ಕರ್ನಾಟಕ ಬಜೆಟ್ 2020ರ ಪ್ರಮುಖಾಂಶಗಳಲ್ಲಿ ಈ ವರದಿಯಲ್ಲಿ ಇರುವಂಥವು ಸಹ ಒಳಗೊಂಡಿವೆ. ಗಾರ್ಮೆಂಟ್ ಗಳಲ್ಲಿ ಕೆಲಸ ಮಾಡುವ ಒಂದು ಲಕ್ಷ ಮಹಿಳಾ ಕಾರ್ಮಿಕರಿಗೆ ಬಸ್ ಪಾಸ್ ವಿತರಣೆ ಮಾಡುವುದು, ಒಂದು ಲಕ್ಷ ಮಂದಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತ ಪ್ರೀಪೇಯ್ಡ್ ಹೆಲ್ತ್ ಕಾರ್ಡ್ ವಿತರಣೆ ಸಹ ಇವೆ.
ಇನ್ನು ಮೊಬೈಲ್ ಕ್ಲಿನಿಕ್ ಗಳ ಆರಂಭ, ಕಟ್ಟಡ ಕಾರ್ಮಿಕರ ಆರು ವರ್ಷದೊಳಗಿನ ಮಕ್ಕಳನ್ನು ಪಾಲನೆ ಮಾಡಲು ಸಂಚಾರಿ ಶಿಶುಪಾಲನಾ ಕೇಂದ್ರ ಸೇರಿ ಇತರ ಯೋಜನೆಗಳ ಪ್ರಸ್ತಾವವು ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಘೋಷಣೆಯಲ್ಲಿ ಇವೆ.
ಮಾಸಿಕ 2000 ರುಪಾಯಿಗಳಂತೆ ಶಿಶುಪಾಲನಾ ಭತ್ಯೆ
ಅಂಧ ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸ್ವಾವಲಂಬಿಗಳಾಗಲು ರಾಜ್ಯದ 500 ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೈಲ್, ಬ್ರೈಲ್ ವಾಚ್, ವಾಕಿಂಗ್ ಸ್ಟಿಕ್ ಮತ್ತು ಇನ್ನಿತರೆ ಸಾಧನಗಳನ್ನು ಒಳಗೊಂಡ ತಲಾ 25,000 ರುಪಾಯಿಗಳ ಕಿಟ್ ಗಳನ್ನು ವಿತರಿಸಲಾಗುವುದು. ಈ ಉದ್ದೇಶಕ್ಕಾಗಿ 1.25 ಕೋಟಿ ರುಪಾಯಿಗಳನ್ನು ಒದಗಿಸಲಾಗುವುದು. ಅಂಧ ತಾಯಂದಿರಿಗೆ ಮಾಸಿಕ 2000 ರುಪಾಯಿಗಳಂತೆ ಶಿಶುಪಾಲನಾ ಭತ್ಯೆಯನ್ನು ರಾಜ್ಯ ಸರ್ಕಾರವು ಮಗುವಿನ ಮೊದಲ ಎರಡು ವರ್ಷದವರೆಗೆ ನೀಡುತ್ತಿದೆ. ಈ ಭತ್ಯೆಯನ್ನು ಮಕ್ಕಳ ಮೊದಲ ಐದು ವರ್ಷದವರೆಗೆ ನೀಡಲಾಗುವುದು.
ಉಚಿತ ಪ್ರಿಪೇಯ್ಡ್ ಹೆಲ್ತ್ ಕಾರ್ಡ್
ಒಂದು ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ "ಮುಖ್ಯಮಂತ್ರಿಗಳ ಆರೋಗ್ಯ ಸುರಕ್ಷಾ" ಯೋಜನೆಯಡಿಯಲ್ಲಿ ಅನುಮೋದಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುವಾಗುವಂತೆ "ಉಚಿತ ಪ್ರಿಪೇಯ್ಡ್ ಹೆಲ್ತ್ ಕಾರ್ಡ್"ಗಳನ್ನು ವಿತರಿಸಲಾಗುವುದು.
ಮಹಿಳಾ ಕಾರ್ಮಿಕರಿಗೆ ಮಾಸಿಕ ಬಸ್ ಪಾಸ್
ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಲಕ್ಷ ಮಹಿಳಾ ಕಾರ್ಮಿಕರಿಗೆ "ವನಿತಾ ಸಂಗಾತಿ" ಯೋಜನೆಯಡಿ ಮಾಸಿಕ ಬಸ್ ಪಾಸ್ ಗಳನ್ನು ಕಾರ್ಖಾನೆಯ ಮಾಲೀಕರು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಯೋಗದೊಂದಿಗೆ ಒದಗಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗೆ 2020-21ನೇ ಸಾಲಿನಲ್ಲಿ 25 ಕೋಟಿ ರುಪಾಯಿ ಮೊತ್ತದ ಅನುದಾನವನ್ನು ಮೀಸಲಿಡಲಾಗಿದೆ.
ಮೊಬೈಲ್ ಕ್ಲಿನಿಕ್ ಗಳ ಪ್ರಾರಂಭ
ನಗರ ಪ್ರದೇಶಗಳಲ್ಲಿ ದುಡಿಯುತ್ತಿರುವ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರಿಗೆ ಆರೋಗ್ಯ ರಕ್ಷಣೆ ನೀಡುವ ದೃಷ್ಟಿಯಿಂದ 10 "ಮೊಬೈಲ್ ಕ್ಲಿನಿಕ್"ಗಳನ್ನು ಪ್ರಾರಂಭಿಸಲಾಗುವುದು. ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ ಆರು ವರ್ಷದೊಳಗಿನ ಮಕ್ಕಳ ಪಾಲನೆ ಪೋಷಣೆ ಮಾಡಲು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ 10 ಸಂಚಾರಿ ಶಿಶುಪಾಲನಾ ಕೇಂದ್ರಗಳನ್ನು ಒಳಗೊಂಡಂತೆ ಒಟ್ಟು 110 "ಕಿತ್ತೂರು ರಾಣಿ ಚೆನ್ನಮ್ಮ" ಶಿಶು ಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.


Click it and Unblock the Notifications