ಟೆಲಿಕಾಂ ಕಂಪನಿಗಳು (Telecom Company) ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ, ಹೊಸ ಹೊಸ ರೀಚಾರ್ಜ್ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಅದೇ ಕಾರಣದಿಂದ ಹೆಚ್ಚಿನವರು ಸಿಮ್ ಪೋರ್ಟ್ ಮಾಡುತ್ತಲೇ ಇರುತ್ತಾರೆ. ಅದೇ ರೀತಿಯ ರೀಚಾರ್ಜ್ ಆಫರ್‌ಗಳನ್ನು (Recharge Offers) ಲಾಂಚ್ ಮಾಡಿಕೊಂಡು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಜಿಯೋ ಟೆಲಿಕಾಂ ಕಂಪನಿ ಇಂದು ದೈತ್ಯ ಮಾರುಕಟ್ಟೆಯಾಗಿ ಬೆಳೆದಿದೆ. ಕೋಟಿಗಟ್ಟಲೆ ಗ್ರಾಹಕರನ್ನು ಹೊಂದಿರುವ ಜಿಯೋ (Jio) ಇದೀಗ ಕರ್ನಾಟಕದಲ್ಲಿ ನಂಬರ್ 1 ಎಂದು ಗುರುತಿಸಿಕೊಂಡಿದೆ.

ಕರ್ನಾಟಕದಲ್ಲಿ ಲಕ್ಷಗಟ್ಟಲೆ ಹೊಸ ಗ್ರಾಹಕರು ಜಿಯೋಗೆ ಸೇರ್ಪಡೆ!
ದೇಶದಲ್ಲೇ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಕಂಪನಿಯೆಂದು ಗುರುತಿಸಿಕೊಂಡಿದ್ದ ಜಿಯೋ, ಇದೀಗ ಕರ್ನಾಟಕದಲ್ಲೂ ಅಗ್ರಸ್ಥಾನ ಪಡೆದುಕೊಂಡಿದೆ. ಈ ಮೂಲಕ ವೈರ್ ಲೆಸ್ ಮತ್ತು ವೈರ್ ಲೈನ್ ಗಳೆರಡರಲ್ಲೂ ತನ್ನ ಪ್ರಾಬಲ್ಯವನ್ನು ಜಿಯೋ ಸಾಧಿಸಿದೆ. ಟ್ರಾಯ್ (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಪ್ರಕಾರ, ಕರ್ನಾಟಕದಲ್ಲಿ 2.95 ಲಕ್ಷ ಮೊಬೈಲ್ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ, 2025ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಜಿಯೋದ ಒಟ್ಟು ಬಳಕೆದಾರರ ಸಂಖ್ಯೆ ರಾಜ್ಯದಲ್ಲಿ 2.56 ಕೋಟಿಗೆ ತಲುಪಿದೆ.
ಇನ್ನು ಕರ್ನಾಟಕದಲ್ಲೇ ಜಿಯೋ ಏರ್‌ಫೈಬರ್ ಚಂದಾದಾರರ ಸಂಖ್ಯೆ 2025ರ ಸೆಪ್ಟೆಂಬರ್ ತಿಂಗಳಲ್ಲಿ 3,74,894ಕ್ಕೆ ಏರಿತು, ಆಗಸ್ಟ್‌ನಲ್ಲಿ ಈ ಸಂಖ್ಯೆ 3,63,327 ರಷ್ಟಿತ್ತು. ಇನ್ನು ಜಿಯೋಗೆ ಹೋಲಿಸಿದ್ರೆ ಇದರ ಪ್ರತಿಸ್ಪರ್ಧಿ ಎನಿಸಿದ ಭಾರ್ತಿ ಏರ್‌ಟೆಲ್ ಕೇವಲ 2,04,945 ಚಂದಾದಾರರನ್ನು ನೋಂದಾಯಿಸಿದೆ.
ಟ್ರಾಯ್ ಪ್ರಕಾರ, ಸೆಪ್ಟೆಂಬರ್ ಅಂತ್ಯದವರೆಗೆ ಜಿಯೋ ಸುಮಾರು 50 ಕೋಟಿಯ 54 ಲಕ್ಷ ಗ್ರಾಹಕರು ಮತ್ತು ಶೇ 50.77ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು ಮುಂಚೂಣಿಯಲ್ಲಿದೆ. ಏರ್‌ಟೆಲ್ ಸುಮಾರು 30.14 ಕೋಟಿ ಮತ್ತು ವೊಡಾಫೋನ್-ಐಡಿಯಾ ಸುಮಾರು 12 ಕೋಟಿ 78 ಲಕ್ಷ ಗ್ರಾಹಕರನ್ನು ಹೊಂದಿದೆ ಎಂದು ವರದಿಯಾಗಿದೆ.
ಏರ್‌ಟೆಲ್ ಶೇ 31.18 ಮತ್ತು ವೊಡಾ-ಐಡಿಯಾ ಶೇ 12.83ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಸರ್ಕಾರಿ ಕಂಪನಿ ಬಿಎಸ್ಎನ್ಎಲ್ ಶೇ 3.49ರಷ್ಟು ಮಾತ್ರ ಮಾರುಕಟ್ಟೆ ಹೊಂದಿದೆ.
ಸ್ಥಿರ ಬ್ರಾಡ್‌ಬ್ಯಾಂಡ್ ವಲಯದಲ್ಲಿಯೂ ಜಿಯೋ ಪ್ರಾಬಲ್ಯ ಪಡೆದುಕೊಂಡಿದ್ದು, 2025ರ ಸೆಪ್ಟೆಂಬರ್ ನಲ್ಲಿ ಒಟ್ಟು 3.22 ಲಕ್ಷ ಹೊಸ ಬ್ರಾಡ್‌ಬ್ಯಾಂಡ್ ಗ್ರಾಹಕರು ಜಿಯೋ ವೈರ್‌ಲೆಸ್ ಸಂಪರ್ಕ (FWA) ಪಡೆದಿದ್ದಾರೆ ಎಂದು ವರದಿಯಾಗಿದೆ.
ಜಿಯೋ ವಿಶೇಷ ರೀಚಾರ್ಜ್ ಯೋಜನೆಗಳಿಂದಾಗಿ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತದೆ. ಆರಂಭದಲ್ಲಿ ಫ್ರೀ ರೀಚಾರ್ಜ್ ಮೂಲಕ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಜಿಯೋ, ತನ್ನ ಇಂಟರ್ನೆಟ್ ಸೌಲಭ್ಯದ ಮೂಲಕ ಭಾರೀ ಜನಮನ್ನಣೆಯನ್ನು ಪಡೆದುಕೊಂಡಿತ್ತು. ಇನ್ನು ಇತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದ್ರೆ ಜಿಯೋ ರೀಚಾರ್ಜ್ ದರ ಕೂಡಾ ಸ್ವಲ್ಪ ಕಡಿಮೆ. ಇನ್ನು ನೆಟ್‌ವರ್ಕ್ ಮಾದರಿಯಲ್ಲೂ ಈಗಾಗಲೇ ದೇಶದ ಮೂಲೆ ಮೂಲೆಗಳಲ್ಲಿ ತನ್ನ 5ಜಿ ಸೇವೆಯನ್ನು ಜಿಯೋ ವಿಸ್ತರಿಸಿದೆ. ಇದೇ ಕಾರಣದಿಂದ ಇದೀಗ ಜಿಯೋ ಕಂಪನಿ ಮತ್ತೆ ಮುಂಚೂಣಿ ಸಾಧಿಸಿದೆ.


Click it and Unblock the Notifications