ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಒಟ್ಟಾಗಿ ನಾಲ್ಕು ವಿಮಾನ ನಿಲ್ದಾಣಗಳ ಹೆಸರನ್ನು ಬದಲಾಯಿಸುವ ನಿರ್ಣಯವನ್ನು ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ನಾಲ್ಕು ವಿಮಾನ ನಿಲ್ದಾಣಗಳಿಗೆ ಪ್ರಮುಖ ವ್ಯಕ್ತಿಗಳ ಹೆಸರಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ನಿರ್ಣಯ ಇದಾಗಿದೆ. ಈ ನಿರ್ಣಯ ಸರ್ವಾನುಮತದಿಂದ ಅಂಗೀಕಾರವಾಗಿದೆ.
ಈ ಹಿಂದೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಬೇಕು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸಂಸತ್ತಿನಲ್ಲಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಹಾಗೆಯೇ ಒಟ್ಟಾಗಿ ನಾಲ್ಕು ವಿಮಾನ ನಿಲ್ದಾಣಗಳ ಮರುನಾಮಕರಣದ ಆಗ್ರಹ ಕೇಳಿಬಂದಿತ್ತು. ಈಗ ಹೊಸ ಹೆಸರೇನು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಹೊಸ ಹೆಸರೇನು?
ನಿರ್ಣಯದ ಪ್ರಕಾರ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಡಾ.ಕೆ.ವಿ.ಪುಟ್ಟಪ್ಪ (ಕುವೆಂಪು) ಹಾಗೂ ವಿಜಯಪುರ ವಿಮಾನ ನಿಲ್ದಾಣಕ್ಕೆ ಶ್ರೀ ಜಗದ್ಜ್ಯೋತಿ ಬಸವೇಶ್ವರ ಹೆಸರಿಡಲಾಗುವುದು.
ನಿರ್ಣಯವನ್ನು ಪ್ರಾಯೋಗಿಕವಾಗಿ ನಡೆಸಿದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ವಿಮಾನ ನಿಲ್ದಾಣಗಳಿಗೆ ಹೊಸ ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು. ಈ ವೇಳೆಯೇ ಇತರೆ ವಿಮಾನ ನಿಲ್ದಾಣಗಳ ಹೆಸರು ಬದಲಾವವಣೆ ಪ್ರಸ್ತಾಪ ಮುಂದೆ ಬಂದಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚನ್ನಯ್ಯ ಹೆಸರಿಡುವ ಪ್ರಸ್ತಾವನೆಯನ್ನು ಸರ್ಕಾರ ಸೇರಿಸಬೇಕು ಎಂದು ಬಿಜೆಪಿ ಶಾಸಕ ವಿ ಸುನೀಲ್ ಕುಮಾರ್ ಒತ್ತಾಯಿಸಿದರು. ಆದರೆ ಮಂಗಳೂರು ವಿಮಾನ ನಿಲ್ದಾಣಕ್ಕೆ ವೀರರಾಣಿ ಅಬ್ಬಕ್ಕನ ಹೆಸರಿಡಲು ಬೇಡಿಕೆ ಇದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು. ಈ ಬಗ್ಗೆ ನಂತರ ಚರ್ಚಿಸೋಣ ಎಂದು ಖಾದರ್ ಹೇಳಿದರು.
ಅತ್ಯಂತ ಲಾಭದಾಯಕ ವಿಮಾನ ನಿಲ್ದಾಣ
ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ವಿಮಾನ ನಿಲ್ದಾಣಗಳಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅತ್ಯಂತ ಲಾಭದಾಯಕ ವಿಮಾನ ನಿಲ್ದಾಣವಾಗಿದೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಜನರಲ್ ವಿಕೆ ಸಿಂಗ್ (ನಿವೃತ್ತ) ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
2022-23ರಲ್ಲಿ ಕೆಐಎಎಲ್ 528 ಕೋಟಿ ಲಾಭ ಗಳಿಸಿದೆ ಎಂದು ಸಚಿವರು ಹೇಳಿದರು. ಅಂತರಾಷ್ಟ್ರೀಯ ವಿಮಾನಗಳ ಹಾರಾಟ ನಡೆಸಿದ ಮಂಗಳೂರು ವಿಮಾನ ನಿಲ್ದಾಣಕ್ಕೆ 125.98 ಕೋಟಿ ರೂಪಾಯಿ ನಷ್ಟವಾಗಿದೆ. 2022-23ರಲ್ಲಿ ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಕಲಬುರಗಿ ಒಟ್ಟಾರೆಯಾಗಿ 185.17 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ ಎಂದು ಸಿಂಗ್ ಹೇಳಿದರು.


Click it and Unblock the Notifications