ಕೊರೊನಾವೈರಸ್ ವಿಶ್ವದಲ್ಲಿ ಮಾಡಿರುವ ಹಾನಿ ಅಷ್ಟಿಷ್ಟಲ್ಲ. ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿರುವುದರ ಜೊತೆಗೆ ಜಾಗತಿಕ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಇಂತಹ ಸಂದರ್ಭದಲ್ಲೂ ಜಗತ್ತಿನ ಶ್ರೀಮಂತ ವ್ಯಕ್ತಿ ಜೆಫ್ ಬೇಜೋಸ್ ತಮ್ಮ ಸಂಪತ್ತನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲೂ ಅಮೆಜಾನ್ ಸಂಸ್ಥಾಪಕ ಜೆಫ್ ಬೇಜೋಸ್ ಸಂಪತ್ತು ಈ ಹಿಂದಿಗಿಂತಲೂ ಏರಿಕೆಯಾಗಿದ್ದು, ನಿವ್ವಳ ಸಂಪತ್ತು 138.5 ಬಿಲಿಯನ್ ಡಾಲರ್(ಭಾರತದ ರುಪಾಯಿಗಳಲ್ಲಿ ಸುಮಾರು 10 ಲಕ್ಷದ 60 ಸಾವಿರ ಕೋಟಿ) ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕ ತಿಳಿಸಿದೆ.
ಅಮೆಜಾನ್ ಷೇರು ಮೌಲ್ಯ 5.3 ಪರ್ಸೆಂಟ್ ಏರಿಕೆ
ಜೆಫ್ ಬೇಜೋಸ್‌ರ ಅಮೆಜಾನ್.ಕಾಮ್ ಇನ್ ಷೇರು ಮೌಲ್ಯವು ಮಂಗಳವಾರ ದಾಖಲೆಯ 5.3 ಪರ್ಸೆಂಟ್ ಏರಿಕೆ ಕಂಡಿದೆ. ಅಮೆರಿಕಾದಲ್ಲಿ ಲಾಕ್‌ಡೌನ್ ವೇಳೆಯಲ್ಲಿ ಎಲ್ಲರ ಸಂಪತ್ತು ಕರಗುತ್ತಿದ್ದರೆ ಜೆಫ್ ಬೇಜೋಸ್ ಸಂಪತ್ತು ಏರಿಕೆ ದಾಖಲಿಸಿದೆ. ಷೇರು ಮೌಲ್ಯ 138.5 ಬಿಲಿಯನ್ ಡಾಲರ್ ಹೆಚ್ಚಳಗೊಂಡಿದೆ.
ವಿಶ್ವದ 500 ಶ್ರೀಮಂತರ 553 ಬಿಲಿಯನ್ ಡಾಲರ್ ನಷ್ಟ
ಕೊರೊನಾವೈರಸ್‌ನಿಂದಾಗಿ ವಿಶ್ವದಾದ್ಯಂತ ಶ್ರೀಮಂತರ ಸಂಪತ್ತೆಲ್ಲಾ ಕರಗಿ ಹೋಗಿದೆ. ಈ ವರ್ಷ ವಿಶ್ವದ ಟಾಪ್ 500 ಶ್ರೀಮಂತರ 553 ಬಿಲಿಯನ್ ಡಾಲರ್ ಸಂಪತ್ತು ನಷ್ಟವಾಗಿದೆ. (ಭಾರತದ ರುಪಾಯಿಗಳಲ್ಲಿ ಸುಮಾರು 42 ಲಕ್ಷ ಕೋಟಿ). ಬಿಲಿಯನೇರ್‌ಗಳ ಸೂಚ್ಯಂಕದ ಪ್ರಕಾರ ಇದು ಮಾರ್ಚ್ 23 ರಂದು ಅದರ ಕನಿಷ್ಠ ಮಟ್ಟದಿಂದ 20 ಪರ್ಸೆಂಟ್ ಏರಿಕೆಯಾಗಿದೆ.
ಲಾಕ್‌ಡೌನ್‌ನಿಂದ ಅಮೆಜಾನ್ ಬೇಡಿಕೆ ಹೆಚ್ಚಳ
ಬೃಹತ್ ಇ-ಕಾಮರ್ಸ್ ಕಂಪನಿಯಾದ ಅಮೆಜಾನ್ ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಲಾಕ್‌ಡೌನ್‌ನಿಂದಾಗಿ ಹಿಂದೆದೂ ಕಾಣದ ಬೇಡಿಕೆಯನ್ನು ಪೂರೈಸುತ್ತಿದೆ. ಅಮೆರಿಕಾ ಸೇರಿದಂತೆ ಹಲವೆಡೆ ಜನರು ಮನೆಯಿಂದಲೇ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡುತ್ತಿರುವುದರಿಂದ ಬೇಡಿಕೆ ದುಪ್ಪಟ್ಟಾಗಿದೆ. ಹೂಡಿಕೆದಾರರು ಕೂಡ ಅಮೆಜಾನ್ ಷೇರುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ಜೆಫ್ ಬೇಜೋಸ್ ಮಾಜಿ ಪತ್ನಿಯ ಸಂಪತ್ತು ಏರಿಕೆ
2020ರಲ್ಲಿ ಜಗತ್ತಿನ ಶ್ರೀಮಂತ ವ್ಯಕ್ತಿ ಜೆಫ್ ಬೇಜೋಸ್ ಸಂಪತ್ತು 24 ಬಿಲಿಯನ್ ಡಾಲರ್ ಹೆಚ್ಚಳಗೊಂಡಿದೆ. ಹಾಗೆಯೇ ಅವರ ಮಾಜಿ ಪತ್ನಿ ಮೆಕೆಂಜಿ ಬೇಜೋಸ್ ಸಂಪತ್ತು ಕೂಡ 8.2 ಬಿಲಿಯನ್ ಡಾಲರ್ ಏರಿಕೆಯಾಗಿದೆ. ಅಲ್ಲದೆ ಜಗತ್ತಿನ 18 ನೇ ಶ್ರೀಮಂತರಾಗಿ ಬಡ್ತಿ ಪಡೆದಿದ್ದಾರೆ.
ಜೆಫ್ ಪತ್ನಿ ಮೆಕೆಂಜಿ ಅಮೆಜಾನ್‌ನ 4 ಪರ್ಸೆಂಟ್ ಷೇರುಗಳನ್ನು ಪಡೆದಿದ್ದರೂ ಸಹ ಜೆಫ್ ಬೇಜೋಸ್ ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಮುಂದುವರಿದಿದ್ದಾರೆ.


Click it and Unblock the Notifications