ಮುಂಬೈ, ನ. 2: ಷೇರುಪೇಟೆಯಲ್ಲಿ ಕರ್ನಾಟಕ ಬ್ಯಾಂಕ್ ಗಮನಾರ್ಹ ಪ್ರಗತಿ ಸಾಧಿಸಿದೆ. ಬುಧವಾರದ ವಹಿವಾಟಿನಲ್ಲಿ ಕರ್ನಾಟಕ ಬ್ಯಾಂಕ್‌ನ ಷೇರು ಶೇ. 19ರಷ್ಟು ಹೆಚ್ಚು ಬೆಲೆಗೆ ಬಿಕರಿಯಾಗುತ್ತಿದೆ. ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಕರ್ನಾಟಕ ಬ್ಯಾಂಕ್ ಗಳಿಸಿದ ಭರ್ಜರಿ ಲಾಭದ ಪರಿಣಾಮ ಇದು. ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಕರ್ನಾಟಕ ಬ್ಯಾಂಕ್ ಷೇರು ಬೆಲೆ 111.70 ರೂಪಾಯಿಗೆ ಹೆಚ್ಚಾಗಿದೆ. ಇದು ಈ ಬ್ಯಾಂಕ್‌ನ ಇತಿಹಾಸದಲ್ಲೇ ಷೇರುಮಾರುಕಟ್ಟೆಯಲ್ಲಿ ಕಂಡ ಅತಿ ಹೆಚ್ಚು ಬೆಲೆ ಎನ್ನಲಾಗಿದೆ.
ಜುಲೈನಿಂದ ಸೆಪ್ಟೆಂಬರ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಕರ್ನಾಟಕ ಬ್ಯಾಂಕ್ 411.47 ಕೋಟಿ ರೂ ನಿವ್ವಳ ಲಾಭ ಮಾಡಿಕೊಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕು 125.45 ಕೋಟಿ ನಿವ್ವಳ ಲಾಭ ಮಾಡಿಕೊಂಡಿತ್ತು. ಅದಕ್ಕೆ ಹೋಲಿಸಿದರೆ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಈ ಬಾರಿ ಶೇ. 228ರಷ್ಟು ಹೆಚ್ಚಳ ಕಂಡಿದೆ.
ಗುಣಮಟ್ಟದ ಸಾಲ, ಬ್ಯಾಂಕ್ ಮುಂಗಡ ಪ್ರಮಾಣದಲ್ಲಿ ಹೆಚ್ಚಳ, ವೆಚ್ಚ ಇಳಿಕೆ, ಕಾರ್ಯಕ್ಷಮತೆ ಹೆಚ್ಚಿಸಲು ಕ್ರಮ ಇವೆಲ್ಲಾ ಕೆಲ ಕಾರಣಗಳಿಂದ ಕರ್ನಾಟಕ ಬ್ಯಾಂಕ್ ಈ ತ್ರೈಮಾಸಿಕದಲ್ಲಿ ಉತ್ತಮ ಬೆಳವಣಿಗೆ ಕಂಡಿರುವುದು ತಿಳಿದುಬಂದಿದೆ.
ಬ್ಯಾಂಕ್ ಲಾಭಕ್ಕೆ ಕಾರಣ
"2022-23ರ ಹಣಕಾಸು ವರ್ಷದ ಎರಡನೇ ಕ್ವಾರ್ಟರ್‌ನಲ್ಲಿ ಹೊರ ಬಂದಿರುವ ಫಲಿತಾಂಶಗಳು ಬ್ಯಾಂಕ್‌ನ ಹೊಸ ಉತ್ಸಾಹದ ಫಲ. ನಮ್ಮ ಶಿಸ್ತುಬದ್ಧ ಕ್ರಮಗಳು ಮತ್ತು ಅಗ್ರೆಸಿವ್ ಆಗಿ ಡಿಜಿಟಲೀಕರಣ ಮಾಡಿದ್ದು ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಬದ್ಧತೆ ಇವು ಕರ್ನಾಟಕ ಬ್ಯಾಂಕ್‌ಗೆ ಮೌಲ್ಯವೃದ್ಧಿ ಮಾಡಿ ಆ ಮೂಲಕ ಲಾಭದಾಯಕ ಪ್ರಗತಿಗೆ ಕಾರಣವಾಗಿದೆ" ಎಂದು ಕರ್ನಾಟಕ ಬ್ಯಾಂಕ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಮಹಾಬಲೇಶ್ವರ ಎಂಎಸ್ ಹೇಳಿದ್ದಾರೆ.
ಲಾಭಾಂಶ ನೋಟ
ಕರ್ನಾಟಕ ಬ್ಯಾಂಕ್‌ನ ನಿವ್ವಳ ಬಡ್ಡಿ ಆದಾಯ (ಎನ್‌ಐಐ- ನೆಟ್ ಇಂಟರೆಸ್ಟ್ ಇನ್ಕಂ) ಕೂಡ ಈ ಕ್ವಾರ್ಟರ್‌ನಲ್ಲಿ ಸೇ. 26ರಷ್ಟು ಹೆಚ್ಚಾಗಿದೆ. 2021ರಲ್ಲಿ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ 637.10 ಕೋಟಿ ರೂ ನಿವ್ವಳ ಬಡ್ಡಿ ಆದಾಯ ಕಂಡಿದ್ದ ಬ್ಯಾಂಕು ಈ ವರ್ಷದ ಇದೇ ಅವಧಿಯಲ್ಲಿ 802.73 ಕೋಟಿ ರೂ ಗಳಿಸಿದೆ. ನೆಟ್ ಇಂಟರೆಸ್ಟ್ ಮಾರ್ಜಿನ್ ಕೂಡ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 3.15ರಿಂದ ಶೇ. 3.56ಕ್ಕೆ ಉತ್ತಮಗೊಂಡಿದೆ.
ಕರ್ನಾಟಕ ಬ್ಯಾಂಕ್‌ನ ಅಸೆಟ್ ಕ್ವಾಲಿಟಿ ಕೂಡ ಉತ್ತಮಗೊಂಡಿದೆ. ಅಸೆಟ್ ಕ್ವಾಲಿಟಿ ಎಂದರೆ ಗುಣಮಟ್ಟದ ಸಾಲ ಎನ್ನಬಹುದು. ಏಪ್ರಿಲ್‌ನಿಂದ ಜೂನ್‌ವರೆಗಿನ ಕ್ವಾರ್ಟರ್‌ನಲ್ಲಿ ಕರ್ನಾಟಕ ಬ್ಯಾಂಕ್‌ನ ಗ್ರಾಸ್ ಎನ್‌ಪಿಎ (ಕೆಟ್ಟ ಸಾಲ) ಶೇ. 4.03 ಇತ್ತು. ಈ ತ್ರೈಮಾಸಿಕದಲ್ಲಿ ಅದು ಶೇ. 3.36ಕ್ಕೆ ಇಳಿದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ. 4.52ರಷ್ಟಿದ್ದ ಜಿಎನ್‌ಪಿಎ ಪ್ರಮಾಣಕ್ಕೆ ಹೋಲಿಸಿದರೆ ಈ ಬಾರಿ ಬಹಳಷ್ಟು ಉತ್ತಮ ಸ್ಥಿತಿ ಇದೆ. ನಿವ್ವಳ ಎನ್‌ಪಿಎಗಳೂ ಶೇ.. 2.16ರಿಂದ ಶೇ. 1.72ಕ್ಕೆ ಇಳಿದಿದೆ. 2021ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿವ್ವಳ ಎನ್‌ಪಿಎ ಶೇ. 2.85 ಇತ್ತು.
ಏನಿದು ಗ್ರಾಸ್ ಎನ್‌ಪಿಎ, ನಿವ್ವಳ ಎನ್‌ಪಿಎ?
ಗ್ರಾಸ್ ಎನ್‌ಪಿಎ ಎಂದರೆ ಒಟ್ಟಾರೆ ವಸೂಲಾಗದೇ ಉಳಿದಿರುವ ಕೆಟ್ಟ ಸಾಲ. ಸಾಲದ ಕಂತುಗಳನ್ನು 90 ದಿನಗಳಿಗಿಂತ ಹೆಚ್ಚು ಅವಧಿ ಬಾಕಿ ಉಳಿಸಿಕೊಂಡಿರುವ ಸಾಲವನ್ನೂ ಎನ್‌ಪಿಎ ಗುಂಪಿಗೇ ಹಾಕಲಾಗುತ್ತದೆ. ವಸೂಲಾತಿ ಆಗುವ ಸಾಧ್ಯತೆ ಇದ್ದರೂ ಇವು ಗ್ರಾಸ್ ಎನ್‌ಪಿಎ ಪಟ್ಟಿ ಸೇರುತ್ತವೆ.
ಆದರೆ ನೆಟ್ ಎನ್‌ಪಿಎ (ನಿವ್ವಳ ಎನ್‌ಪಿಎ) ಎಂದರೆ ವಸೂಲಾಗುವ ಲಕ್ಷಣ ಅಥವಾ ಭರವಸೆ ಇಲ್ಲದಿರುವ ಕೆಟ್ಟ ಸಾಲ ಎನ್ನಬಹುದು. ಇದು ಸರಿಯಾದ ಅಡಮಾನ ಪಡೆಯದೇ ನೀಡಿರುವ ಸಾಲಗಳೇ ಹೆಚ್ಚು. ಈ ನೆಟ್ ಎನ್‌ಪಿಎ ಬ್ಯಾಂಕ್ ಪಾಲಿಗೆ ನಷ್ಟ ಕೊಡುವ ಕೆಟ್ಟ ಆಸ್ತಿಗಳು. ಈ ನೆಟ್ ಎನ್‌ಪಿಎ ಮೊತ್ತ ಹೆಚ್ಚಿದಷ್ಟೂ ಬ್ಯಾಂಕ್ ನಷ್ಟ ಹೆಚ್ಚುತ್ತದೆ.
ಠೇವಣಿ ಸಂಗ್ರಹ ಹೆಚ್ಚಳ
ಇನ್ನು, ಕರ್ನಾಟಕ ಬ್ಯಾಂಕ್ ಸಲ್ಲಿಸಿರುವ ತನ್ನ ಲಾಭಾಂಶಗಳ ವರದಿಯಲ್ಲಿ ಠೇವಣಿ ಸಂಗ್ರಹ ಹೆಚ್ಚಿರುವುದು ಗಮನ ಸೆಳೆದಿದೆ. ಕಳೆದ ವರ್ಷದ ಎರಡನೇ ತ್ರೈಮಾಸಿಕದಲ್ಲಿ 76,921.53 ಕೋಟಿ ರೂ ಇದ್ದ ಠೇವಣಿ ಸಂಗ್ರಹ ಈ ಬಾರಿ 81,633.40 ಕೋಟಿಗೆ ಹೆಚ್ಚಾಗಿದೆ. ಅಡ್ವಾನ್ಸ್‌ಗಳೂ ಕೂಡ 54,341.57 ಕೋಟಿ ಯಿಂದ 59,872.47 ಕೋಟಿ ರೂಪಾಯಿಗೆ ಹೆಚ್ಚಿದೆ. ಬ್ಯಾಂಕ್‌ನ ಕ್ರೆಡಿಟ್-ಡೆಪಾಸಿಟ್ ರೇಷಿಯೋ ಶೇ.. 73.34ರಷ್ಟಿದೆ. ಜೊತೆಗೆ ಕರ್ನಾಟಕ ಬ್ಯಾಂಕ್ ಉತ್ತಮ ಸಿಎಆರ್ ಅನ್ನೂ ಹೊಂದಿದೆ. ಸಿಎಆರ್ ಎಂದರೆ ಕ್ಯಾಷ್ ಅಡಿಕ್ವಸಿ ರೇಷಿಯೋ ಅಥವಾ ಸಾಲ ನೀಡುವ ಸಾಮರ್ಥ್ಯ. ಸಿಎಆರ್ ಶೇ. 14.48ರಿಂದ ಶೇ. 15.28ಕ್ಕೆ ಏರಿದೆ.


Click it and Unblock the Notifications