ಒಂದು ಪ್ಯಾಕೆಟ್‌ನಲ್ಲಿ ಒಂದು ಬಿಸ್ಕತ್ತು ಕಡಿಮೆ ಇದ್ದುದ್ದಕ್ಕೆ ಎಫ್‌ಎಂಸಿಜಿ ಪ್ರಮುಖ ಐಟಿಸಿ ಒಂದು ಲಕ್ಷ ರೂಪಾಯಿ ತೆರಬೇಕಾಗಿ ಬಂದಿದೆ. 16 ಬಿಸ್ಕೆಟ್‌ಗಳ ಪ್ಯಾಕೆಟ್‌ನ ಪ್ಯಾಕ್‌ನಲ್ಲಿ 15 ಬಿಸ್ಕೆಟ್‌ಗಳು ಇದ್ದು, ಒಂದು ಬಿಸ್ಕತ್ತು ಕಡಿಮೆ ಇದ್ದ ಕಾರಣ ಒಂದು ಲಕ್ಷ ರೂಪಾಯಿ ಪಾವತಿ ಮಾಡುವಂತೆ ಚೆನ್ನೈನ ಗ್ರಾಹಕರ ವೇದಿಕೆ ಐಟಿಸಿಗೆ ಆದೇಶವನ್ನು ನೀಡಿದೆ.
2021 ರ ಡಿಸೆಂಬರ್‌ನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲು ಚೆನ್ನೈ ಮೂಲದ ನಿವಾಸಿ ಪಿ ದಿಲ್ಲಿಬಾಬು ಐಟಿಸಿಯ ಸನ್‌ಫೀಸ್ಟ್ ಮೇರಿ ಲೈಟ್ ಬಿಸ್ಕತ್‌ಗಳ ಪ್ಯಾಕೆಟ್ ಅನ್ನು ಖರೀದಿಸಿದ್ದಾರೆ. ಆದರೆ ಈ ಪ್ಯಾಕ್‌ನಲ್ಲಿ ಒಂದು ಬಿಸ್ಕತ್ತು ಕಡಿಮೆ ಇರುವುದು ಅವರ ಗಮನಕ್ಕೆ ಬಂದಿದೆ. ಈ ಬಳಿಕ ಪ್ರಕರಣ ಆರಂಭವಾಗಿದೆ.

ಸನ್‌ಫೀಸ್ಟ್ ಮೇರಿ ಲೈಟ್ ಬಿಸ್ಕತ್ತು ಪ್ಯಾಕೇಜ್‌ನಲ್ಲಿ 16 ಬಿಸ್ಕತ್ತುಗಳು ಇದೆ ಎಂದು ನಮೂದಿಸಿದ್ದರೂ, ಪ್ಯಾಕ್‌ನಲ್ಲಿ ಮಾತ್ರ 15 ಬಿಸ್ಕತ್ತುಗಳು ಇದ್ದವು. ಒಂದು ಬಿಸ್ಕತ್ತು ಪ್ಯಾಕ್‌ನಲ್ಲಿ ಇರಲಿಲ್ಲ. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ ದಿಲ್ಲಿಬಾಬು ಸ್ಥಳೀಯ ಅಂಗಡಿ ಮತ್ತು ಐಟಿಸಿಗೆ ವಿವರಣೆ ನೀಡಿದ್ದರು. ಆದರೆ ಸರಿಯಾದ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಇದಾದ ಬಳಿಕ ದಿಲ್ಲಿಬಾಬು ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿ, ಪ್ರತಿ ಬಿಸ್ಕತ್‌ಗೆ 75 ಪೈಸೆ ಬೆಲೆ ಇದೆ ಎಂದು ಉಲ್ಲೇಖಿಸಿದ್ದಾರೆ. ಐಟಿಸಿ ದಿನಕ್ಕೆ 50 ಲಕ್ಷ ಬಿಸ್ಕತ್ತು ಪ್ಯಾಕೆಟ್‌ಗಳನ್ನು ತಯಾರಿಸುತ್ತದೆ. ಈ ಅಂಕಿಅಂಶಗಳನ್ನು ಗಮನಿಸಿದರೆ, ಕಂಪನಿಯು ಗ್ರಾಹಕರಿಗೆ ಪ್ರತಿದಿನ 29 ಲಕ್ಷ ರೂಪಾಯಿ ವಂಚನೆ ಮಾಡುತ್ತಿದೆ ಎಂದಾಗುತ್ತದೆ ಎಂಬುವುದನ್ನು ಕೂಡಾ ದೂರಿನಲ್ಲಿ ತಿಳಿಸಿದ್ದಾರೆ.
ಐಟಿಸಿ ಬಿಸ್ಕತ್ತುಗಳನ್ನು ತೂಕದ ಆಧಾರದ ಮೇಲೆ ಮಾರಾಟ ಮಾಡಲಾಗುತ್ತದೆ, ಸಂಖ್ಯೆಯ ಆಧಾರದಲ್ಲಿ ಅಲ್ಲ ಎಂದು ಸಂಸ್ಥೆಯು ವಾದ ಮಾಡಿದೆ. ಸನ್‌ಫೀಸ್ಟ್ ಮೇರಿ ಲೈಟ್‌ನ ಪ್ರತಿ ಪ್ಯಾಕೆಟ್‌ನಲ್ಲಿ ನಮೂದಿಸಲಾದ ನಿವ್ವಳ ತೂಕವು 76 ಗ್ರಾಂ ಆಗಿದೆ. ಆದರೆ 15 ಬಿಸ್ಕತ್‌ಗಳಿರುವ ಪ್ರತಿ ಪ್ಯಾಕ್‌ನ ತೂಕ ಕೇವಲ 74 ಗ್ರಾಂ ಎಂದು ನ್ಯಾಯಾಲಯ ಹೇಳಿದೆ.
ಐಟಿಸಿ ನಂತರ 2011 ರ ಕಾನೂನು ಮಾಪನಶಾಸ್ತ್ರದ ನಿಯಮಗಳು ಪೂರ್ವ-ಪ್ಯಾಕೇಜ್ ಮಾಡಿದ ಸರಕುಗಳಲ್ಲಿ ಗರಿಷ್ಠ 4.5 ಗ್ರಾಂ ವ್ಯತ್ಯಾಸಕ್ಕೆ ಅವಕಾಶವಿದೆ ಎಂದು ವಾದ ಮಾಡಿದೆ. ಆದರೆ ಬಾಷ್ಪಶೀಲ ಉತ್ಪನ್ನಗಳಲ್ಲಿ (volatile products) ಮಾತ್ರ ಅಂತಹ ವಿನಾಯಿತಿಗಳು ಮಾನ್ಯವಾಗಿರುತ್ತವೆ ಎಂದು ನ್ಯಾಯಾಲಯವು ಈ ವಿವರಣೆಯನ್ನು ತಿರಸ್ಕರಿಸಿತು. ಕಾಲಾನಂತರದಲ್ಲಿ ತೂಕವನ್ನು ಕಳೆದುಕೊಳ್ಳದ ಕಾರಣ ಬಿಸ್ಕತ್ತುಗಳಿಗೆ ನಿಯಮವು ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಕೊನೆಗೆ ಐಟಿಸಿ ಸಂಸ್ಥೆಯು ದಿಲ್ಲಿಬಾಬು ಎಂಬವರಿಗೆ ಅನ್ಯಾಯದ ವಹಿವಾಟು ನಡೆಸಿದ್ದಕ್ಕೆ ಪರಿಹಾರವಾಗಿ 1 ಲಕ್ಷ ರೂಪಾಯಿ ನೀಡುವಂತೆ ಐಟಿಸಿಗೆ ಆದೇಶಿಸಿದೆ.


Click it and Unblock the Notifications