ಕರ್ನಾಟಕ ಬಜೆಟ್ 2020-21ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಸಲುವಾಗಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಏನು ನೀಡಬಹುದು ಎಂಬುದರ ಬಗ್ಗೆ ನಿರೀಕ್ಷೆಯಿತ್ತು. ಆ ಪೈಕಿ ಎಲ್ಲ ಜಿಲ್ಲೆಗಳಲ್ಲೂ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ತಲಾ ಒಂದು ಲಕ್ಷ ರುಪಾಯಿ ನೀಡುವ ನಿರ್ಧಾರ ಬಂದಿದೆ.
ಉಳಿದಂತೆ ಇ ಕಾಮರ್ಸ್ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸುವ ಯುವಕರಿಗೆ ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಬೈಕ್ ಖರೀದಿಗೆ ಇಪ್ಪತ್ತೈದು ಸಾವಿರ ರುಪಾಯಿ ನೀಡಲು ಪ್ರಸ್ತಾಪ ಮಾಡಲಾಗಿದೆ. ಸಾವಿರ ಮಂದಿ ಯುವಕರಿಗೆ ತಲಾ ಇಪ್ಪತ್ತೈದು ಸಾವಿರ ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಒಟ್ಟಿನಲ್ಲಿ ಪರಿಶಿಷ್ಟ ಜಾತಿ/ಪಂಗಡವರಿಗೆ ಘೋಷಿಸಿರುವ ಪ್ರಮುಖ ಯೋಜನೆಗಳ ವಿವರ ಇಲ್ಲಿದೆ.
ಸಣ್ಣ¸ ಸರಕು ಸಾಗಾಣಿಕೆ ವಾಹನಗಳನ್ನು ಖರೀದಿ ಸಾಲದ ಸೌಲಭ್ಯ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ವಾಹನ ಚಾಲನಾ ತರಬೇತಿ ನೀಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಮೂಲಕ ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಳಲ್ಲಿ ವ್ಯವಸ್ಥೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ಸಣ್ಣ¸ ಸರಕು ಸಾಗಾಣಿಕೆ ವಾಹನಗಳನ್ನು ಖರೀದಿಸಲು ಸಾಲದ ಸೌಲಭ್ಯ ಒದಗಿಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ನಿರ್ವಹಿಸುತ್ತಿರುವ ಸಹಕಾರ ಸಂಘಗಳಿಗೆ ಆರ್ಥಿಕ ಚಟುವಟಿಕೆಗಳಿಗಾಗಿ ಪ್ರಸ್ತುತ ನೀಡಲಾಗುತ್ತಿರುವ ಷೇರು ಬಂಡವಾಳವನ್ನು 10 ಲಕ್ಷ ರುಪಾಯಿಗಳಿಂದ 20 ಲಕ್ಷ ರುಪಾಯಿಗಳಿಗೆ ಹೆಚ್ಚಳ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಬಂದವರಿಗೆ ಒಂದು ಲಕ್ಷ
ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರುಪಾಯಿ ನಗದು ಪ್ರಶಸ್ತಿಯನ್ನು ನೀಡಲಾಗುವುದು. ಈ ಉದ್ದೇಶಕ್ಕಾಗಿ 2020- 21ನೇ ಸಾಲಿನಲ್ಲಿ 60 ಲಕ್ಷ ರುಪಾಯಿ ನಿಗದಿ.
ಐದು ಲಕ್ಷ ರು. ಸಹಾಯಧನ 250 ಫಲಾನುಭವಿಗಳಿಗೆ
ಚರ್ಮ ಕುಶಲಕರ್ಮಿಗಳು "ಚರ್ಮ ಶಿಲ್ಪ" ಎಂಬ ಯಂತ್ರಾಧಾರಿತ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಡಾ.ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ಘಟಕ ವೆಚ್ಚ 10 ಲಕ್ಷ ರುಪಾಯಿಗಳಲ್ಲಿ ಐದು ಲಕ್ಷ ರು. ಸಹಾಯಧನವನ್ನು 250 ಫಲಾನುಭವಿಗಳಿಗೆ ನೀಡಲಾಗುವುದು. ಈ ಉದ್ದೇಶಕ್ಕಾಗಿ 2020- 21ನೇ ಸಾಲಿನಲ್ಲಿ 12.50 ಕೋಟಿ ಮೀಸಲಿಡಲಾಗುವುದು.
1000 ಯುವಕರಿಗೆ ಬೈಕ್ ಕೊಳ್ಳಲು 25,000 ರುಪಾಯಿ
ಇ-ವಾಣಿಜ್ಯ ಸಂಸ್ಥೆಗಳ ಉತ್ಪನ್ನಗಳನ್ನು ಸರಬರಾಜು ಮಾಡುವ 1000 ಯುವಕರಿಗೆ ಬೈಕ್ ಕೊಳ್ಳಲು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ತಲಾ 25,000 ರುಪಾಯಿಗಳಂತೆ ಒಟ್ಟು 2.5 ಕೋಟಿ ರುಪಾಯಿಗಳ ಆರ್ಥಿಕ ನೆರವು ನೀಡಲಾಗುವುದು.


Click it and Unblock the Notifications