ಜಿಯೋ ಫೈನಾನ್ಶಿಯಲ್ ಸರ್ವೀಸಸ್ ಷೇರುಗಳು ಬಿಎಸ್‌ಇಯಲ್ಲಿ ಲೀಸ್ಟ್ ಮಾಡಿದ ಮೊದಲ ಒಂದು ಗಂಟೆಯೊಳಗೆ ಶೇಕಡ 5ರಷ್ಟು ಕುಸಿತ ಕಂಡಿದೆ. ಜೆಫ್‌ಎಸ್‌ನ ಷೇರಿನ ಪ್ರಸ್ತುತ ಮಾರುಕಟ್ಟೆ ಬೆಲೆ ಶೇಕಡ 5ರಷ್ಟು ಕುಸಿತದೊಂದಿಗೆ 251.75 ರೂಪಾಯಿ ಆಗಿದೆ. ಜೆಫ್‌ಎಸ್ ಪ್ರತಿ ಷೇರು ಬೆಲೆ 265.00 ರೂಪಾಯಿಯಂತೆ ವಹಿವಾಟು ಆರಂಭ ಮಾಡಿತ್ತು. ದಿನದ ಗರಿಷ್ಠ ಮಟ್ಟ 278.20 ರೂಪಾಯಿ ಹಾಗೂ ಕನಿಷ್ಠ ಮಟ್ಟ 251.75 ರೂಪಾಯಿ ಆಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಿಂದ ವಿಭಜನೆಯಾದ ಹಣಕಾಸು ವ್ಯವಹಾರವಾದ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್ (ಜೆಎಫ್‌ಎಸ್) ಷೇರುಗಳನ್ನು ಪ್ರತಿ ಬಿಎಸ್‌ಇಯಲ್ಲಿ 265 ರೂಪಾಯಿಯಂತೆ ಲೀಸ್ಟಿಂಗ್ ಆಗಿದೆ. ಪ್ರಸ್ತುತ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಮಾರುಕಟ್ಟೆ ಮೌಲ್ಯ ಅಥವಾ ಸ್ಟಾಕ್ ಮೌಲ್ಯ 1.66 ಲಕ್ಷ ಕೋಟಿ ರೂಪಾಯಿಯಾಗಿದೆ. ಹಾಗೆಯೇ ಇದು ಬಜಾಜ್ ಫೈನಾನ್ಸ್ ನಂತರ ದೇಶದ ಎರಡನೇ ಅತಿದೊಡ್ಡ ಎನ್‌ಬಿಎಫ್‌ಸಿಯಾಗಿದೆ.

ಬೆಳಿಗ್ಗೆ 10:38 ಕ್ಕೆ ಜಿಯೋ ಫೈನಾನ್ಶಿಯಲ್ ಸರ್ವಿಸಸ್ 1,59,943.93 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಬಿಎಸ್‌ಇಯಲ್ಲಿನ "T" ಗ್ರೂಪ್ ಸೆಕ್ಯುರಿಟಿಗಳಲ್ಲಿನ ವ್ಯವಹಾರಗಳಿಗೆ ಜಿಯೋ ಫೈನಾನ್ಶಿಯಲ್ ಅನ್ನು ಅನುಮೋದಿಸಲಾಗಿದೆ. ಮುಂದಿನ 10 ಟ್ರೇಡಿಂಗ್ ಸೆಷನ್‌ಗಳಿಗೆ ಸ್ಟಾಕ್ ಶೇಕಡ 5ರಷ್ಟು ಸರ್ಕ್ಯೂಟ್ ಫಿಲ್ಟರ್ ಅನ್ನು ಹೊಂದಿರುತ್ತದೆ.
ಈ ನಡುವೆ ದುರ್ಬಲ ಜಾಗತಿಕ ಸೂಚನೆಗಳ ಹೊರತಾಗಿಯೂ ಆರಂಭಿಕ ವಹಿವಾಟಿನಲ್ಲಿ 30-ಷೇರು ಬಿಎಸ್‌ಇ ಸೆನ್ಸೆಕ್ಸ್ 141.61 ಪಾಯಿಂಟ್‌ಗಳು ಅಥವಾ ಶೇಕಡ 0.22ರಷ್ಟು ಏರಿಕೆಯಾಗಿ 65,090 ಕ್ಕೆ ತಲುಪಿದೆ. ನಿಫ್ಟಿ 50 ಸುಮಾರು 39.75 ಪಾಯಿಂಟ್‌ಗಳು ಅಥವಾ ಶೇಕಡ 0.21ರಷ್ಟು ಜಿಗಿದು 19,349 ಕ್ಕೆ ತಲುಪಿದೆ.
ನಿಫ್ಟಿ ಬ್ಯಾಂಕ್ 102.65 ಪಾಯಿಂಟ್‌ಗಳ ಏರಿಕೆ ಕಂಡು 43,953.70ಕ್ಕೆ ಮತ್ತು ನಿಫ್ಟಿ ಮಿಡ್‌ಕ್ಯಾಪ್ 100 ಸುಮಾರು 185 ಪಾಯಿಂಟ್‌ಗಳ ಜಿಗಿದು 38001.30ಕ್ಕೆ ತಲುಪಿದೆ. ಸೆನ್ಸೆಕ್ಸ್‌ನಲ್ಲಿ ಪವರ್ ಗ್ರಿಡ್ ಕಾರ್ಪ್, ಎನ್‌ಟಿಪಿಸಿ, ಬಜಾಜ್ ಫೈನಾನ್ಸ್ ಮತ್ತು ಟಾಟಾ ಮೋಟಾರ್ಸ್ ಷೇರುಗಳು ಟಾಪ್ ಗೇನರ್‌ಗಳಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್, ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್, ಲಾರ್ಸೆನ್ & ಟೂಬ್ರೊ ಲಿಮಿಟೆಡ್ ಷೇರುಗಳು ನಷ್ಟವನ್ನು ಕಂಡಿದೆ.


Click it and Unblock the Notifications