನಗದು ಪಾವತಿ ಮಾಡಿದ ಬಗ್ಗೆ ಸಾಕ್ಷ್ಯಾಧಾರವಿದೆ. ಶೋಧ ಕಾರ್ಯಾಚರಣೆ ವೇಳೆ ಈ ಅಂಶ ಬೆಳಕಿಗೆ ಬಂದಿದೆ ಎಂದು ಸಿಬಿಡಿಟಿ ತಿಳಿಸಿದೆ. ಶೋಧದ ವೇಳೆ ಲೆಕ್ಕ ನೀಡದ ನಾಲ್ಕು ಕೋಟಿ ಇಪ್ಪತ್ತು ಲಕ್ಷ ನಗದು ಹಾಗೂ ಮೂರು ಕೋಟಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಆಭರಣ ಕೂಡ ವಶಪಡಿಸಿಕೊಳ್ಳಲಾಗಿದೆ.
ಹಣವನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಮೀಸಲಿರಿಸಲಾಗಿತ್ತು. ಆದರೆ ವಿವಿಧ ಜಾಲಗಳ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. ಎನ್ ಸಿಆರ್ ಹಾಗೂ ಮುಂಬೈನಲ್ಲಿ ಇರುವ ಕಂಪೆನಿಗಳೇ ಈ ವರ್ಗಾವಣೆಯಲ್ಲಿ ಭಾಗಿಯಾಗಿವೆ. ದಕ್ಷಿಣ ಭಾರತದಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಯೋಜನೆಗಳು ಹಾಗೂ ಪ್ರಮುಖ ಮೂಲಸೌಕರ್ಯ ಯೋಜನೆಗಳ ಬೋಗಸ್ ಬಿಲ್ ಸೃಷ್ಟಿ ಮಾಡಲಾಗಿದೆ.


Click it and Unblock the Notifications