ರೈತರಿಗೆ- ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್, ತೋಟಗಾರಿಕೆ ಬೆಳೆಗಳ ಪ್ರದೇಶವನ್ನು ವಿಸ್ತರಣೆ ಮಾಡುವ ರೈತರಿಗೆ ವಿವಿಧ ಅನುಕೂಲ, ಮೀನುಗಾರ ಮಹಿಳೆಯರಿಗೆ ವಾಹನ ಒದಗಿಸುವುದು ಸೇರಿದಂತೆ ಈ ಬಾರಿಯ ಕರ್ನಾಟಕ ಬಜೆಟ್ ನಲ್ಲಿ ಕೃಷಿ ಹಾಗೂ ಮೀನುಗಾರಿಕೆ ವಲಯದಲ್ಲಿ ಇರುವವರಿಗೆ ಏನು ಸಿಕ್ಕಿದೆ ಗೊತ್ತೆ?
ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತುಕೊಂಡಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಕೃಷಿ ವಲಯಕ್ಕೆ, ಕೃಷಿಕರಿಗೆ ಏನೇನು ನೀಡಬಹುದು ಎಂಬ ಬಗ್ಗೆ ವಿಪರೀತ ಕುತೂಹಲ ಇತ್ತು. ಅದಕ್ಕೆ ಗುರುವಾರದಂದು ಉತ್ತರ ಸಿಕ್ಕಿದೆ. ಯಡಿಯೂರಪ್ಪ ಕೃಷಿ ಇಲಾಖೆಗೆ ಏನೇನು ನೀಡಿದ್ದಾರೆ ಎಂಬುದರ ಪ್ರಮುಖಾಂಶಗಳು ಇಲ್ಲಿವೆ.
ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್
ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಪ್ರತಿ ವರ್ಷ 10,000 ರುಪಾಯಿಗಳ ವಾರ್ಷಿಕ ಹಣಕಾಸು ನೆರವು ನೀಡುವುದರ ಜೊತೆಗೆ ಎಲ್ಲ ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸಲಾಗುವುದು. ರೈತರು ಅಧಿಕ ಬಡ್ಡಿ ದರದ ಅನೌಪಚಾರಿಕ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಇದರಿಂದ ಅನುಕೂಲವಾಗುವುದು.
ಪ್ರತಿ ಹೆಕ್ಟೇರಿಗೆ 5000 ರುಪಾಯಿಯಂತೆ ಹಣ ವರ್ಗಾವಣೆ
ರಾಜ್ಯದಲ್ಲಿ ಸಣ್ಣ ಮತ್ತು ಅತಿ ಸಣ್ಣ ಪ್ರಮಾಣದ ಭೂ ಹಿಡುವಳಿ ಇರುವ ರೈತರ ಪ್ರಮಾಣ ಶೇಕಡಾ 75ರಷ್ಟು ಇದೆ. ರಾಜ್ಯದ ಕೃಷಿ ಪದ್ಧತಿಯು ಬಹುತೇಕ ಮಳೆಯಾಧಾರಿತ ಆಗಿರುವುದರಿಂದ ತೋಟಗಾರಿಕೆ ಬೆಳೆಗಳ ಪ್ರದೇಶವನ್ನು ವಿಸ್ತರಿಸುವ ಸಾಧ್ಯತೆಗಳು ಹೆಚ್ಚಿವೆ. ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳಲು ಸಣ್ಣ ಮತ್ತು ಅತೀ ಸಣ್ಣ ರೈತರು ಇಚ್ಛಿಸಿದಲ್ಲಿ ಅವರಿಗೆ ಬೀಜ, ರಸಗೊಬ್ಬರ ಖರೀದಿ, ಕೃಷಿ ಕಾರ್ಮಿಕರ ವೆಚ್ಚ ಭರಿಸಲು ಅನುಕೂಲವಾಗುವಂತೆ ಸಮಗ್ರ ಯೋಜನೆಯನ್ನು ರೂಪಿಸಲಾಗುವುದು. ಈ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರು ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿ ವರ್ಗಾವಣೆಗೊಂಡಲ್ಲಿ ಪ್ರತಿ ಹೆಕ್ಟೇರಿಗೆ 5000 ರುಪಾಯಿಯಂತೆ ಗರಿಷ್ಠ 10,000 ರುಪಾಯಿಗಳ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು.
ಮೀನುಗಾರ ಮಹಿಳೆಯರಿಗೆ ವಾಹನ
ಮೀನುಗಾರ ಮಹಿಳೆಯರು ಮೀನು ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಮೀನುಗಾರ ಮಹಿಳೆಯರು ಮೀನು ಇಳಿದಾಣದಿಂದ ಮಾರುಕಟ್ಟೆಗೆ ತ್ವರಿತವಾಗಿ ಮೀನು ಸಾಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ 1000 ಮೀನುಗಾರ ಮಹಿಳೆಯರಿಗೆ "ಮಹಿಳಾ ಮೀನುಗಾರ ಸಬಲೀಕರಣ" ಯೋಜನೆಯ ಮೂಲಕ ದ್ವಿಚಕ್ರ ವಾಹನಗಳನ್ನು ನೀಡಲು ಉದ್ದೇಶಿಸಲಾಗಿದೆ. ಈ ಯೋಜನೆಯನ್ನು ಐದು ಕೋಟಿ ರುಪಾಯಿ ವೆಚ್ಚದಲ್ಲಿ ಅನುಷ್ಠಾನ.
ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ
ಸಹಕಾರ ಕ್ಷೇತ್ರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ರೈತರಿಗೆ ಟ್ರಾಕ್ಟರ್, ಟಿಲ್ಲರ್ ಇತ್ಯಾದಿ ಕೃಷಿ ಯಂತ್ರೋಪಕರಣಗಳ ಖರೀದಿಗೆ ನೀಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳ ಮರುಪಾವತಿ ಅತ್ಯಂತ ಕಡಿಮೆಯಾಗಿದೆ. ಈ ಕಾರಣದಿಂದಾಗಿ ನಮ್ಮ ಸರ್ಕಾರವು ಇಂತಹ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿದೆ. ಈ ಉದ್ದೇಶಕ್ಕಾಗಿ 2020-21ನೇ ಸಾಲಿನಲ್ಲಿ 466 ಕೋಟಿ ರುಪಾಯಿಗಳನ್ನು ಒದಗಿಸಲಾಗುವುದು. ಈ ಯೋಜನೆಯಿಂದಾಗಿ ರಾಜ್ಯದಲ್ಲಿನ 92,000 ರೈತರಿಗೆ ಪ್ರಯೋಜನವಾಗಲಿದೆ.
ಅಡಿಕೆ ಬೆಳೆಗಾರರಿಗೆ ಬಡ್ಡಿ ವಿನಾಯಿತಿ
ಅಡಿಕೆ ಬೆಳೆಗಾರರ ಅಭಿವೃದ್ಧಿಗೆ ಅನುಕೂಲವಾಗಲು ಅಡಿಕೆ ಬೆಳೆಗಾರರ ಪ್ರಾಥಮಿಕ/ಮಾರುಕಟ್ಟೆ ಸಹಕಾರ ಸಂಘಗಳಲ್ಲಿ ಲಭ್ಯವಿರುವ ಹಣಕಾಸಿನ ಮೂಲಗಳಿಂದ ಪ್ರತಿ ರೈತ ಕುಟುಂಬಕ್ಕೆ ನೀಡುವ ದೀರ್ಘಾವಧಿ ಕೃಷಿ ಸಾಲದ ಪೈಕಿ ಗರಿಷ್ಠ ಎರಡು ಲಕ್ಷ ರುಪಾಯಿಗಳವರೆಗಿನ ಸಾಲಕ್ಕೆ ಶೇಕಡಾ 5ರಷ್ಟು ಬಡ್ಡಿ ವಿನಾಯಿತಿ ನೀಡಿ, ಈ ಮೊತ್ತವನ್ನು ಸರ್ಕಾರವೇ ಭರಿಸುತ್ತದೆ.
ಕೃಷಿ ರೈಲ್ ಯೋಜನೆ ಬಳಕೆ
ಕೊಳೆತು ಹೋಗಬಹುದಾದ ಹೂವು, ಟೊಮೆಟೋ, ಆಲೂಗಡ್ಡೆ, ಈರುಳ್ಳಿ, ಹೂಕೋಸು, ದಾಳಿಂಬೆ ಇತ್ಯಾದಿಗಳನ್ನು ಬೆಂಗಳೂರಿನಿಂದ ದೆಹಲಿ, ಮುಂಬಯಿ ಹಾಗೂ ತಿರುವನಂತಪುರಕ್ಕೆ ಸಾಗಿಸಲು ಕೇಂದ್ರ ಸರ್ಕಾರದ ಕೃಷಿ ರೈಲ್ ಯೋಜನೆಯ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲಾಗುವುದು.
ಸಂಚಾರಿ ಹೆಲ್ತ್ ಕ್ಲಿನಿಕ್ ಗಳ ಆರಂಭ
ಕೃಷಿಯಲ್ಲಿ ಕಾಲಕಾಲಕ್ಕೆ ಮಣ್ಣು / ನೀರು ಪರೀಕ್ಷೆ ಮತ್ತು ಇತರೆ ತಾಂತ್ರಿಕ ನೆರವಿಗಾಗಿ "ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಗಳನ್ನು" ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಈ ಸಂಚಾರಿ ಘಟಕಗಳು ಹಳ್ಳಿಗಳಿಗೆ ಭೇಟಿ ನೀಡಿ, ಮಣ್ಣು / ನೀರನ್ನು ಸ್ಥಳದಲ್ಲಿಯೇ ಪರೀಕ್ಷಿಸಿ, ರೈತರ ಮನೆ ಬಾಗಿಲಿನಲ್ಲಿಯೇ ಕೀಟನಾಶಕಗಳ ಹಾಗೂ ರೋಗಗಳ ಬಗ್ಗೆ ತಾಂತ್ರಿಕ ಮಾಹಿತಿಗಳನ್ನು ಹಾಗೂ ಪರಿಹಾರಗಳನ್ನು ಒದಗಿಸಲಿವೆ.
ಪಾಲಿಮರ್ ಲೇಪಿತ ಬೀಜಗಳನ್ನು ಒದಗಿಸಲಾಗುತ್ತದೆ
ಪ್ರಸ್ತುತ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ರೈತರಿಗೆ ಉತ್ತಮ ಗುಣವiಟ್ಟದ ಬೀಜಗಳನ್ನು ಒದಗಿಸಲಾಗುತ್ತಿದೆ. ಅಲ್ಲದೆ, ಹುಟ್ಟುವಳಿ ಖರ್ಚನ್ನು ಕಡಿಮೆ ಮಾಡುವ, ಅಧಿಕ ಮೊಳಕೆ ಒಡೆಯುವ ಸಾಮರ್ಥ್ಯವಿರುವ ಬೀಜಗಳನ್ನು ((Higher Germination Percentage Seeds )ಒದಗಿಸುವ ದೃಷ್ಟಿಯಿಂದ ರಾಸಾಯನಿಕದಿಂದ ಪೂರ್ವ ಸಂಸ್ಕರಿತ ಹಾಗೂ ಪಾಲಿಮರ್ ಲೇಪಿತ ಬೀಜಗಳನ್ನು ಒದಗಿಸುತ್ತದೆ.
ಟೆಫ್, ಚಿಯಾ ಮತ್ತು ಕ್ವಿನೋವಾ ಸಿರಿಧಾನ್ಯಗಳ ಸೇರ್ಪಡೆ
ರಾಜ್ಯದಲ್ಲಿ ಬರ ನಿರೋಧಕ ಬೆಳೆಗಳನ್ನು ಪ್ರೋತ್ಸಾಹಿಸಲು ‘ರೈತ ಸಿರಿ' ಯೋಜನೆಯನ್ನು ಈಗಾಗಲೇ ಘೋಷಿಸಲಾಗಿದೆ. ಈ ಯೋಜನೆಯಡಿ ಪ್ರಮುಖ ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಬೆಳೆಗಳನ್ನು ಬೆಳೆಯಲು ಪ್ರತಿ ಹೆಕ್ಟೇರ್ ಗೆ 10,000 ರುಪಾಯಿಗಳಂತೆ ಗರಿಷ್ಠ 20,000 ರು.ಗಳ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಈ ಯೋಜನೆಯನ್ನು ವಿಸ್ತರಿಸಿ 2020-21ನೇ ಸಾಲಿನಲ್ಲಿ ಟೆಫ್, ಚಿಯಾ ಮತ್ತು ಕ್ವಿನೋವಾ ಸಿರಿಧಾನ್ಯಗಳನ್ನು ಸೇರ್ಪಡೆ ಮಾಡಲಾಗುವುದು.


Click it and Unblock the Notifications