ಮದ್ಯಪ್ರಿಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಹೊರತು ಕಡಿಮೆಯಾಗುವುದಿಲ್ಲ. ಹೀಗಾಗಿಯೇ ತೆರಿಗೆ ಸಂಗ್ರಹ ಮಾಡಲು ಸರ್ಕಾರದ ಮೊದಲ ಟಾರ್ಗೆಟ್ ಮದ್ಯವೇ ಆಗಿರುತ್ತದೆ. ತೆರಿಗೆ ಹೆಚ್ಚಿಸಿ ಬೆಲೆ ಜಾಸ್ತಿ ಮಾಡಿದರೆ ಹೆಚ್ಚೇನು ವ್ಯತ್ಯಾಸವಾಗುವುದಿಲ್ಲ. ಬೆಲೆ ಎಷ್ಟೇ ಹೆಚ್ಚಾದರೂ ಮದ್ಯಪ್ರಿಯರು ಕೊಳ್ಳುವ ನೀತಿಯಿಂದ ಹಿಂಜರಿಯುವುದಿಲ್ಲ ಎಂಬುದು ಸರ್ಕಾರದ ನಿರೀಕ್ಷೆ. ಆದರೆ ಕರ್ನಾಟಕ ಸರ್ಕಾರದ ಈ ನಿರೀಕ್ಷೆ ಈ ಬಾರಿ ದೊಡ್ಡ ಮಟ್ಟದಲ್ಲೇ ಹುಸಿಯಾಗಿದೆ. ಏಕೆಂದರೆ ಬಿಯರ್ ಮೇಲೆ ಹೆಚ್ಚಿದ ತೆರಿಗೆಗಳಿಂದ, ಬಿಯರ್ ಉದ್ಯಮದ ಬೆಳವಣಿಗೆ ಕುಸಿದಿದ್ದಲ್ಲದೇ ಸರ್ಕಾರದ ತೆರಿಗೆ ಗುರಿಯೂ ಕುಂಠಿತವಾಗಿದೆ.

ಹೌದು, ಕರ್ನಾಟಕದಲ್ಲಿ ಬಿಯರ್ ಬೆಲೆ ಹೆಚ್ಚಾಗಿದೆ. ಕಾರಣ ಹೆಚ್ಚು ಜನ ಬಿಯರ್ ಸೇವಿಸುವುದದಿಂದ, ಸರ್ಕಾರವು ಬಿಯರ್ ಮೇಲೆ ಹೆಚ್ಚು ತೆರಿಗೆಯನ್ನ ವಿಧಿಸಿತ್ತು. ಆದರೆ, ಇದೀಗ ಈ ಬೆಲೆ ಏರಿಕೆ ಬಿಯರ್ ಉದ್ಯಮದ ಮೇಲೆ ಹೊಡೆತ ಬಿದ್ದಿದೆ. ಬಿಯರ್ ಉದ್ಯಮದ ಬೆಳವಣಿಗೆಯನ್ನು ತೀವ್ರವಾಗಿ ಕುಂಠಿತಗೊಳಿಸಿವೆ ಎಂದು ಭಾರತೀಯ ಬ್ರೂವರ್‌ಗಳ ಸಂಘ (BAI) ರಾಜ್ಯ ಸರ್ಕಾರದ ಗಮನಕ್ಕೆ ತಂದಿದೆ. BAI ಹೇಳಿರುವ ಪ್ರಕಾರ ತೆರಿಗೆ ದರಗಳಲ್ಲಿ ಆಗಾಗ್ಗೆ ಆಗುತ್ತಿರುವ ಹೆಚ್ಚಳಗಳು ಬಿಯರ್ ಮಾರಾಟದ ಪ್ರಮಾಣವನ್ನು ಕುಗ್ಗಿಸುತ್ತಿದ್ದು, ಉದ್ಯಮದ ಮೇಲೆ ಹೂಡಲಾದ ಸಾವಿರಾರು ಕೋಟಿ ರೂಪಾಯಿಗಳ ಹೂಡಿಕೆಗೆ ಅಪಾಯ ಕೂಡ ಉಂಟುಮಾಡುತ್ತಿದೆ.
ಸರ್ಕಾರಕ್ಕೆ BAI ಮಹಾನಿರ್ದೇಶಕರ ಪತ್ರ:
BAI ಮಹಾನಿರ್ದೇಶಕರಾದ ವಿನೋದ್ ಗಿರಿ ಅವರು, ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಪತ್ರದಲ್ಲಿ ಏನಿದೆ ಅಂದರೆ, ಕಳೆದ 18 ತಿಂಗಳ ಅವಧಿಯಲ್ಲಿ ಕರ್ನಾಟಕ ಸರ್ಕಾರವು ಮೂರು ಬಾರಿ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಅಂದರೆ 2023ರ ಜುಲೈ, 2024ರ ಫೆಬ್ರವರಿ ಮತ್ತು 2025ರ ಜನವರಿಯಲ್ಲಿ ಅಬಕಾರಿ ಸುಂಕ ಹೆಚ್ಚಾದ ಕಾರಣ, ಬಿಯರ್ ಮಾರಾಟದ ಬೆಳವಣಿಗೆ ನಿಶ್ಚಲ ಸ್ಥಿತಿಗೆ ತಲುಪಿದೆ. ಹೀಗಾಗಿ ಈ ವರ್ಷದ..ಅಂದರೆ 2025ರ ನಂತರ ಮೊದಲ ಬಾರಿಗೆ ಮಾರಾಟದಲ್ಲಿ ನಿಜವಾದ ಇಳಿಕೆಯು ಕಾಣಿಸಿಕೊಂಡಿದೆ ಎಂದು ತಿಳಿಸಿದಿದ್ದಾರೆ.
ಸರ್ಕಾರದ ತೆರಿಗೆ ಸಂಗ್ರಹದ ಗುರಿ ಎಷ್ಟು..?
ರ್ಕಾರದ ಒಟ್ಟು ತೆರಿಗೆ ಸಂಗ್ರಹದ ಗುರಿಯು ತಲುಪದೆ ಉಳಿಯುವ ಸಾಧ್ಯತೆ ಹೆಚ್ಚಾಗಿದೆ. ಹಿಂದಿನ ಲೆಕ್ಕಾಚಾರದ ಪ್ರಕಾರ, ಕರ್ನಾಟಕ ಸರ್ಕಾರವು 2023-24ನೇ ಹಣಕಾಸು ವರ್ಷದಲ್ಲಿ ಮದ್ಯ ಮಾರಾಟದಿಂದ ಸರಾಸರಿ ₹38,525 ಕೋಟಿ ತೆರಿಗೆ ಆದಾಯ ಗಳಿಸಬೇಕೆಂಬ ಗುರಿ ಹೊಂದಿತ್ತು. ಆದರೆ ಅಂತಿಮವಾಗಿ ಸಂಗ್ರಹವಾದ ಮೊತ್ತವು ₹35,530 ಕೋಟಿ ಆಗಿದ್ದು, ಇದು ಗುರಿಯ ಕೇವಲ 92.3% ಮಾತ್ರ. ಇದು ಹಿಂದಿನ ವರ್ಷಕ್ಕಿಂತ ₹901 ಕೋಟಿ ಹೆಚ್ಚು ಆದಾಯವಾಗಿದ್ದರೂ ಸಹ, ಗುರಿಯಿಂದ ₹3,000 ಕೋಟಿ ಕಡಿಮೆಯಾಗಿದೆ.
ಅದರಲ್ಲಿ ಬಿಯರ್ ಉದ್ಯಮವೊಂದೇ ಸುಮಾರು ₹5,500 ಕೋಟಿ ತೆರಿಗೆ ನೀಡಿದರೂ, ಬರುವ ವರ್ಷದಲ್ಲಿ ಬಿಯರ್ ಮಾರಾಟ ಕುಸಿತಗೊಂಡಿರುವ ಹಿನ್ನಲೆಯಲ್ಲಿ ಈ ಮೊತ್ತ ಇಳಿಯುವ ಸಾಧ್ಯತೆಯಿದೆ. ಇದರಿಂದಾಗಿ ಉಳಿದ ಮದ್ಯ ಉತ್ಪನ್ನಗಳಿಂದ ತೆರಿಗೆ ಗುರಿಯನ್ನು ಪೂರೈಸಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಉಂಟಾಗುತ್ತದೆ. ಆದರೆ ಬಿಯರ್‌ಗೆ ಹೋಲಿಸಿದರೆ ಇತರ ಮದ್ಯಪಾನೀಯಗಳು ಕಡಿಮೆ ತೆರಿಗೆ ಶೇಕರಿಸುವ ಸಾಮರ್ಥ್ಯ ಹೊಂದಿವೆ.
ಬಿಯರ್ ವಿತರಣೆಯು ಕೇವಲ 8 ಶೇಕಡಾದಷ್ಟಿದ್ದರೂ ಅದರಿಂದ 16 ಶೇಕಡಾ ತೆರಿಗೆ ಲಭಿಸುತ್ತಿದೆ ಎಂಬ ಅಂಕಿಅಂಶವೇ ಇದಕ್ಕೆ ಸಾಕ್ಷಿಯಾಗಿದೆ. ಈ ಅಸಮಾನತೆಯ ಹಿನ್ನಲೆಯಲ್ಲಿ ಬೇರೆಯ ಮದ್ಯದ ಮಾರಾಟದಿಂದ ಬರುವ ತೆರಿಗೆ ಸರ್ಕಾರದ ಗುರಿಯನ್ನು ಪೂರೈಸಲು ಸಾಕಾಗದೇ ಹೋಗಬಹುದು. ಅಂತೆಯೇ, ಗ್ರಾಹಕರು ಅಗ್ಗದ ಮತ್ತು ಕಡಿಮೆ ಗುಣಮಟ್ಟದ ಆಯ್ಕೆಗಳತ್ತ ಮುಖಮಾಡುವ ಕಾರಣದಿಂದಾಗಿ ಸರ್ಕಾರದ ನಿಕಟ ಭವಿಷ್ಯದ ತೆರಿಗೆ ಆದಾಯದ ನಿರೀಕ್ಷೆಗೂ ಅಡ್ಡಿಯಾಗಬಹುದು.
ಬಿಯರ್ ಮೇಲೆ ಹೆಚ್ಚಾದ ಬೆಲೆ:
BAI ಮಾಹಿತಿ ಪ್ರಕಾರ ಕಳೆದ ವರ್ಷ(2024) ಫೆಬ್ರವರಿಯಲ್ಲಿ ಬಿಯರ್ ಮೇಲಿನ ಅಬಕಾರಿ ಸುಂಕವನ್ನು 185% ನಿಂದ 195%ಗೆ ಹೆಚ್ಚಿಸಲಾಗಿತ್ತು. ಬಳಿಕ ಈ ವರ್ಷದ(2025) ಜನವರಿಯಲ್ಲಿ ಪ್ರತಿ ಲೀಟರ್ ಬಿಯರ್ ಮೇಲೆ 10 ರೂ. ಅಥವಾ ಪ್ರತಿ ಕೇಸ್ ಬಿಯರ್ ಮೇಲೆ ಒಟ್ಟು 78 ಹೆಚ್ಚಳವಾಗಿದೆ.
ಇನ್ನು BAI ನಮ್ಮ ದೇಶದ ಅತಿದೊಡ್ಡ ಬಿಯರ್ ತಯಾರಕರನ್ನು ಪ್ರತಿನಿಧಿಸುತ್ತದೆ. ಈ ಸಂಘಟನೆಯಲ್ಲಿ ಪ್ರಮುಖವಾಗಿ ಯುನೈಟೆಡ್ ಬ್ರೂವರೀಸ್, ಎಬಿ ಇನ್‌ಬೆವ್ ಮತ್ತು ಕಾರ್ಲ್ಸ್‌ಬರ್ಗ್ ಮುಂತಾದ ಕಂಪನಿಗಳನ್ನು ಒಳಗೊಂಡಿದೆ. ಈ ಕಂಪನಿಗಳು ಒಟ್ಟಾಗಿ ಭಾರತದ ಬಿಯರ್ ಮಾರಾಟದ ಸುಮಾರು 85 ಶೇಕಡಾ ಪಾಲನ್ನು ಹೊಂದಿವೆ.
ಗ್ರಾಹಕರ ಆಸಕ್ತಿ ಅಗ್ಗದ ಬೆಲೆಯ ಬಿಯರ್ ಕಡೆಗೆ:
ಈ ತೆರಿಗೆ ಹೆಚ್ಚಳದ ನೀತಿ ಕೇವಲ ಬಿಯರ್ ಮಾರಾಟದ ಮೇಲೆ ಹೊಡೆತ ಬೀಳಿಸಿಲ್ಲ. ಬದಲಾಗಿ ಗ್ರಾಹಕರನ್ನು ಕಡಿಮೆ ಬೆಲೆ ಹಾಗೂ ಕಡಿಮೆ ಗುಣಮಟ್ಟದ ಮದ್ಯ ಆಯ್ಕೆಗಳತ್ತ ತಿರುಗಿಸಲು ಕಾರಣವಾಗಿವೆ. ಇದರ ಪರಿಣಾಮವಾಗಿ ಸರ್ಕಾರದ ತೆರಿಗೆ ಆದಾಯಕ್ಕೂ ನಷ್ಟ ಸಂಭವಿಸುತ್ತಿದೆ.
ಬಿಎಐ ರಾಜ್ಯ ಸರ್ಕಾರವನ್ನು ಮುಂದಿನ ಬಾರಿಯ ಬಜೆಟ್ ಅಥವಾ ನೀತಿಗಳಲ್ಲಿ ಬಿಯರ್ ಮೇಲಿನ ತೆರಿಗೆ ಹೆಚ್ಚಳವನ್ನು ಕೈಜೋಡಿಸದಂತೆ ಕೋರಿದೆ. ಬಿಯರ್ ಮೇಲಿನ ತೆರಿಗೆ ಹೆಚ್ಚಳವು ತಾತ್ಕಾಲಿಕವಾಗಿ ಆದಾಯವನ್ನು ಹೆಚ್ಚಿಸಬಹುದು ಎಂಬ ತಪ್ಪು ಊಹೆಯಿದೆ. ಆದರೆ ಅತಿ ಹೆಚ್ಚು ತೆರಿಗೆ ಹೆಚ್ಚು ದರದ ಬಳಕೆಯನ್ನು ಕಡಿಮೆ ಮಾಡುತ್ತದೆ. ಇದರಿಂದಲ್ಲದೆ, ಸಂಸ್ಥೆಗಳ ಹೂಡಿಕೆದಾರ ಭರವಸೆ ಕುಗ್ಗುತ್ತದೆ ಮತ್ತು ರಾಜ್ಯದ ಉದ್ಯೋಗ ಸೃಷ್ಟಿಗೆ ಇಳಿಕೆಯುಂಟಾಗುತ್ತದೆ, ಎಂಬುದಾಗಿ ಬಿಎಐ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಎಲ್ಲ ಸಂಗತಿಗಳನ್ನು ಪರಿಗಣಿಸಿದರೆ, ಸರ್ಕಾರ ಬಿಯರ್ ಉದ್ಯಮದ ಈ ಗಂಭೀರ ಮನವಿಗೆ ಸ್ಪಂದಿಸಬೇಕಿದೆ. ಬದಲಾವಣೆಯಾದ ಮೌಲ್ಯಮಾಪನದಿಂದ ನೂತನ ತೆರಿಗೆ ನೀತಿಗೆ ಪೂರಕವಾದ ಸಮತೋಲಿತ ಕ್ರಮಗಳನ್ನು ರೂಪಿಸಬೇಕು. ಏಕೆಂದರೆ, ಇದೊಂದು ಬೃಹತ್ ಉದ್ಯಮವಾಗಿದ್ದು, ರಾಜ್ಯದ ಆರ್ಥಿಕತೆಗೆ ಮಹತ್ವಪೂರ್ಣವಾಗಿ ಕೊಡುಗೆ ನೀಡುತ್ತಿದೆ.


Click it and Unblock the Notifications