ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಸರ್ಕಾರ ಎಂದೇ ಗದ್ದುಗೆ ಏರಿತು. ವಿಧಾನಸಭೆ ಚುನಾವಣೆಗೂ ಮುನ್ನ ನೀಡಿದ ಪಂಚ ಗ್ಯಾರಂಟಿ ಭರವಸೆ ಕಾಂಗ್ರೆಸ್ ಕೈ ಹಿಡಿಯಿತು ಎಂದರೆ ತಪ್ಪಾಗಲ್ಲ. 2023ರ ಚುನಾವಣೆ ಕರ್ನಾಟಕದಲ್ಲಿ ಹೊಸ ಇತಿಹಾಸ ಬರೆಯಿತು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್, ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ, ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ ಹಣ ನೀಡುವುದು ಹಾಗೂ ಯುವನಿಧಿ ಯೋಜನೆಯಡಿ ಯುವ ನಿರುದ್ಯೋಗಿಗಳಿಗೆ ಉಚಿತವಾಗಿ ಮಾಸಿಕ 3,000 ನೀಡುವುದು. ಈ 5 ಗ್ಯಾರಂಟಿಗಳು ಕಾಂಗ್ರೆಸ್ ಪಾಲಿಗೆ ಕಣ್ಣುಗಳಾದವು. ಈಗ 10ನೇ ಗ್ಯಾರಂಟಿ ನೀಡಲು ಮುಂದಾಗಿದೆ ಕಾಂಗ್ರೆಸ್ ಸರ್ಕಾರ.

ಹೌದು, ಗ್ಯಾರಂಟಿಯಿಂದಲೇ ಫೇಮಸ್ ಆದ ಕಾಂಗ್ರೆಸ್ ಸರ್ಕಾರ 10 ಗ್ಯಾರಂಟಿವರೆಗೂ ಯೋಜನೆಗಳನ್ನ ಘೋಷಣೆ ಮಾಡಿದೆ. ಅವುಗಳಲ್ಲಿ ಈಗಾಗಲೇ 6ನೇ ಗ್ಯಾರಂಟಿ ಭೂಮಿ ನೀಡುವುದು. 7ನೇ ಗ್ಯಾರಂಟಿ ನೀರು, 8ನೇ ಗ್ಯಾರಂಟಿಯಡಿ ಮನೆಗಳನ್ನ ವಿತರಿಸೋದು, 9ನೇ ಗ್ಯಾರಂಟಿಯಡಿ ಇ-ಖಾತಾ ವಿತರಿಸುವುದಾಗಿದೆ. ಹಾಗಾದರೆ 10ನೇ ಗ್ಯಾರಂಟಿ ಯಾವುದು?
ಇನ್ನು ಆರೋಗ್ಯವೇ ಭಾಗ್ಯ ಎಂದು ಕಾಂಗ್ರೆಸ್ ಪಕ್ಷ ತನ್ನ 10ನೇ ಗ್ಯಾರಂಟಿಯನ್ನು, ಆರೋಗ್ಯ ಸೇವೆಗೆ ಮೀಸಲಿಟ್ಟಿದೆ. ಅಂದರೆ ಜನರಿಗೆ ಉಚಿತವಾಗಿ ಆರೋಗ್ಯ ನೀಡುವ ಸಂಕಲ್ಪದಲ್ಲಿ ಈ ಹೊಸ ಗ್ಯಾರಂಟಿಯನ್ನ ಘೋಷಣೆ ಮಾಡಿದೆ. ಇದು ಕೂಡ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಈ ಹೊಸ ಗ್ಯಾರಂಟಿ ಬಗ್ಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಾತನಾಡಿದ್ದಾರೆ. ಗಂಗಾವತಿಯಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಹಾಗೂ ಕಾರವಾರ ವೈದ್ಯಕೀಯ ವಿಜ್ನಾನಗಳ ಸಂಸ್ಥೆ ಆವರಣದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಿದ್ದು, ಇದರ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುವಾಗ ಈ 10ನೇ ಗ್ಯಾರಂಟಿ ಬಗ್ಗೆ ಘೋಷಣೆ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ರಾಜ್ಯದ ಜನರೆಲ್ಲರೂ ನಮಗೆ ಶಕ್ತಿ ನೀಡಿದ್ದಾರೆ. ಹೀಗಾಗಿ ಆ ಋಣ ತೀರಿಸಲೆಂದೇ ನಾವು ಬಂದಿದ್ದೇವೆ. ಇದು ಕೇವಲ ಕಟ್ಟಡ ನಿರ್ಮಾಣದ ವಿಚಾರ ಮಾತ್ರವಲ್ಲ. ಜನರಿಗೆ ನಮ್ಮ ಮೇಲಿರುವ ನಂಬಿಕೆ ಕೂಡ ಗಟ್ಟಿಯಾಗಬೇಕು. ನಾವು ಮಾಡುವ ಕೆಲಸ ನಮ್ಮ ಸಾಕ್ಷಿಯಾಗಬೇಕು ಎಂದಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿಗಳು ಮನೆ ಮಾತಾಗಿವೆ. ಈ ಯೋಜನೆಗಳು ರಾಜ್ಯದ ಎಷ್ಟೋ ಜನರಿಗೆ ಜೀವಾಳವಾಗಿವೆ. ಇದರ ಜೊತೆಗೆ ಆರೋಗ್ಯ ಕೂಡ ಮುಖ್ಯವೆಂದು ಭಾವಿಸಿ, ರಾಜ್ಯ ಸರ್ಕಾರ ಈ ಘೋಷಣೆ ಮಾಡಿದೆ.


Click it and Unblock the Notifications